Bandipur: ಬಂಡೀಪುರದಲ್ಲಿ ಹುಲಿಗಳ ದರ್ಶನ: ಪ್ರವಾಸಿಗರಿಗೆ ಖುಷಿಯೋ ಖುಷಿ!
ಚಾಮರಾಜನಗರ, ಜನವರಿ 1: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಮಾಡುವುದು ಪ್ರಾಣಿಪ್ರಿಯರಿಗೆ ಎಲ್ಲಿಲ್ಲದ ಖುಷಿ. ಹೀಗಾಗಿಯೇ ಹಲವರು ಆಗಾಗ್ಗೆ ಪ್ರಾಣಿಗಳನ್ನು ಅದರಲ್ಲೂ ಹುಲಿಯನ್ನು ನೋಡುವ ಸಲುವಾಗಿ ಸಫಾರಿಗೆ ಬರುತ್ತಾರೆ. ಹೀಗೆ ಬಂದವರಿಗೆ ಕೆಲವೊಮ್ಮೆ ಹುಲಿಗಳು ದರ್ಶನ ನೀಡದೆ ನಿರಾಸೆ ಮಾಡಿಬಿಡುತ್ತವೆ. ಇನ್ನೊಮ್ಮೆ ನಿರೀಕ್ಷೆಗೂ ಮೀರಿ ದರ್ಶನ ನೀಡಿ ಖುಷಿ ಕೊಡುತ್ತವೆ. ಇದೀಗ ತಾಯಿ ಹುಲಿಯೊಂದು ತನ್ನ ಮರಿಗಳೊಂದಿಗೆ ಪ್ರವಾಸಿಗರಿಗೆ ದರ್ಶನ ನೀಡಿದ್ದು ಈ ಅಪರೂಪದ ದೃಶ್ಯ ನೋಡುಗರ ಮನಸೆಳೆಯುತ್ತಿದೆ.
ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ಹೋಗಿ ಹುಲಿಯನ್ನೇ ನೋಡದಿದ್ದರೆ ಆ ಸಫಾರಿ ಅರ್ಥಪೂರ್ಣವಾಗಲಾರದು ಆದರೆ ಒಂದಕ್ಕಿಂತ ಹೆಚ್ಚು ಹುಲಿಗಳು ಕಾಣಿಸಿದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ. ಸಾಮಾನ್ಯವಾಗಿ ಬಂಡೀಪುರಕ್ಕೆ ಆಗಮಿಸುವ ಪ್ರವಾಸಿಗರು ಜಿಲ್ಲೆಯ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಮಾಡುವಾಗ ಹುಲಿಗಳ ದರ್ಶನಕ್ಕಾಗಿ ಹಾತೊರೆಯುತ್ತಾರೆ. ಇದೀಗ ವರ್ಷಾಂತ್ಯದಲ್ಲಿ ಸಫಾರಿಗೆ ಹೋದವರಿಗೆ ಒಂದಲ್ಲ ಐದು ಹುಲಿ ಕಾಣಿಸಿಕೊಂಡಿದ್ದು ಇದನ್ನು ನೋಡಿದವರು ಫಿದಾ ಆಗಿದ್ದಾರೆ.

ತಾಯಿ ಹುಲಿ ನೀರು ಕುಡಿಯುತ್ತಿದ್ದರೆ ಮರಿ ಹುಲಿಗಳು ಪಕ್ಕದಲ್ಲಿ ನಿಂತು ನೀರನ್ನೇ ವೀಕ್ಷಿಸುತ್ತಿವೆ. ಈ ದೃಶ್ಯವನ್ನು ಸಫಾರಿಗೆ ತೆರಳಿದವರು ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ತೇಲಿ ಬಿಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಮೂರುಕರೆ ಬಳಿ ಏಕಕಾಲದಲ್ಲಿ ಐದು ಹುಲಿಗಳ ದರ್ಶನ ಮಾಡಿದ್ದು, ತನ್ನ ನಾಲ್ಕು ಮರಿಗಳ ಜೊತೆ ತಾಯಿ ಹುಲಿ ವಿಹರಿಸುವ ಅದ್ಭುತವಾಗಿದೆ. ಸಫಾರಿಯಲ್ಲಿದ್ದ ಪ್ರವಾಸಿಗರ ಮೊಬೈಲ್ ನಲ್ಲಿ ಈ ದೃಶ್ಯ ಸೆರೆಯಾಗಿದ್ದು . ಅಪರೂಪಕ್ಕೆ ಕಾಣಿಸಿದ ಈ ದೃಶ್ಯ ಪ್ರಾಣಿಪ್ರಿಯರ ಮನಸೆಳೆಯುತ್ತಿದೆ.
ತಾಯಿ ಹುಲಿಯೊಂದಿಗೆ ಮರಿಗಳ ಆಟ
ಸಫಾರಿಗೆ ತೆರಳಿದವರಿಗೆ ಅರಣ್ಯದಲ್ಲಿ ಕೆಲವೊಮ್ಮೆ ಹುಲಿಗಳು ಕಾಣ ಸಿಗುತ್ತವೆಯಾದರೂ ನಾಲ್ಕು ಮರಿಯೊಂದಿಗೆ ತಾಯಿ ಹುಲಿ ಕಾಣಿಸುವುದುನ ಅಪರೂಪವೇ.. ಕೆಲವೊಂದು ಸಲ ಅಲ್ಲೊಂದು ಇಲ್ಲೊಂದು ಹುಲಿ ನೋಡಲು ಸಿಗುತ್ತದೆ. ಉಳಿದಂತೆ ಹೆಚ್ಚಾಗಿ ಜಿಂಕೆಗಳೇ ಕಾಣಿಸುತ್ತವೆ. ಆದರೀಗ ಬಿಸಿಲ ತಾಪಕ್ಕೆ ದಾಹ ತೀರಿಸಿಕೊಳ್ಳಲು ನೀರು ಕುಡಿಯಲು ಬಂದ ವೇಳೆ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ಬಾರಿಯ ಮುಂಗಾರು ಮತ್ತು ಹಿಂಗಾರು ಉತ್ತಮ ಮಳೆಯನ್ನು ನೀಡಿರುವುದರಿಂದ ಅರಣ್ಯದೊಳಗಿರುವ ಕೆರೆಕಟ್ಟೆಗಳಲ್ಲಿ ಜೀವಜಲವಿದ್ದು, ಪ್ರಾಣಿಗಳು ನೆಮ್ಮದಿಯುಸಿರು ಬಿಡುವಂತೆ ಮಾಡಿದೆ.

ಬೇಸಿಗೆಯ ದಿನಗಳು ಬರುತ್ತಿರುವುದರಿಂದ ಕೆರೆ ಕಟ್ಟೆಗಳಲ್ಲಿ ನೀರು ಕಾಣಿಸದೆ ಹೋದರೆ ವನ್ಯಪ್ರಾಣಿಗಳು ನೀರನ್ನು ಅರಸಿಕೊಂಡು ಬೇರೆಡೆಗೆ ತೆರಳುವ ಸಾಧ್ಯತೆಯಿರುತ್ತದೆ. ಆದರೆ ಈ ಬಾರಿ ದೇವರ ದಯೆಯಿಂದ ಮಳೆ ಸುರಿದು ಕೆರೆಕಟ್ಟೆಗಳಲ್ಲಿ ನೀರು ಅಲೆಯಾಡುತ್ತಿದೆ. ಹಾಗೆಯೇ ಅರಣ್ಯದ ಮಧ್ಯೆ ಹರಿಯುವ ಮೂಲೆಹೊಳೆಯಲ್ಲಿಯೂ ನೀರಿದೆ. ಹೀಗಾಗಿ ಬೇಸಿಗೆಯ ಈ ಸಮಯದಲ್ಲಿ ಕೆರೆಕಟ್ಟೆ, ಹೊಳೆ ಹೀಗೆ ನೀರು ಇರುವ ಪ್ರದೇಶದಲ್ಲಿ ಪ್ರಾಣಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಬಂದರೆ ಬೇಸಿಗೆಯಲ್ಲಿ ಉಂಟಾಗುವ ಹತ್ತು ಹಲವು ಸಮಸ್ಯೆಗೆ ಪರಿಹಾರ ಸಿಗಲಿದೆ.
ಸದ್ಯ ಬಂಡೀಪುರ ಅರಣ್ಯ ವ್ಯಾಪ್ತಿಯ ಕಾಡಂಚಿನ ಹಂಗಳದ ಹಿರಿಕೆರೆ, ಬರಗಿ ಕೆರೆ, ಹಾಗೂ ಬೇರಂಬಾಡಿಯ ಕೆಂಪುಸಾಗರ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಹಾಗೆಯೇ ಬಂಡೀಪುರ ವಲಯದ ಮೂರ್ಕೆರೆ, ಗೋಪಾಲಸ್ವಾಮಿಬೆಟ್ಟ ವಲಯದ ಗಾರೇಪಾಲ, ತಾವರೆಕಟ್ಟೆ ಕೆರೆಗಳು ಮತ್ತು ಹಿರಿಕೆರೆ, ಓಂಕಾರ್ ವಲಯದ ಸೌತ್ ಕೆರೆ, ನಾರ್ಥ್ ಕೆರೆ, ಶಾಂತೇಗೌಡನಕಟ್ಟೆ, ಹಂದಿಕಟ್ಟೆ, ಕುಂದಕೆರೆ, ಮದ್ದೂರು ವಲಯಗಳಲ್ಲಿರುವ ಕೆರೆಗಳಲ್ಲಿ ನೀರಿನ ಸಂಗ್ರಹವಿರುವುದರಿಂದ ಬೇಸಿಗೆಯಲ್ಲಿ ವನ್ಯ ಪ್ರಾಣಿಗಳಿಗೆ ನೀರಿನ ಸಮಸ್ಯೆಯಾಗಲಾರದು.
ಹಾಗೆಯೇ ಅರಣ್ಯದಲ್ಲಿ ನೀರು ಲಭ್ಯವಿರುವ ಕಾರಣ ಪ್ರಾಣಿಗಳು ಮೇವು ಮತ್ತು ನೀರು ಹುಡುಕುಕೊಂಡು ದೂರ ತೆರಳದೆ ಇರುವುದರಿಂದ ಸಫಾರಿಗೆ ಬರುವವರಿಗೆ ಹುಲಿ ಸೇರಿದಂತೆ ಇತರೆ ವನ್ಯಪ್ರಾಣಿಗಳ ದರ್ಶನವಾಗಬಹುದು ಎಂಬುದು ಪ್ರಾಣಿ ಪ್ರಿಯರ ಅಭಿಪ್ರಾಯವಾಗಿದೆ. ಅದು ಏನೇ ಇರಲಿ ಪ್ರಕೃತಿ ನಿಯಮ ಎನ್ನುವಂತೆ ಮುಂದಿನ ದಿನಗಳಲ್ಲಿ ಬಿಸಿಲಿಗೆ ಗಿಡಮರಗಳು ಎಲೆ ಉದುರಿಸಲಿದ್ದು ಇದರಿಂದ ಹಸಿರ ಅರಣ್ಯ ಬೋಳಾಗಿ ಕಾಣಿಸಲಿದೆ. ಜತೆಗೆ ಕಾಡ್ಗಿಚ್ಚಿನ ಭಯವೂ ಇರುವುದರಿಂದ ಅರಣ್ಯ ಇಲಾಖೆ ಕಾಡ್ಗಿಚ್ಚು ತಡೆಗೆ ಈಗಿನಿಂದಲೇ ಕ್ರಮ ಕೈಗೊಳ್ಳಲಿದೆ.












Click it and Unblock the Notifications