ಯಳಂದೂರು: ಕರ್ತವ್ಯ ಲೋಪ ಆರೋಪ, ಐವರು ಪೊಲೀಸರು ಅಮಾನತು
ಚಾಮರಾಜನಗರ, ನವೆಂಬರ್, 30: ಜೀಪಿನಿಂದ ಹಾರಿ ಆರೋಪಿ ಯುವಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಜಿಲ್ಲೆಯ ಐವರು ಪೊಲೀಸರು ಅಮಾನತುಗೊಂಡಿದ್ದಾರೆ. ಯಳಂದೂರು ಸಿಪಿಐ ಶಿವಮಾದಯ್ಯ, ಪಿಎಸ್ಐ ಮಹದೇವಗೌಡ, ಎಎಸ್ಐ ಚೆಲುವರಾಜ್, ಹೆಡ್ ಕಾನ್ಸ್‌ಟೇಬಲ್ ಭದ್ರಮ್ಮ, ಕಾನ್ಸ್‌ಟೇಬಲ್ ಸೋಮಶೇಖರ್ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ ಆಗಿದ್ದಾರೆ. ಆರೋಪಿಯನ್ನು ಬಂಧಿಸಿ ಕರೆತರುವಾಗ ಕರ್ತವ್ಯಲೋಪ ಎಸಗಿದ್ದಾರೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಈ ಅಮಾನತು ಆದೇಶ ಹೊರಬಿದ್ದಿದೆ.
ಘಟನೆಯ ಸಂಪೂರ್ಣ ಹಿನ್ನೆಲೆ
ಯಳಂದೂರು ತಾಲೂಕಿನ ಕುಂತೂರುಮೋಳೆ ಗ್ರಾಮದ ಲಿಂಗರಾಜು (21) ಎಂಬಾತನ ವಿರುದ್ಧ ಅಪ್ರಾಪ್ತೆಯನ್ನು ಅಪಹರಿಸಿದ ಬಗ್ಗೆ ದೂರು ದಾಖಲಾಗಿತ್ತು. ಮಂಗಳವಾರ ನಿಂಗರಾಜುನನ್ನು ಪೊಲೀಸರು ಠಾಣೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆಗ ಲಿಂಗರಾಜು ಪರಾರಿಯಾಗಲು ಜೀಪಿನಿಂದ ಹಾರಿ ತೀವ್ರವಾಗಿ ಗಾಯಗೊಂಡಿದ್ದಾನೆ. ಬಳಿಕ ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆದ್ದರಿಂದ ಐವರು ಪೊಲೀಸರನ್ನು ಅಮಾನತು ಮಾಡಿದ್ದು, ಇದೀಗ ಅಮಾನತು ಆದೇಶಕ್ಕೆ ದಲಿತ ಸಂಘಟನೆಗಳು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ.
ಅತ್ಯಾಚಾರ ಆರೋಪ, ಚಳ್ಳಕೆರೆ ಸಿಪಿಐ ಉಮೇಶ್ ವಿರುದ್ಧ ಎಫ್ಐಆರ್ ದಾಖಲು !
ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಯುವಕ ಮೃತಪಟ್ಟ ಸಂಬಂಧ ಚಾಮರಾಜನಗರ ಜಿಲ್ಲೆಯ ಮೂವರು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿತ್ತು. ಯಳಂದೂರು ಪೊಲೀಸ್ ಠಾಣೆಯ ಸಿಪಿಐ ಶಿವಮಾದಯ್ಯ, ಮಾಂಬಳ್ಳಿ ಪೊಲೀಸ್ ಠಾಣೆ ಪಿಎಸ್ಐ ಮಾದೇಗೌಡ ಹಾಗೂ ಕಾನ್ಸ್‌ಟೇಬಲ್ ಸೋಮಣ್ಣ ವಿರುದ್ಧ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನ್ನ ಮಗನನ್ನು ಹಿಂಸಿಸಿ ಕೊಂದಿದ್ದಾರೆ ಎಂದು ಮೃತನ ತಾಯಿ ಮಹಾದೇವಮ್ಮ ಪೊಲೀಸರ ವಿರುದ್ಧವೇ ದೂರು ನೀಡಿದ್ದರು. ಈ ಹಿನ್ನೆಲೆ ಐವರು ಪೊಲೀಸ್ ಸಿಬ್ಬಂದಿ ಅಮಾನತುಗೊಂಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.