ಜಾತಿಯಿಂದ ಯಾರೂ ಪ್ರತಿಭಾವಂತರಾಗಲ್ಲ: ವಿದ್ಯಾರ್ಥಿಗಳಿಗೆ ಸಿಎಂ ಪಾಠ
ವಿದ್ಯಾರ್ಥಿಗಳ ಪ್ರತಿಭೆಯನ್ನು ವಿಕಸನಗೊಳಿಸುವುದೇ ನಿಜವಾದ ಶಿಕ್ಷಣ. ಜಾತಿಯಿಂದ ಯಾರೂ ಪ್ರತಿಭಾವಂತರಾಗುವುದಿಲ್ಲ. ಎಲ್ಲರಲ್ಲಿಯೂ ಪ್ರತಿಭೆಯಿದ್ದು, ಅದು ಹೊರಬರಲು ಅವಕಾಶಗಳು ಸಿಗಬೇಕು ಎಂದು ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದರು. ಚಾಮರಾಜನಗರ ಜಿಲ್ಲೆಯ ಸತ್ತೇಗಾಲದಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮಮ್ಮ ಸೋಸಯ್ಯನ ಸಿದ್ದಯ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗುವಂತೆ ಮಾಡಿದ್ದಾರೆ. ಸ್ವಾತಂತ್ರ್ಯಕ್ಕೂ ಮುನ್ನ ಶೂದ್ರರು, ದಲಿತರಿಗೆ ಅವಕಾಶಗಳೇ ಇರಲಿಲ್ಲ. ಅಂಬೇಡ್ಕರ್ ಅವರು ಕಷ್ಟಪಟ್ಟು ವಿದ್ಯಾವಂತರಾದರು. ಶಿಕ್ಷಣ ಪ್ರಬಲವಾದ ಅಸ್ತ್ರ. ಶಿಕ್ಷಣದಿಂದ ವಂಚಿತರಾದವರು ಸ್ವಾಭಿಮಾನದಿಂದ, ಗೌರವದಿಂದ ಬದುಕುವುದು ಕಷ್ಟವಾಗುತ್ತದೆ. ಅದಕ್ಕಾಗಿ ಎಲ್ಲರೂ ವಿದ್ಯಾವಂತರಾಗಲೇಬೇಕು ಎಂದು ಸಲಹೆ ನೀಡಿದರು.

ನಾನು ಓದದೇ ಹೋಗಿದ್ದರೆ ಇಂದು ಸಿಎಂ ಆಗಲು ಸಾಧ್ಯವಾಗುತ್ತಿರಲಿಲ್ಲ. ರಾಚಯ್ಯನವರು ಕಾನೂನು ಓದಿದ್ದರಿಂದ ಸಚಿವರು ಹಾಗೂ ರಾಜ್ಯಪಾಲರಾದವರು. ಮರಿಸ್ವಾಮಿಯವರು ಓದಿದ್ದರಿಂದ ಐಪಿಎಸ್ ಅಧಿಕಾರಿಯಾದರು. ಅದಕ್ಕೆ ದಲಿತರು, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರು ಜೀವನದಲ್ಲಿ ಗುರಿಯಿಟ್ಟುಕೊಂಡು ಸಾಧನೆ ಮಾಡಬೇಕು ಎಂದರು.
ಸುಸಜ್ಜಿತ ಶಾಲೆ ನಿರ್ಮಾಣ ಮಾಡಿದ್ದು ಅದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಮರಿಸ್ವಾಮಿಯವರಂತೆ ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಇತರರಿಗೆ ನೆರವಾಗಬೇಕು. ಸಾಮಾಜಿಕ ನ್ಯಾಯದರಥವನ್ನು ಮುಂದಕ್ಕೆ ತಳ್ಳಿಕೊಂಡು ಹೋಗಿ, ಹಿಂದಕ್ಕೆ ಮಾತ್ರ ಎಳೆಯಬೇಡಿ ಎಂದು ಅಂಬೇಡ್ಕರ್ ಹೇಳಿದ್ದರು. ಮೀಸಲಾತಿ ಲಾಭವನ್ನು ಪಡೆದ ಮೇಲೆ ಇತರರಿಗೂ ನೆರವು ನೀಡಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ಸ್ಪೂರ್ತಿಯನ್ನು ಪಡೆದುಕೊಂಡು ಜನರಿಗಾಗಿ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ನಾವು ವಿದ್ಯಾರ್ಥಿಯಾಗಿದ್ದಾಗ ಬರಿಗಾಲಿನಲ್ಲಿ ಶಾಲೆಗೆ ತೆರಳುತ್ತಿದ್ದೆ. ಈ ಹಿಂದೆ ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಯೂ ಶೂ, ಸಾಕ್ಸ್ ಹಾಗೂ ಸಮವಸ್ತ್ರವನ್ನು ಹಾಕಿಕೊಳ್ಳಬೇಕೆಂದು ಶೂಭಾಗ್ಯ ಕಾರ್ಯಕ್ರಮವನ್ನು ಜಾರಿ ಮಾಡಿದೆ. ಈಗ ಹಾಲು, ರಾಗಿ ಮಾಲ್ಟ್, ಮೊಟ್ಟೆ, ಚಿಕ್ಕಿ, ಬಾಳೆಹಣ್ಣು, ಸಮವಸ್ತ್ರ, ಪುಸ್ತಕ ಕೊಡುತ್ತಿದ್ದೇವೆ. ಹಾಗಾಗಿ ಮಕ್ಕಳು ಓದಬೇಕು, ವಿದ್ಯೆಯಿಂದ ವಂಚಿತರಾಗಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಚಾಮರಾಜನಗರಕ್ಕೆ ಬಂದ್ರೆ ಸಿಎಂ ಕುರ್ಚಿ ಹೋಯ್ತಾ?
ಮೊದಲು ಮೈಸೂರು ಜಿಲ್ಲೆಗೆ ಸೇರಿದ್ದ ಚಾಮರಾಜನಗರವು ನಂತರ ದಿವಂಗತ ಬಿ.ರಾಚಯ್ಯನವರ ಕಾಲದಲ್ಲಿ ಮೈಸೂರು ಮತ್ತು ಚಾಮರಾಜನಗರ ಎಂಬ ಜಿಲ್ಲೆಗಳಾದವು. ನಾನು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೊಸ ಜಿಲ್ಲೆಯನ್ನು ಘೋಷಣೆ ಮಾಡಿದ್ದೆವು. ಜೆ.ಹೆಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದರು. ಕೆಲವು ಶಾಸಕರು ಚಾಮರಾಜನಗರಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿ ಅವರು ಜಿಲ್ಲೆಗೆ ಭೇಟಿ ನೀಡದಂತೆ ಮಾಡಿದ್ದರು ಎಂದರು.
ಚಾಮರಾಜನಗರಕ್ಕೆ ಭೇಟಿ ನೀಡಿದ ಸಿಎಂ ಅಧಿಕಾರ ಕಳೆದುಕೊಳುತ್ತಾರೆ ಎಂಬ ಕಳಂಕ ಜಿಲ್ಲೆಯ ಮೇಲೆ ಹೊರಿಸಲಾಗಿದೆ. ನಾನು ರಾಚಯ್ಯನವರು ಇಲ್ಲಿಗೆ ಬಂದು ಹೊಸ ಜಿಲ್ಲೆಯನ್ನು ಉದ್ಘಾಟನೆ ಮಾಡಿದೆವು. ನಾನು ಎರಡು ಬಾರಿ ಮುಖ್ಯಮಂತ್ರಿಯಾದೆ. ರಾಚಯ್ಯ ಹಾಗೂ ನಾನು ಮೌಢ್ಯವನ್ನು ನಂಬುತ್ತಿರಲಿಲ್ಲವಾದ್ದರಿಂದ ಇಲ್ಲಿಗೆ ಬಂದೇ ಘೋಷಣೆ ಮಾಡಿದೆವು. ಜೆ.ಹೆಚ್.ಪಟೇಲರು ಹಾಗೂ ವಾಟಾಳ್ ನಾಗರಾಜ್ ಮಹದೇಶ್ವರಸ್ವಾಮಿ ಬೆಟ್ಟಕ್ಕೆ ತೆರಳಿ ಘೋಷಣೆ ಮಾಡಿದರು. ಅದಾದ ನಂತರ ಇಪ್ಪತ್ತು ಸಾರಿಯಾದರೂ ಚಾಮರಾಜನರಕ್ಕೆ ನಾನು ಆಗಮಿಸಿದ್ದೇನೆ. ಮುಖ್ಯಮಂತ್ರಿ ಸ್ಥಾನ ಹೋಗುವ ಬದಲು ಅದು ಇನ್ನೂ ಗಟ್ಟಿಯಾಯಿತು ಎಂದು ಕಳಂಕಕ್ಕೆ ಸೆಡ್ಡು ಹೊಡೆದರು.












Click it and Unblock the Notifications