ಚಾಮರಾಜನಗರ: 'ನಿಗದಿತ ಸಮಯಕ್ಕೆ ಪಡಿತರ ಕೊಡದಿದ್ರೆ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದು'
ಚಾಮರಾಜನಗರ, ಸೆಪ್ಟೆಂಬರ್, 25: ರಾಜ್ಯದ ಹಲವೆಡೆ ನ್ಯಾಯಬೆಲೆ ಅಂಗಡಿಗಳಲ್ಲಿ ಸರಿಯಾದ ಸಮಯಕ್ಕೆ ಪಡಿತರ ನೀಡುವುದಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದರ ನಡುವೆ ಇದೀಗ ಚಾಮರಾಜನಗರ ಜಿಲ್ಲೆಯ ಹಳ್ಳಿಯೊಂದರಲ್ಲಿಯೂ ಇಂತಹದ್ದೇ ಒಂದು ಘಟನೆ ನಡೆದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಪುಷ್ಪಾ ಅಮರನಾಥ್ ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಾಮರಾಜನಗರದ ಜಿಲ್ಲಾಡಳಿತ ಭವನದ ಹಳೆ ಕೆಡಿಪಿ ಸಭಾಂಗಣದಲ್ಲಿ ಇಂದು (ಸೆಪ್ಟೆಂಬರ್ 25) ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಅನುಷ್ಠಾನದ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಭೆಯು ರಾಜ್ಯ ಉಪಾಧ್ಯಕ್ಷ ಡಾ.ಪುಷ್ಪಾ ಅಮರನಾಥ್ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ಚಾಮರಾಜನಗರ ತಾಲೂಕಿನ ಕೋಡಿಮೋಳೆ ಗ್ರಾಮದ ಜನರು ಮಾತನಾಡಿ, ನ್ಯಾಯಬೆಲೆ ಅಂಗಡಿಯಲ್ಲಿ ಸರಿಯಾಗಿ ಅಕ್ಕಿಯನ್ನು ಕೊಡುತ್ತಿಲ್ಲ. ಬಯೋಮೆಟ್ರಿಕ್ ಮಾಡಿಸಿದ ನಂತರ ಎರಡು ದಿನ ಬಿಟ್ಟು ಅಕ್ಕಿ ಕೊಡುತ್ತಾರೆ ಎಂದು ದೂರಿದರು. ಇದಕ್ಕೆ ಗರಂ ಆದ ಪುಷ್ಪಾ ಅಮರನಾಥ್ ಕೋಡಿಮೋಳೆ, ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದುಪಡಿಸುವಂತೆ ಆಹಾರ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ಕೊಟ್ಟರು.
ಈ ಸಂಬಂಧ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳದಾಗಿ ಆಹಾರ ಇಲಾಖೆ ಉಪ ನಿರ್ದೇಶಕ ಯೋಗಾನಂದ ಸಭೆಯಲ್ಲಿ ತಿಳಿಸಿದರು. ಇನ್ನು ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಡಾ.ಪುಷ್ಪಾ ಅಮರನಾಥ್ ಸೂಚನೆ ಕೊಟ್ಟರು.
ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭ: ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಯಡಿ ಸೂರ್ಯಕಾಂತಿ ಖರೀದಿಸುವ ಕಾರ್ಯಕ್ಕೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಬುಧವಾರ (ಸೆಪ್ಟೆಂಬರ್ 25) ಚಾಲನೆ ನೀಡಿದರು.
ಎಪಿಎಂಸಿ ಪ್ರಾಂಗಣದಲ್ಲಿ ಕೃಷಿ ಮಾರಾಟ ಇಲಾಖೆ, ತೋಟಗಾರಿಕೆ ಮತ್ತು ಸಹಕಾರ ಇಲಾಖೆ ಹಾಗೂ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿ ನಿಯಮಿತ ವತಿಯಿಂದ ಸೂರ್ಯಕಾಂತಿ ಖರೀದಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಚೀಲಕ್ಕೆ ಸೂರ್ಯಕಾಂತಿ ತುಂಬುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೂರ್ಯಕಾಂತಿ ಬೆಳೆದ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಕಳೆದ ವರ್ಷ ಸೂರ್ಯಕಾಂತಿ ಖರೀದಿ ಕೇಂದ್ರ ತೆರಯುವಂತೆ ರೈತರು ಧರಣಿ ಮಾಡಿದ್ದರು. ಆದರೆ ಈ ಬಾರಿ ಸರ್ಕಾರ ಎಚ್ಚೇತ್ತುಕೊಂಡು ಖರೀದಿ ಕೇಂದ್ರ ಆರಂಭಿಸಿದೆ. ಅದರಂತೆಯೇ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿ ವತಿಯಿಂದ ಸೂರ್ಯಕಾಂತಿ ಖರೀದಿ ಪ್ರಾರಂಭ ಮಾಡಲಾಗಿದೆ ಎಂದು ತಿಳಿಸಿದರು.
2023-24ನೇ ಸಾಲಿನಲ್ಲಿ 6.7 ಕೋಟಿಯಷ್ಟು ಖರೀದಿ ಮಾಡಲಾಗಿತ್ತು. ಈ ಬಾರಿ 7.600 ಕ್ವಿಂಟಾಲ್ ಸೂರ್ಯಕಾಂತಿ ಖರೀದಿಗೆ ನೋಂದಣಿಯಾಗಿದೆ. ಹಿಂದೆ ಕ್ವಿಂಟಾಲ್ ಸೂರ್ಯಕಾಂತಿ 6760 ರೂಪಾಯಿ ಮಾರಾಟವಾಗಿತ್ತು. ಪ್ರಸಕ್ತ ಸಾಲಿನಲ್ಲಿ 7,280 ರೂಪಾಯಿ ನಿಗಧಿಯಾಗಿದೆ. ಹಿಂದಿನ ವರ್ಷಕ್ಕೆ ಹೊಲಿಕೆ ಮಾಡಿದರೆ, ಕ್ವಿಂಟಾಲ್‌ಗೆ 500 ರೂಪಾಯಿ ಬೆಲೆ ಹೆಚ್ಚಳವಾಗಿದೆ ಎಂದು ತಿಳಿಸಿದರು.
ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸರ್ಕಾರ ಕರ್ನಾಟಕ ಆಯಿಲ್ ಫೆಡರೇಷನ್ ಮೂಲಕ ಸೂರ್ಯಕಾಂತಿ ಖರೀದಿಸುತ್ತಿದೆ. ಜೊತೆಗೆ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬ ನಿಟ್ಟಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ ಮಾಡಲು ಎರಡು ತಿಂಗಳು ನಿಗಧಿ ಮಾಡಿದೆ.
ಈ ಅವಧಿಯೊಳಗೆ ಸೂರ್ಯಕಾಂತಿಯನ್ನು ರೈತರು ಹೊರಗೆ ಕೊಡದೆ, ಸರ್ಕಾರ ನಿಗಧಿ ಮಾಡಿರುವ ಬೆಂಬಲ ಬೆಲೆಯಡಿ ಮಾರಾಟ ಮಾಡಿ ಲಾಭ ಗಳಿಸಬೇಕು. ಇದರಿಂದ ಸರ್ಕಾರ ಯೋಜನೆಗಳು ಸಫಲ ಕಾಣುತ್ತವೆ. ಜೊತೆಗೆ ಅಭಿವೃದ್ಧಿಗೂ ಪೂರಕವಾಗುತ್ತದೆ ಎಂದು ಹೇಳಿದರು.
ಎಪಿಎಂಸಿ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ಸಾಕಷ್ಟು ದೂರುಗಳು ಬರುತ್ತಿವೆ. ರೈತರು ದಲ್ಲಾಳಿಗಳ ಬಳಿ ಮಾರಾಟ ಮಾಡದೇ ಎಪಿಎಂಸಿಯಲ್ಲಿ ಸೂರ್ಯಕಾಂತಿ ಮಾರಾಟ ಮಾಡಿ ಎಂದು ಸಲಹೆ ನೀಡಿದರು.












Click it and Unblock the Notifications