ಗಾಂಧಿ ಜಯಂತಿ: ಚಾಮರಾಜನಗರದಲ್ಲಿ ಡಿಸಿ, ಎಸ್ಪಿ, ಸ್ವಾಮೀಜಿಯಿಂದ ರಕ್ತದಾನ
ಚಾಮರಾಜನಗರ, ಅಕ್ಟೋಬರ್, 02: ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ ಹಿನ್ನೆಲೆ ಆಯೋಜಿಸಿದ್ದ ರಕ್ತದಾನ ಕಾರ್ಯಕ್ರಮದಲ್ಲಿ ಡಿಸಿ, ಎಸ್ಪಿ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಚಾಮರಾಜನಗರದ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ವಿವಿಧ ಸಂಘ-ಸಂಸ್ಥೆಗಳು ಆಯೋಜಿಸಿದ್ದ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ರಕ್ತದಾನ ಮಾಡುವ ಮೂಲಕವೇ ಉದ್ಘಾಟನೆ ಮಾಡಿದ್ದಾರೆ. ಇವರಷ್ಟೇ ಅಲ್ಲದೇ ಹರವೆ ಮಠದ ಸರ್ಪಭೂಷಣ ಸ್ವಾಮೀಜಿ, ಕೆಆಆರ್‌ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದ್ದಾರೆ.

ರಕ್ತದಾನ ಮಾಡಿದ ಬಳಿಕ ಡಿಸಿ ಶಿಲ್ಪಾನಾಗ್ ಮಾತನಾಡಿ, ಮಹಾತ್ಮ ಗಾಂಧೀಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವುದರ ಜೊತೆಗೆ ಬಡತನ, ಹಿಂಸೆ, ದಾರಿದ್ರ, ಅವಮಾನಗಳ ವಿರುದ್ಧ ಹೋರಾಡಿದರು ಎಂದು ಹೇಳಿದರು.
ಇನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಹಾಲಿನ ಉತ್ಪನ್ನಗಳಿಗೆ ಹೆಚ್ಚು ಒತ್ತು ನೀಡಿ, ಹಸಿರು ಕ್ರಾಂತಿಯನ್ನು ಮಾಡುವ ಮೂಲಕ ಆಹಾರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದರು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತತ್ವ, ಆದರ್ಶಗಳು ದಾರಿ ದೀಪವಾಗಿದೆ ಎಂದು ಹೇಳಿದರು.
ಕಿವಿ, ಬಾಯಿ, ಕಣ್ಣು ಮುಚ್ಚಿ ಪ್ರತಿಭಟನೆ
ಗಾಂಧಿ ಜಯಂತಿ ಹಿನ್ನೆಲೆ ಮಹಾತ್ಮ ಸಾರಿದ ಸಂದೇಶವನ್ನು ಸಾರಿ ಕಾವೇರಿಗಾಗಿ ಇಂದು ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳು ಮೌನ ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಗಾಂಧಿ ಚಿತ್ರ ಹಿಡಿದು ರಸ್ತೆ ತಡೆ ನಡೆಸಿ ಕಿವಿ, ಕಣ್ಣು, ಬಾಯಿಯನ್ನು ಮುಚ್ಚಿಕೊಂಡು ಮೌನ ಪ್ರತಿಭಟನೆ ನಡೆಸಿದರು.
ಅಹಿಂಸೆ ಮೂಲಕ ಮಹಾತ್ಮ ಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅದರಂತೆ ಗಾಂಧಿ ಜಯಂತಿ ದಿನದಂದು ಜೀವನದಿ ಕಾವೇರಿಗಾಗಿ ಇಂದು ನಾವು ಮೌನ ಪ್ರತಿಭಟನೆ ನಡೆಸುತ್ತಿದ್ದೇವೆ. ಕರ್ನಾಟಕಕ್ಕೆ ಕೆಟ್ಟದ್ದಾಗುವುದನ್ನು ನಾವು ನೋಡುವುದಿಲ್ಲ, ಕೇಳುವುದಿಲ್ಲ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಿ ರಾಜ್ಯದ ಜನರಿಗೆ ಸರ್ಕಾರ ಒಳ್ಳೆಯ ಸಂದೇಶ ಸಾರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಇನ್ನು ಪ್ರತಿಭಟನೆ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ತಾಸು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.












Click it and Unblock the Notifications