Constitution Awareness: ಸಂವಿಧಾನ ಜಾಗೃತಿ ಜಾಥಾದಲ್ಲಿ ಚಾಮರಾಜನಗರಕ್ಕೆ ಪ್ರಥಮ ಸ್ಥಾನ
ಚಾಮರಾಜನಗರ, ಫೆಬ್ರವರಿ 24: ಭಾರತ ಸಂವಿಧಾನ ಅಂಗೀಕಾರಗೊಂಡು 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಂಚರಿಸಿದ ಚಾಮರಾಜನಗರ ಜಿಲ್ಲೆಯ ಸಂವಿಧಾನ ಜಾಗೃತಿ ಸ್ತಬ್ಧ ಚಿತ್ರಕ್ಕೆ ಮೈಸೂರು ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಬಂದಿದೆ.
ಸ್ತಬ್ದ ಚಿತ್ರದ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುಳಿತಿರುವ ಪ್ರತಿಮೆಯನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ. ಸಂವಿಧಾನ ಪೀಠಿಕೆಯನ್ನು ಪುಸ್ತಕದ ಮಾದರಿಯಲ್ಲಿ ಪ್ರದರ್ಶಿಸಲಾಗಿದೆ. ಬಸವತತ್ವ, ಸಾವಿತ್ರಿ ಜ್ಯೋತಿಬಾಪುಲೆ, ನಾಲ್ವಡಿ ಕೃಷ್ಣರಾಜ ಒಡೆಯರ್‍ರವರ ಕೊಡುಗೆ ಸೇರಿದಂತೆ ಜಿಲ್ಲೆಯ ಪ್ರಮುಖ ಕೊಡುಗೆಗಳನ್ನು ಸ್ತಬ್ಧ ಚಿತ್ರದಲ್ಲಿ ಸ್ಮರಿಸಲಾಗಿದೆ.

ಸಂವಿಧಾನಿಕ ಹಕ್ಕುಗಳ ಸಂರಕ್ಷಣೆ ಸಂದೇಶ, ವನ್ಯಜೀವಿ ಪ್ರಕೃತಿ ಸಂರಕ್ಷಣೆ ಸಂದೇಶ, ಇನ್ನಿತರ ವೈಶಿಷ್ಟ್ಯಗಳನ್ನು ಸ್ತಬ್ಧ ಚಿತ್ರ ಒಳಗೊಂಡಿದೆ. ಇದರೊಂದಿಗೆ ರಾಜ್ಯ ಸರ್ಕಾರ ಸಾಕಾರಗೊಳಿಸಿದ ಐದು ಗ್ಯಾರಂಟಿ ಯೋಜನೆಗಳನ್ನು ಸ್ತಬ್ಧ ಚಿತ್ರದಲ್ಲಿ ಪ್ರದರ್ಶಿಸಲಾಗಿದೆ.
ಕಳೆದ ಜನವರಿ 26ರಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಎರಡು ಸಂವಿಧಾನ ಜಾಗೃತಿ ಸ್ತಬ್ದ ಚಿತ್ರಗಳಿಗೆ ಚಾಲನೆ ದೊರೆತು ಜಿಲ್ಲೆಯ 130 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಸ್ತಬ್ಧ ಚಿತ್ರ ಸಂಚರಿಸಿದೆ. ನಗರ ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಅದ್ದೂರಿ ಸ್ವಾಗತ ನೀಡಿ ಜನತೆ ಹಬ್ಬದಂತೆ ಸಂಭ್ರಮಿಸಿದ್ದಾರೆ. ಜನರಿಂದ ಸಂವಿಧಾನ ಜಾಗೃತಿಗೆ ಅಭೂತಪೂರ್ವ ಬೆಂಬಲ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೈಸೂರು ವಿಭಾಗ ಮಟ್ಟದಲ್ಲಿ ಚಾಮರಾಜನಗರ ಜಿಲ್ಲೆಯ ಸಂವಿಧಾನ ಜಾಗೃತಿ ಸ್ತಬ್ಧ ಚಿತ್ರ ಪ್ರಥಮ ಸ್ಥಾನಕ್ಕೆ ಪಾತ್ರವಾಗಿದೆ.

ವಿಶೇಷ ಚೇತನರ ಶಾಲೆಗೆ ನೆರವು ನೀಡಲು ಬಂದ ಉದ್ಯಮಿ ಆರ್ಯಮನ್
ಚಾಮರಾಜನಗರ: ಯುವ ಉದ್ಯಮಿ ಆರ್ಯಮನ್ ಎಂಬವರು ಅಜ್ಜಿ ಊರಾದ ಕೊಳ್ಳೆಗಾಲದ ಸೆವೆನ್ತ್-ಡೇ ಅಡ್ವೆಂಟಿಸ್ಟ್ ಸ್ಕೂಲ್ ಫಾರ್ ಸ್ಪೀಚ್ ಆ್ಯಂಡ್ ಹಿಯರಿಂಗ್ (Seventh-Day Adventist School for Speech and Hearing) ಶಾಲೆಗೆ ಕ್ರೀಡಾ ಪರಿಕರಗಳು ಸೇರಿದಂತೆ ಹಲವು ವಸ್ತುಗಳನ್ನು ವಿತರಿಸಿದರು.
ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಜಪಾನ್ ಸಹಪಾಠಿಗಲ ಹಾಗೂ ತಾಯಿ ಸುನೀತಾ ತಿಮ್ಮೇಗೌಡ ಜೊತೆ ಕೊಳ್ಳೆಗಾಲಕ್ಕೆ ಬಂದಿಳಿದು ಸೆವೆನ್ತ್-ಡೇ ಅಡ್ವೆಂಟಿಸ್ಟ್ ಸ್ಕೂಲ್ ಫಾರ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಶಾಲೆಗೆ ಭೇಟಿ ನೀಡಿ ಅವರೊಂದಿಗೆ ಸಮಯ ಕಳೆದರು. ಬಳಿಕ ಅಗತ್ಯ ಕ್ರೀಡಾ ಪರಿಕರಗಳನ್ನು ಆಶ್ರಮದ ಮಕ್ಕಳಿಗಾಗಿ ವಿತರಿಸಿ ಅವರ ಜೊತೆ ಆಟ ಆಡಿ ಗಮನ ಸೆಳೆದಿದ್ದಾರೆ.
ಯುವ ಉದ್ಯಮಿ ಆರ್ಯಮನ್ ಅವರು 11ನೇ ವರ್ಷದಲ್ಲಿ ಸಿಂಗಾಪುರಕ್ಕೆ ಶಿಕ್ಷಣಕ್ಕಾಗಿ ತೆರಳಿದ್ದರು. ವಿದ್ಯಾಭ್ಯಾಸದ ಅವಧಿಯಲ್ಲೇ ಅವರು ಉದ್ಯಮ ಕ್ಷೇತ್ರಕ್ಕೆ ಧುಮುಕಿದ್ದರು. 13ನೇ ವರ್ಷದಲ್ಲಿ ಅವರು ಲಿಮಿಟೆಡ್ ಎಡಿಷನ್ ಶೂಗಳ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟು ಆದಾಯ ಗಳಿಕೆ ಆರಂಭಿಸಿದರು. ವಿದ್ಯಾಭ್ಯಾಸದ ಜತೆಗೆ ಕಠಿಣ ಪರಿಶ್ರಮದ ಪಟ್ಟ ಅವರು ನಿಧಾನವಾಗಿ ತಮ್ಮ ಉದ್ಯಮವನ್ನು ಲಾಭದಾಯಕವಾಗಿ ಪರಿವರ್ತಿಸಿದರು. ವರ್ಷದಿಂದ ವರ್ಷಕ್ಕೆ ಲಾಭ ಹೆಚ್ಚಿಸಿದ ಅವರು ಇದೀಗ 1,000 ಕೋಟಿ ರೂಪಾಯಿ ವಹಿವಾಟು ನಡೆಸುವ ಉದ್ಯಮಿಯಾಗಿದ್ದಾರೆ .
ಒಟ್ಟಿನಲ್ಲಿ ಇದೀಗ ಸ್ವಂತ ಸಂಪಾದನೆಯಲ್ಲಿ ಅಜ್ಜಿ ಸಾವಿತ್ರಮ್ಮ ತಿಮ್ಮೇಗೌಡ ಅವರ ಊರಾಗಿರುವ ಕೊಳ್ಳೆಗಾಲದ ಸೆವೆನ್ತ್-ಡೇ ಅಡ್ವೆಂಟಿಸ್ಟ್ ಸ್ಕೂಲ್ ಫಾರ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಕೇಂದ್ರದ ಮಕ್ಕಳಿಗೆ ಕ್ರೀಡಾಪರಿಕರಗಳನ್ನು ವಿತರಿಸಿದ್ದಾರೆ. ಮುಂದಿನ ದಿನಗಳಲ್ಲೂ ನೆರವು ನೀಡುವ ಭರವಸೆ ನೀಡಿದ್ದಾರೆ.











Click it and Unblock the Notifications