ಪ್ರಸಿದ್ಧ ಪ್ರವಾಸಿ ಬಿಳಿಗಿರಿರಂಗನಾಥ ಬೆಟ್ಟದ ಮುಖ್ಯ ರಸ್ತೆಗಿಳಿದ ಒಂಟಿ ಸಲಗ-ವಿಡಿಯೋ ಭಾರೀ ವೈರಲ್
ಚಾಮರಾಜನಗರ, ಜೂನ್, 21: ಪ್ರಸಿದ್ಧ ಪ್ರವಾಸಿ ತಾಣವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಮುಖ್ಯ ರಸ್ತೆಯಲ್ಲಿ ಸಲಗವೊಂದು ದಿಢೀರ್ ಎಂಟ್ರಿ ಕೊಟ್ಟು ಜನರನ್ನು ಆತಂಕಕ್ಕೆ ಈಡು ಮಾಡಿದೆ. ಅಲ್ಲದೆ ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಬಿಳಿಗಿರಿರಂಗನಾಥ ಬೆಟ್ಟದ ಬಂಗ್ಲೆ ಪೋಡು, ಐಬಿ ಬಳಿ ದಿಢೀರ್ ಪ್ರತ್ಯಕ್ಷವಾಗಿ ಓಡಾಡಿ ಸ್ಥಳೀಯರಿಗೆ ಆತಂಕ ಉಂಟು ಮಾಡಿದೆ.

ಹಲಸಿನ ಹಣ್ಣಿನ ಆಸೆಗೆ ಆನೆ ಪೋಡುಗಳತ್ತ ಬರುತ್ತಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಇದು ರಸ್ತೆಯಲ್ಲಿ ಬಸ್ ಅನ್ನು ಕೂಡ ಹಿಮ್ಮೆಟ್ಟಿಸಿತ್ತು. ಇದೀಗ ಮತ್ತೇ ಪೋಡುಗಳತ್ತ ಬಂದು ಸ್ಥಳೀಯರಿಗೆ ಭೀತಿ ಹುಟ್ಟಿಸಿದೆ. ಆದ್ದರಿಂದ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಗಸ್ತಿಗೆ ತೆರಳಿದ್ದ ವೇಳೆ ಆನೆ ದಾಳಿ: ಜಮೀನುಗಳಿಗೆ ಆನೆ ನುಗ್ಗುವುದನ್ನು ತಪ್ಪಿಸಲು ಗಸ್ತಿಗೆ ತೆರಳಿದ್ದ ವೇಳೆ ಆನೆ ದಾಳಿಗೆ ಮೂವರು ವಾಚರ್‌ಗಳು ಗಂಭೀರವಾಗಿ ಗಾಯಗೊಂಡ ಘಟನೆ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಸಮೀಪದ ಹುಸಣೆಪಾಳ್ಯ ಎಂಬಲ್ಲಿ ಗುರುವಾರ (ಜೂನ್ 20) ತಡರಾತ್ರಿ ನಡೆದಿದೆ.
ಬಿಆರ್‌ಟಿ ಸುರಕ್ಷಿತ ಪ್ರದೇಶದ ಪಿ.ಜಿ.ಪಾಳ್ಯ ವಲಯದ ಹೊರಗುತ್ತಿಗೆ ವಾಚರ್‌ಗಳಾದ ಮುನಿಯಪ್ಪ (33), ಜಡೇಸ್ವಾಮಿ(27) ಹಾಗೂ ನಾಗರಾಜು (36) ಎಂಬವರು ಗಾಯಗೊಂಡವರು. ಮಲೆ ಮಹದೇಶ್ವರ ವನ್ಯಜೀವಿಧಾಮದಿಂದ ಆಹಾರ ಅರಸಿ ಜಮೀನುಗಳತ್ತ ನುಗ್ಗುವ ಆನೆಗಳನ್ನು ಕಾಡಿಗೆ ಓಡಿಸಲು ಇವರು ತೆರಳಿದ್ದ ವೇಳೆ ದಿಢೀರ್ ಆನೆ ದಾಳಿ ನಡೆಸಿದೆ.
ಆನೆ ದಾಳಿಯಿಂದ ಮುನಿಯಪ್ಪನ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಬಳಿಕ ಜಡೆಸ್ವಾಮಿಯನ್ನು ಓಡಿಸಿಕೊಂಡು ಹೋದ ವೇಳೆ ಗುಂಡಿಯೊಳಕ್ಕೆ ಬಿದ್ದು ಕಾಲು ಮುರಿದಿದೆ. ಇನ್ನು ನಾಗರಾಜು ಎಂಬವವರಿಗೆ ಎಡಗೈ ಗಾಯವಾಗಿದೆ. ಇದೀಗ ಮೂವರಿಗೂ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಹೆಚ್ಚಿನ ಚಿಕಿತ್ಸೆಗಾಗಿ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications