ಚಾಮರಾಜನಗರ: ಮಕ್ಕಳಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ಕಾಯಿಲೆ, ಈ ಬಗ್ಗೆ ವೈದ್ಯರು ಹೇಳುವುದೇನು?, ಇಲ್ಲಿದೆ ವಿವರ
ಚಾಮರಾಜನಗರ, ಜುಲೈ, 29: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ವಿಚಿತ್ರ ಕಾಯಿಲೆಯೊಂದು ಮತ್ತೇ ಬೆಳಕಿಗೆ ಬಂದಿದ್ದು, ಇದೀಗ ಇದು ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ. ಮಕ್ಕಳಿಗೆ ಈ ಕಾಯಿಲೆ ಬಂದರೆ 18 ವರ್ಷ ತುಂಬುವಷ್ಟರಲ್ಲಿಯೇ ಆ ಮಗು ಮರಣ ಹೊಂದುತ್ತದೆ ಎನ್ನುವ ಆತಂಕ ಪೋಷಕರನ್ನು ಕಾಡುತ್ತಿದೆ.
ಕೈ ಕಾಲು, ಮುಖದ ಮೇಲೆ ಕಪ್ಪು ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುವ ರೋಗಕ್ಕೆ ಚುಕ್ಕಿ ಚರ್ಮರೋಗ ಎನ್ನಲಾಗಿದೆ. ಇದು ಒಂದು ಬಾರಿ ಮಕ್ಕಳಿಗೆ ಅಂಟಿಕೊಂಡರೆ ಸಾವು ಖಚಿತ ಎಂಬ ಮಾತಿದೆ. ಈ ರೀತಿ ಮಾರಕ ಕಾಯಿಲೆ ಹನೂರು ತಾಲೂಕಿನ ಕುರಟ್ಟಿ ಹೊಸೂರು, ಭದ್ರಯ್ಯನಹಳ್ಳಿ, ಶೆಟ್ಟಳ್ಳಿ ವ್ಯಾಪ್ತಿಯಲ್ಲಿ ಇದೀಗ ಬೆಳಕಿಗೆ ಬಂದಿದೆ.

2015ರಲ್ಲಿ ಇದೇ ಭಾಗದಲ್ಲಿ ಕಾಣಿಸಿಕೊಂಡಿದ್ದ Autoimmune diseases ಕಾಯಿಲೆ ಇದಾಗಿದೆ. ಈ ಕಾಯಿಲೆ ಅಂಟಿದ ಮಕ್ಕಳು 18 ವರ್ಷದವರೆಗೆ ಬದುಕುವುದೇ ಹೆಚ್ಚು ಎನ್ನುತ್ತಿದ್ದಾರೆ ವೈದ್ಯರು. ಇನ್ನೂ ಈ ಚುಕ್ಕಿ ಚರ್ಮ ರೋಗದಿಂದ ಹಲವು ಮಕ್ಕಳು ಸಾವನ್ನಪ್ಪುತ್ತಿವೆ. ಸದ್ಯ ಔಷಧಿಯೇ ಇಲ್ಲದ ಈ ಕಾಯಿಲೆಗೆ ಸಣ್ಣ ಸಣ್ಣ ಕಂದಮ್ಮಗಳು ಹೈರಾಣಾಗಿವೆ.
ಇನ್ನು ಮಕ್ಕಳಿಗೆ 9 ವರ್ಷ ತುಂಬಿದ ನಂತರ ಚರ್ಮದಲ್ಲಿ ಹುಣ್ಣು, ಬಿಳಿ ಮಚ್ಚೆ, ಚರ್ಮ ಕಪ್ಪು ಬಣ್ಣಕ್ಕೆ ತಿರುಗುವುದು, ಕಣ್ಣು ಊದಿಕೊಳ್ಳುವಿಕೆ ಈ ರೀತಿ ನಾನಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸದ್ಯ ಹನೂರು ಸುತ್ತಲಿನ 4ಕ್ಕೂ ಹೆಚ್ಚಿನ ಮಕ್ಕಳಲ್ಲಿ ಈ ರೋಗ ಲಕ್ಷಣ ಪತ್ತೆಯಾಗಿದೆ. ಇತ್ತ ವೈದ್ಯರ ಪ್ರಕಾರ ಈ ರೋಗವು ಅನುವಂಶೀಕವಾಗಿ ಕಾಣಿಸಿಕೊಳ್ಳುತ್ತಿದೆ ಎನ್ನಲಾಗುತ್ತಿದೆ.
ಇದರಿಂದ ಮಕ್ಕಳು ಶಾಲೆಗೆ ಹೋಗಲು ಸಹ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ರೋಗ ಕಾಣಿಸಿಕೊಂಡರೆ ಆ ಮಗು 18 ವರ್ಷ ತಲುಪುವಷ್ಟರಲ್ಲಿಯೇ ಸಾವನ್ನಪ್ಪುವುದು ಖಚಿತ ಎಂದು ನಿರ್ಧಾರ ಮಾಡುವ ಸ್ಥಿತಿಗೆ ತಲುಪಿದ್ದಾರೆ ಇಲ್ಲಿನ ಬಡ ಜನರು. ಈ ಕಾಯಿಲೆ 2015ರಲ್ಲಿ ಕಾಣಿಸಿಕೊಂಡಿದ್ದ ವೇಳೆ ಶೆಟ್ಟಹಳ್ಳಿ, ಕುರಟ್ಟಿಹೊಸೂರು ಗ್ರಾಮದಲ್ಲಿ 8 ಮಕ್ಕಳು ಅಸುನೀಗಿದ್ದರು. ಸದ್ಯ ಗ್ರಾಮಗಳಿಗೆ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ಚಂದ್ರಶೇಖರ್, ಹನೂರು ತಾಲೂಕು ಆರೋಗ್ಯ ಇಲಾಖೆಯು ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ.
ಐ ವೈರಸ್ ಸೋಂಕಿನ ಬಗ್ಗೆ ವೈದ್ಯರು ಹೇಳುವುದೇನು?
ದಾವಣಗೆರೆ ಜಿಲ್ಲೆಯಲ್ಲಿ ಐ ವೈರಸ್ ಸೋಂಕಿಗೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲಿದ್ದು, ಇದರಿಂದ ಮಕ್ಕಳ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ನಂತರ ವೈದ್ಯರೊಬ್ಬರು ಈ ರೋಗದಿಂದ ಪಾರಾಗಲು ಕೆಲವು ಸಲಹೆಗಳನ್ನು ನೀಡಿ ಮಕ್ಕಳ ಪೋಷಕರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ.
ಜಿಟಿ ಜಿಟಿ ಮಳೆ ಸುರಿಯುತ್ತಿರುವ ಹಿನ್ನೆಲೆ ದಾವಣಗೆರೆ ಜಿಲ್ಲೆ ಈ ಬಾರಿ ಥೇಟ್ ಮಲೆನಾಡಿನಂತಾಗಿದೆ. ಪರಿಣಾಮ ಜಿಲ್ಲೆಯ ಬಹುತೇಕ ಮಂದಿಗೆ ಚಳಿ, ಜ್ವರ, ಶೀತ, ಕೆಮ್ಮು, ತಲೆನೋವು ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಈಗ ಮಕ್ಕಳಲ್ಲಿ ಕಾಣಿಸಿಕೊಂಡಿರುವ ಕಣ್ಣಿನ ಬೇನೆ ಪೋಷಕರನ್ನು ತಲ್ಲಣಗೊಳ್ಳುವಂತೆ ಮಾಡಿದೆ.
ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬಂದಿರುವ ಕಣ್ಣು ಬೇನೆ ಅಥವಾ ಐ ವೈರಸ್‌ನಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಅಲ್ಲದೆ ಎದ್ನೋ ಬಿದ್ನೋ ಎಂಬಂತೆ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇನ್ನು ಮಳೆಗಾಲದ ವೇಳೆ ಸಾಮಾನ್ಯವಾಗಿ ಕಂಡುಬರುವ ಮದ್ರಾಸ್ ಐ ರೀತಿಯಾದ ಒಂದು ವೈರಸ್ ಇದಾಗಿದ್ದು, ಜಿಲ್ಲೆಯಲ್ಲಿ ಸಾವಿರಾರು ಮಕ್ಕಳಲ್ಲಿ ಈ ಬೇನೆ ಕಂಡುಬಂದಿದೆ.
ಮಕ್ಕಳನ್ನು ಶಾಲೆಗೆ ಕಳುಹಿಸುವುದರಿಂದ ಆಗಾಗ್ಗೆ ಕಣ್ಣು ಮುಟ್ಟಿಕೊಳ್ಳುತ್ತಾರೆ. ಜೊತೆಗೆ ಎಲ್ಲಾ ಮಕ್ಕಳ ಜೊತೆ ಆಟವಾಡುತ್ತಾರೆ. ಇಲ್ಲಿ ಅಂತರ ಕಡಿಮೆ ಇರುತ್ತದೆ. ಮಕ್ಕಳು ಸ್ವಲ್ಪ ಕಣ್ಣು ನೋವಾದರೂ ಉಜ್ಜಿಕೊಳ್ಳುತ್ತಾರೆ. ವಾತಾವರಣವೂ ತಂಪಾಗಿರುವ ಕಾರಣಕ್ಕೆ ವೇಗವಾಗಿ ಈ ಸೋಂಕು ಹರಡುತ್ತಿದೆ.
ದೃಷ್ಟಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಹೆಚ್. ಎಂ. ರವೀಂದ್ರನಾಥ್ ಮಾತನಾಡಿ, ಈಗಾಗಲೇ 450 ರಿಂದ 500 ಮಕ್ಕಳನ್ನು ನೋಡಿದ್ದೇನೆ. ಮಕ್ಕಳ ಕಣ್ಣಿನ ಭಾವು ಹೆಚ್ಚಾಗಿರುವ ಕಾರಣ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಅಲ್ಲದೆ ಮಕ್ಕಳಲ್ಲಿ ಶೀತ, ಜ್ವರ, ಸ್ವಲ್ಪ ಕೆಮ್ಮು, ತಲೆನೋವು, ಮೈ ಕೈ ಸುಸ್ತು ಎಂದು ಹೇಳಿದ್ದಾರೆ. ಆದರೆ ಅವರಿಗೆ ಏನೂ ತೊಂದರೆ ಇಲ್ಲ ಎಂದು ವೃದ್ಯರು ಸ್ಪಷ್ಟಪಡಿಸಿದ್ದಾರೆ.
ಮಳೆಗಾಲದ ವೇಳೆ ಸಾಮಾನ್ಯವಾಗಿ ಹರಡುವ ವೈರಸ್ ಇದಾಗಿದೆ. ಮದ್ರಾಸ್ ಐ ನಂತೆ ಪರಿಣಾಮಕಾರಿಯಾಗಿಲ್ಲ. ಆದ್ದರಿಂದ ಯಾವುದೇ ಸಮಸ್ಯೆಯೂ ಆಗುವುದಿಲ್ಲ. ಪೋಷಕರು ಹೆದರುವ ಅವಶ್ಯಕೆ ಇಲ್ಲ. ಇದೊಂದು ವೈರಸ್, ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈಗ ತಂಪು ವಾತಾವರಣ ಹೆಚ್ಚಾಗಿರುವ ಕಾರಣ ಈ ವೇಳೆ ವೈರಸ್ ಹೆಚ್ಚಾಗಿ ಹರಡುತ್ತದೆ ಅಷ್ಟೇ. ಇದರಿಂದ ಯಾವ ತೊಂದರೆಯೂ ಇಲ್ಲ ಎಂದು ಹೇಳಿದ್ದಾರೆ.












Click it and Unblock the Notifications