ಚಾಮರಾಜನಗರ: ಸಾಮಾಜಿಕ ಭದ್ರತಾ ಯೋಜನೆಗಳ ನೊಂದಣಿಗೆ ಜಿಲ್ಲಾಧಿಕಾರಿ ಖಡಕ್ ಸೂಚನೆ
ಚಾಮರಾಜನಗರ, ಡಿಸೆಂಬರ್ 21: ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಹಾಗೂ ಜೀವನ್ ಜ್ಯೋತಿ ವಿಮಾ ಯೋಜನೆಗಳಡಿ ಸಾರ್ವಜನಿಕರು, ಸಂಘಸಂಸ್ಥೆಗಳು, ಸರ್ಕಾರಿ, ಅರೆ ಸರ್ಕಾರಿ ನೌಕರರು ಸೇರಿದಂತೆ ಎಲ್ಲರಿಗೂ ನೊಂದಣಿ ಕಾರ್ಯ ಚುರುಕುಗೊಳಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿಂದು ಸಾಮಾಜಿಕ ಭದ್ರತಾ ಯೋಜನೆಗಳ ಅಭಿಯಾನದಡಿ ನಡೆದ ಪಿ.ಎಂ.ಎಸ್.ಬಿ.ವೈ ಹಾಗೂ ಪಿ.ಎಂ.ಜೆ.ಜೆ.ಬಿ.ವೈ ಯೋಜನೆಗಳ ಅನುಷ್ಟಾನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬರು ಬಹಳ ಅನುಕೂಲವಿರುವ ಈ ಎರಡು ಯೋಜನೆಗಳಿಗೆ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ನೊಂದಣಿ ಮಾಡಿಸಬಹುದು. ಸರ್ಕಾರಿ, ಅರೆ ಸರ್ಕಾರಿ ಕಚೇರಿ ನೌಕರರು, ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳ ನೌಕರರು, ಸಿಬ್ಬಂದಿಗಳು ಕಡ್ಡಾಯವಾಗಿ ಯೋಜನೆಗೆ ಒಳಪಡಬೇಕು. ಇಎಸ್.ಐ ಹಾಗೂ ಪಿ.ಎಫ್ ಸೌಲಭ್ಯ ಹೊಂದಿದವರು, ಇಲ್ಲದಿರುವವರು ಎಲ್ಲರೂ ಸಹ ಯೋಜನೆಗಳಿಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಾಗಿ ಸೂಚಿಸಿದರು.
ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಗಳಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ 7.50 ಲಕ್ಷ ನೊಂದಣಿಗೆ ಗುರಿ ನೀಡಲಾಗಿದ್ದು, ಈಗಾಗಲೇ 1 ಲಕ್ಷದ 11 ಸಾವಿರ ಜನರು ನೊಂದಣಿಯಾಗಿದ್ದಾರೆ. ಇತರೆ ಜಿಲ್ಲೆಗಳ ಸರಾಸರಿ ನೊಂದಣಿ ಅನುಷ್ಠಾನದಲ್ಲಿ ಚಾಮರಾಜನಗರ ಜಿಲ್ಲೆ ಹಿನ್ನೆಡೆ ಹೊಂದಿದ್ದು, ನೊಂದಣಿ ಹೆಚ್ಚಳದ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ಬ್ಯಾಂಕ್ ಅಧಿಕಾರಿಗಳು ಜಿಲ್ಲಾಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಯೋಜನೆಯ ಶೇ. 100ರಷ್ಟು ಗುರಿ ಸಾಧನೆಗೆ ಮುಂದಾಗುವಂತೆ ನಿರ್ದೇಶನ ನೀಡಿದರು.
ನೊಂದಣಿದಾರರಿಗೆ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿ ವಾರ್ಷಿಕ ಪ್ರೀಮಿಯಂ 20 ರೂ. ಹಾಗೂ ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಯಡಿ ವಾರ್ಷಿಕ ಪ್ರೀಮಿಯಂ 436 ರೂ. ಆಗಿದ್ದು, ಇದು ಕಡಿಮೆ ಮೊತ್ತವಾಗಿದೆ. ಇದು ಸಾರ್ವಜನಿಕರಿಗೆ ಹೊರೆಯಾಗುವುದಿಲ್ಲ. ನೊಂದಣಿಗಾಗಿ ಉಳಿತಾಯ ಖಾತೆ ಸಂಖ್ಯೆ, ಖಾತೆದಾರರ ಹಾಗೂ ನಾಮಿನಿಯ ಆಧಾರ್ ನಕಲು ಪ್ರತಿ ನೀಡಬೇಕು. ಯೋಜನೆಗಳ ಕನಿಷ್ಠ ಹೂಡಿಕೆಯಿಂದ ಗರಿಷ್ಠ ಲಾಭ ದೊರೆಯಲಿದೆ. ನೊಂದಣಿ ಪ್ರಕ್ರಿಯೆ ಯಾವುದೇ ತಾಂತ್ರಿಕ ತೊಡಕು ಇರದ ಸುಲಭ-ಸರಳವಾಗಿದೆ. ಯೋಜನೆ ಸದ್ಭಳಕೆಗಾಗಿ ನೊಂದಣಿಯನ್ನು ತೀವ್ರಗೊಳಿಸಿ ಜಿಲ್ಲೆಯನ್ನು ಮುಂಚೂಣಿಗೆ ತರಬೇಕಾಗಿದೆ ಎಂದು ತಿಳಿಸಿದರು.

ಯೋಜನೆಗಳಿಗೆ ನೊಂದಣಿ ಹೆಚ್ಚಳ ಮಾಡಲು ಪ್ರತಿ ಗ್ರಾಮ ಪಂಚಾಯಿತಿಮಟ್ಟದಲ್ಲಿ ಯೋಜನೆಗಳ ಅರಿವು ಮೂಡಿಸಿ ಶಿಬಿರಗಳನ್ನು ಏರ್ಪಡಿಸಬೇಕು. ಪ್ರತಿ ಮನೆಮನೆಗೂ ಮಾಹಿತಿ ತಲುಪಿಸಬೇಕು. ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಂದು ದಿನದ ಆಟೋ ಪ್ರಚಾರ ಮಾಡಿಸಬೇಕು. ಎಲ್ಲಾ ಇಲಾಖಾ ಅಧಿಕಾರಿಗಳು, ತಹಶೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮುಂದಿನ ಮೂರು ದಿನದೊಳಗೆ ನಿಗದಿತ ಗುರಿಸಾಧನೆಗೆ ಕಾರ್ಯೋನ್ಮುಖರಾಗುವಂತೆ ಹೇಳಿದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು, ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು, ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತೆಯರು ಸೇರಿದಂತೆ ಪೊಲೀಸ್, ಕಾರಾಗೃಹ ಇಲಾಖೆ, ಅರಣ್ಯ, ನಗರ, ಸ್ಥಳೀಯ ವ್ಯಾಪ್ತಿಯ ಎಲ್ಲಾ ಪೌರಕಾರ್ಮಿಕರು ನೊಂದಣಿಯಾಗಬೇಕು. ನೊಂದಣಿಯಿಂದ ಯಾರು ಸಹ ವಂಚಿತರಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಎಲ್ಲಾ ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಕಿಯೋಸ್ಕ್ ಡೆಸ್ಕ್ ತೆರೆಯಬೇಕು. ಬ್ಯಾಂಕ್ ವತಿಯಿಂದ ನೋಡೆಲ್ ಅಧಿಕಾರಿ ನಿಯೋಜಿಸಿ ನೊಂದಣಿ ಕಾರ್ಯದ ಉಸ್ತುವಾರಿ ವಹಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚಿಸಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಸುರೇಖಾ ಅವರು ಮಾತನಾಡಿ, ಯಾವುದೇ ಬ್ಯಾಂಕ್ ಖಾತೆ ಹೊಂದಿರುವ 18 ರಿಂದ 70ರ ವಯೋಮಿತಿಯ ಎಲ್ಲರೂ ಪಿ.ಎಂ.ಎಸ್.ಬಿ.ವೈ ಯೋಜನೆಯಡಿ ವಾರ್ಷಿಕ 20 ರೂ ಪ್ರೀಮಿಯಂ ಪಾವತಿಸಬೇಕು. ಆಕಸ್ಮಿಕ ಅಪಘಾತದಿಂದ ಮರಣ ಹೊಂದಿದರೆ 2 ಲಕ್ಷ ರೂ., ಅಂಗವೈಕಲ್ಯಕ್ಕೆ 1 ಲಕ್ಷ ರೂ.ಗಳ ವಿಮಾ ಸುರಕ್ಷೆ ಇರಲಿದೆ. ಪಿ.ಎಂ.ಜೆ.ಜೆ.ಬಿ.ವೈ ಯೋಜನೆಯಡಿ 18ರಿಂದ 50 ವಯೋಮಿತಿಗೆ ವಾರ್ಷಿಕ 436 ರೂ. ಪ್ರೀಮಿಯಂ ಜಮೆಯಾದರೆ 2 ಲಕ್ಷ ರೂ. ವಿಮಾ ಸುರಕ್ಷೆ ದೊರೆಯಲಿದ್ದು, ಸಂಬಂಧಪಟ್ಟವರ ಉಳಿತಾಯ ಖಾತೆಯಿಂದ ಆಟೋ ಡೆಬಿಟ್ ಮೂಲಕ ಪ್ರೀಮಿಯಂ ಪಾವತಿಯಾಗಲಿದೆ. ಪ್ರತಿವರ್ಷ ಜೂನ್ 1ರಿಂದ ಮುಂದಿನ ಮೇ 31ರವರೆಗೆ ಯೋಜನಾ ಅವಧಿಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.












Click it and Unblock the Notifications