ಬಿಜೆಪಿ ಸೋತಿದ್ದಕ್ಕೆ ಬೇಜಾರಿಲ್ಲ, ಕಾಂಗ್ರೆಸ್ ಗೆದ್ದಿದ್ದೆ ಹೆಚ್ಚು ಬೇಸರ: ಸದಾನಂದಗೌಡ
ಚಾಮರಾಜನಗರ, ಜೂನ್ 22: ನನಗೆ ಬಿಜೆಪಿ ಸೋತದ್ದಕ್ಕೆ ಬೇಜಾರಿಲ್ಲ ಆದರೆ ಕಾಂಗ್ರೆಸ್ ಬಂದಿದ್ದಕ್ಕೆ ಹೆಚ್ಚು ಬೇಸರ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದ ದುರ್ದೈವದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಎಂತೆಂತಾ ಮಂತ್ರಿಗಳಿದ್ದಾರೆ. ಸರ್ವರ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಎನ್ನುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ್ದಾರೆ.

ಕುಣಿಯಲಾರದವ ನೆಲ ಡೊಂಕು ಎಂದ ರೀತಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರು ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಘೋಷಣೆಗೂ ಮುನ್ನ ಕಾಂಗ್ರೆಸ್ ಹಾಗೂ ನಾಯಕರಿಗೆ ಪರಿಜ್ಞಾನ ಇರಲಿಲ್ಲವಾ? ಮುಂದೆ ಯಾವ ರೀತಿ ತೊಂದರೆ ಉಂಟಾಗಬಹುದು ಎಂಬ ಚಿಂತನೆ ಇರಲಿಲ್ಲವಾ? 16 ಬಾರಿ ಬಜೆಟ್ ಮಂಡಿಸಿದ್ದಾರೆ. ಸಿದ್ದರಾಮಯ್ಯಗೆ ಮುಂದಾಲೋಚನೆ ಇರಬೇಕಿತ್ತು, 16 ಬಾರಿ ಬಜೆಟ್ ಮಂಡಿಸಿದರೇ ಗದ್ದೆಯಲ್ಲಿ ಭತ್ತ ಬೆಳೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಅಕ್ಕಿ ಕೊಡದಿರುವ ನೀಚ ಬುದ್ಧಿ ನಮಗಿಲ್ಲ. ಆ ರೀತಿ ಚೀಪ್ ಪಾಲಿಟಿಕ್ಸ್ ಅನ್ನು ನಮ್ಮ ಮುಖಂಡರು, ಕಾರ್ಯಕರ್ತರು ಮಾಡುವುದಿಲ್ಲ. ಕರ್ನಾಟಕದ ಪ್ರತಿಯೊಬ್ಬರಿಗೂ ಅಕ್ಕಿ ಸಿಗಬೇಕೆಂಬುದು ನಾಯಕರ, ಕಾರ್ಯಕರ್ತರ ಆಶಯವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದರು.
ಸಿಎಂ-ಡಿಸಿಎಂಗೆ ಸವಾಲ್ ಹಾಕುವ ನಾಯಕ ನೇಮಕ
ಇನ್ನು ವಿಪಕ್ಷ ನಾಯಕ ನೇಮಕದ ಬಗ್ಗೆ ಮಾತನಾಡಿದ ಸದಾನಂದ ಗೌಡ, ವಿಪಕ್ಷ ನಾಯಕನನ್ನು ನೇಮಕ ಮಾಡುವುದು ನಮ್ಮ ಧರ್ಮ. ಅಧಿವೇಶನ ಆರಂಭಗೊಳ್ಳುವ ಮುನ್ನ ವಿಪಕ್ಷ ನಾಯಕನನ್ನು ನೇಮಕ ಮಾಡಲಾಗುವುದು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜುಗಲ್ಬಂದಿಗೆ ಸವಾಲೊಡ್ಡುವ ನಾಯಕನನ್ನು ನೇಮಕ ಮಾಡಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದರು.
ಇದೇ ವೇಳೆ ಕೆಲವರು ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ ಎಂಬ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲಿ ಹೊಂದಾಣಿಕೆ ರಾಜಕರಣ ಯಾರೂ ಮಾಡುವುದಿಲ್ಲ. ಆ ರೀತಿ ರಾಜಕಾರಣ ಮಾಡಿದ್ದರೇ ಹಲವು ಕ್ಷೇತ್ರಗಳಲ್ಲಿ ಗೆಲ್ಲಬಹುದಿತ್ತು. ಆದರೆ ನಾವು ಸೋತರೂ ಪರವಾಗಿಲ್ಲ, ಹೊಂದಾಣಿಕೆ ರಾಜಕಾರಣ ಮಾಡಲ್ಲ ಎಂಬುದು ಮುಖಂಡರ, ಪಕ್ಷದ ನಿಲುವಾಗಿದೆ ಎಂದರು.
ಇನ್ನು, ಸೋಲಿನ ಪರಾಮರ್ಶೆಯ ಕಾರ್ಯಕರ್ತರ ಸಭೆಗೆ ಮಾಜಿ ಸಚಿವ ಸೋಮಣ್ಣ ಗೈರಾಗಿರುವ ಬಗ್ಗೆ ಮಾತನಾಡಿದ ಅವರು, ಸೋಮಣ್ಣ ಬರುವುದಿಲ್ಲ ಎಂದು ಹೇಳಿದರು, ಸೋಲಿನ ನೋವಿನಿಂದ ಅವರಿನ್ನೂ ಹೊರಬಂದಿಲ್ಲ, ಆದರೆ ಅವರಿಗೆ ಯಾರಾ ಮೇಲೂ ಕೋಪ ಇಲ್ಲಾ ಎಂದರು.











Click it and Unblock the Notifications