ಅರಣ್ಯ ಅಧಿಕಾರಿಗಳಿಂದಲೇ ವಾಹನಶೆಡ್ ಗೆ ಕಾಡುಮರ ಬಳಕೆ!

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಸೆಪ್ಟೆಂಬರ್ 6: ಅರಣ್ಯದಲ್ಲಿರುವ ಗಿಡಗಳನ್ನು ಕಡಿದು, ಅಧಿಕಾರಿಯೊಬ್ಬರು ವಾಹನ ಶೆಡ್ ನಿರ್ಮಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ನಡೆದಿದೆ.

ಕುಂದಕೆರೆ ಅರಣ್ಯ ವಲಯದ ವಲಯಾರಣ್ಯಾಧಿಕಾರಿ ಕಚೇರಿಯ ವಾಹನಶೆಡ್ ನಿರ್ಮಿಸಲು ಬೆಲೆ ಬಾಳುವ ಕಾಡು ಜಾತಿಯ ಮರಗಳನ್ನು ಬಳಸಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.[ಬಂಡೀಪುರದಲ್ಲಿ ಅರಣ್ಯಾಧಿಕಾರಿಗಳಿಗೆ ಜಿಂಕೆ ಮಾಂಸ, ಮದ್ಯ ಪೂರೈಸಿದರೆ?]

Forest tree used to construct a shed

ಕುಂದಕೆರೆ ವಲಯ ಅರಣ್ಯ ವಲಯ ಕಚೇರಿಯು ಲೊಕ್ಕೆರೆ ಅರಣ್ಯದ ಪ್ರದೇಶದಲ್ಲಿದ್ದು, ಇಲ್ಲಿ ಕುಂದಕೆರೆ ವಲಯ ಅರಣ್ಯಾಧಿಕಾರಿಯ ಕಚೇರಿ ಮತ್ತು ವಸತಿಗೃಹ ಎರಡಕ್ಕೂ ಈ ಕಟ್ಟಡವನ್ನು ಬಳಸಲಾಗುತ್ತಿದೆ. ಇಲ್ಲಿ ವಾಹನಶೆಡ್ ನಿರ್ಮಿಸಲು ಮತ್ತು ಕಚೇರಿ ಬಳಕೆಯ ಕೆಲವು ಪೀಠೋಪಕರಣಗಳನ್ನು ಕಾಡು ಜಾತಿಯ ಹಸಿ ಮರಗಳನ್ನು ಕಡಿದು ನಿರ್ಮಿಸಲಾಗಿದೆ.

ಹುಲಿ ಯೋಜನೆ ವ್ಯಾಪ್ತಿಯಲ್ಲಿ ಈ ರೀತಿ ಮಾಡುವುದು ಅಪರಾಧವಾಗಿದೆ. ಈ ಬಗ್ಗೆ ಸೂಕ್ತ ಕಾನೂನಿನ ತಿಳಿವಳಿಕೆ ಇದ್ದರೂ ವಲಯ ಅರಣ್ಯಾಧಿಕಾರಿ ಈ ಕಾರ್ಯ ಎಸಗಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ.[ಬಂಡೀಪುರದಲ್ಲಿ 'ಪ್ರಿನ್ಸ್' ಹುಲಿ ಕಂಡಾಗ ಕುಪ್ಪಳಿಸಿದ ಮನ]

Forest tree used to construct a shed

ಹುಲಿ ಯೋಜನೆ ಜಾರಿಯಲ್ಲಿರುವ ಅರಣ್ಯ ಪ್ರದೇಶಗಳಲ್ಲಿ ಅರಣ್ಯದೊಳಗಿನ ಸಂಪನ್ಮೂಲಗಳನ್ನು ಬಳಸಲು ಅನುಮತಿಯೇ ಇಲ್ಲ ಎಂಬ ಸಂಗತಿಯನ್ನು ಈ ಹಿಂದೆ ಅರಣ್ಯಾಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಹುಲಿ ಯೋಜನೆ ವ್ಯಾಪ್ತಿಯಲ್ಲಿ ಅರಣ್ಯ ಪ್ರವೇಶಿಸಬೇಕಾದಲ್ಲಿ ಅಧಿಕಾರಿಗಳ ಅನುಮತಿ ಕಡ್ಡಾಯ. ಬಂಡೀಪುರ ಅರಣ್ಯ ವಲಯದಲ್ಲಿ ಕೆಲ ಸಮಯದ ಹಿಂದೆ ಅನುಮತಿ ಇಲ್ಲದೇ ಅರಣ್ಯ ಪ್ರವೇಶಿಸಿದ್ದ ಜೋಡಿಯೊಂದನ್ನು ಬಂಧಿಸಿ, ಅರಣ್ಯಾಧಿಕಾರಿಗಳು ದಂಡ ವಿಧಿಸಿದ್ದರು.[ಬಂಡೀಪುರದಲ್ಲಿ ಸರಸ-ಸಲ್ಲಾಪದಲ್ಲಿದ್ದ ಪ್ರೇಮಿಗಳ ಮೇಲೆ ಕೇಸು]

ಸಾರ್ವಜನಿಕರಿಗೆ ಕಾನೂನಿನ ಪಾಠ ಮಾಡುವ ಅಧಿಕಾರಿಗಳೆ ಮಾಡಿರುವ ಈ ಕಾರ್ಯದ ಬಗ್ಗೆ ಕಾಡಂಚಿನ ಚಿರಕನಹಳ್ಳಿ, ಕಡಬೂರು, ಕುಂದಕೆರೆ ಮುಂತಾದ ಗ್ರಾಮಗಳ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾನುವಾರುಗಳ ಮೇವಿಗಾಗಿ ಇನ್ನಿತರ ಕೆಲಸಗಳಿಗಾಗಿ ಅರಣ್ಯ ಹೊಕ್ಕವರನ್ನು ಬಂಧಿಸುವ ಅಧಿಕಾರಿಗಳ ಈ ಕಾರ್ಯ ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Forest tree used to construct a shed by forest officer in Bandipur national park, Chamarajanagar. Costly trees used to construct a vehicle shed for Kundakere RFO office. People who are residing near the forest, angry on officers who are voilate the rules.
Please Wait while comments are loading...