ಕೊಳ್ಳೇಗಾಲದಲ್ಲಿ ವಿದ್ಯುತ್ ದುರಂತ, ತಂದೆ ಸಾವು, ಮಗ ಸಜೀವ ದಹನ

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಡಿಸೆಂಬರ್ 12: ಮನೆ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಅಗ್ನಿ ಅವಘಡ ಸಂಭವಿಸಿ, ತಂದೆ, ಮಗ ಸಜೀವ ದಹನಗೊಂಡ ಘಟನೆ ಕೊಳ್ಳೇಗಾಲ ತಾಲೂಕಿನ ಧನಗೆರೆ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಧನಗೆರೆ ಗ್ರಾಮದ ವೆಂಕಟರಮಣ (65) ಸಾವನ್ನಪ್ಪಿದ್ದರೆ, ಮಗ ವೆಂಕಟೇಶ್ (35) ಸಜೀವ ದಹನವಾಗಿದ್ದಾರೆ.

ವೆಂಕಟರಮಣ ಅವರು ಧನಗೆರೆಯಲ್ಲಿ ಮನೆಯೊಂದನ್ನು ನಿರ್ಮಿಸುತ್ತಿದ್ದರು. ಹಗಲಿಡೀ ಮನೆ ಬಳಿಯಿದ್ದು, ಕೆಲಸ ನೋಡಿಕೊಳ್ಳುತ್ತಿದ್ದ ಅವರು ರಾತ್ರಿಯಾಗುತ್ತಿದ್ದಂತೆಯೇ ಹೊರವಲಯದಲ್ಲಿರುವ ತೋಟದ ಮನೆಯಲ್ಲಿ ನಿರ್ಮಿಸಿರುವ ಗುಡಿಸಲಿನಲ್ಲಿ ಮಲಗುತ್ತಿದ್ದರು. ಇದು ಕೆಲವು ದಿನಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿತ್ತು.[ಗ್ರಾಪಂ ಅಧ್ಯಕ್ಷೆಯಿಂದ ಒಂದೇ ದಿನದಲ್ಲಿ ಶೌಚಾಲಯ ಸಿದ್ಧ!]

Father and son died in electrical tragedy

ಅದೇ ರೀತಿ ರಾತ್ರಿ ತನಕ ಕೆಲಸ ಮಾಡಿದ್ದ ತಂದೆ- ಮಗ ಗುಡಿಸಲಿಗೆ ತೆರಳಿ ಊಟ ಮಾಡಿ, ಮಲಗಿದ್ದರು. ಹಗಲು ಕೆಲಸ ಮಾಡಿದ್ದರಿಂದ ಬಳಲಿ ಬೆಂಡಾಗಿದ್ದವರು ಗಾಢ ನಿದ್ದೆಗೆ ಜಾರಿದ್ದಾರೆ. ಅವರು ಮಲಗಿದ್ದ ಗುಡಿಸಲ ಮೇಲೆಯೇ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿದ್ದು, ತಂತಿ ತುಂಡಾಗಿ ಗುಡಿಸಲ ಮೇಲೆ ಬಿದ್ದಿದೆ.

ಪರಿಣಾಮ ವಿದ್ಯುತ್ ಸ್ಪರ್ಶವಾಗಿ, ಗುಡಿಸಲು ಹೊತ್ತಿ ಉರಿದಿದೆ. ಬೆಂಕಿ ಆವರಿಸಿ ಉರಿಯುತ್ತಿದ್ದರೂ ನಿದ್ದೆಯಲ್ಲಿದ್ದ ವೆಂಕಟರಮಣ ಮತ್ತು ವೆಂಕಟೇಶ್ ಅವರಿಗೆ ಎಚ್ಚರವಾಗಿಲ್ಲ. ಬೆಂಕಿಯ ಕೆನ್ನಾಲಗೆ ಇಡೀ ಗುಡಿಸಲನ್ನು ಆವರಿಸಿದ್ದರಿಂದ ಎದ್ದು ಹೊರಗೆ ಬರುವ ಪ್ರಯತ್ನವನ್ನು ವೆಂಕಟರಮಣ ಅವರು ಮಾಡಿದರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.[ಅರಣ್ಯ ಇಲಾಖೆಗೆ ಸೆಡ್ಡು ಹೊಡೆದು ಬಂಡೀಪುರ ವ್ಯಾಪ್ತಿಯಲ್ಲಿ ರೆಸಾರ್ಟ್?]

ಆದರೆ ಮಗ ವೆಂಕಟೇಶ್ ಮಾತ್ರ ಬೆಂಕಿಗೆ ಸಿಲುಕಿ ಸಜೀವ ದಹನಗೊಂಡಿದ್ದಾರೆ. ಬೆಳಗ್ಗೆ ವಿಷಯ ಬೆಳಕಿಗೆ ಬಂದಿದ್ದು, ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದಾರೆ. ಕುಟುಂಬದ ಇತರೆ ಸದಸ್ಯರು ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲೇ ಮಲಗಿದ್ದರಿಂದ ಅವರು ಬದುಕುಳಿದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Father and son died in an electrical tragedy in outskirt of Dhanagere village, Kollegal taluk, Chamarajanagar District.
Please Wait while comments are loading...