ಹೆಗ್ಗವಾಡಿ: ತಂದೆ ಧ್ರುವನಾರಾಯಣ ಮತ್ತು ಅಜ್ಜ-ಅಜ್ಜಿ ಸಮಾಧಿಗೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ ದರ್ಶನ್ ಧ್ರುವನಾರಾಯಣ
ಚಾಮರಾಜನಗರ, ಏಪ್ರಿಲ್, 03: ರಾಜ್ಯ ವಿಧಾನಸಭೆ ಚುನಾವಣಾ ಕಾವು ದಿನದಿಂದ ದಿನಕ್ಕೆ ಬಿಸಿಲಿನ ತಾಪದಂತೆ ಹೆಚ್ಚಾಗುತ್ತಿದ್ದು, ಎಲ್ಲಾ ಪಕ್ಷಗಳ ರಾಜಕಾರಣಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರವನ್ನು ಆರಂಭಿಸಿದ್ದಾರೆ. ಜೊತೆಗೆ ಟೆಂಪಲ್ ರನ್ ಕೈಗೊಳ್ಳುವ ಮೂಲಕ ಮತಬೇಟೆ ಆರಂಭಿಸಿದ್ದಾರೆ. ಇನ್ನು ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ಅವರು ಸೋಮವಾರ (ಏಪ್ರಿಲ್ 03) ತಂದೆ ಹಾಗೂ ಅಜ್ಜ-ಅಜ್ಜಿ ಸಮಾಧಿಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ.
ಪ್ರಚಾರ ಆರಂಭಿಸಿದ ದರ್ಶನ್
ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮಕ್ಕೆ ಬಂದ ದರ್ಶನ್, ತಂದೆ ಧ್ರುವನಾರಾಯಣ ಹಾಗೂ ಅಜ್ಜ-ಅಜ್ಜಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ, ಗ್ರಾಮದಲ್ಲಿರುವ ಗ್ರಾಮದೇವತೆ ಬೆಳ್ಳಿ ಕಾಣಮ್ಮ ದೇಗುಲ ಮತ್ತು ಚರ್ಚ್‌ಗೆ ಗ್ರಾಮಸ್ಥರ ಜೊತೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ನಂಜನಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಧ್ರುವನಾರಾಯಣ ಅವರ ಅಕಾಲಿಕ ಮರಣದಿಂದಾಗಿ ಪುತ್ರ ದರ್ಶನ್‌ಗೆ ಟಿಕೆಟ್ ಕೊಟ್ಟಿದ್ದು, ಅವರು ಅಧಿಕೃತವಾಗಿ ಇಂದಿನಿಂದ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ಇನ್ನು ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಆರ್.ನರೇಂದ್ರ ಕೂಡ ಮಲೆಮಹದೇಶ್ಚರ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಅವರು ಚುನಾವಣಾ ಪ್ರಚಾರ ಆರಂಭಿಸಿದ್ದು, ಗೋಪಿನಾಥಂ, ಪುದೂರು, ಮಲೆಮಹದೇಶ್ವರ ಬೆಟ್ಟ ಸೇರಿದಂತೆ ವಿವಿಧ ಗ್ರಾಮಗಳಿಗೆ ಲಗ್ಗೆ ಇಟ್ಟು ಮತಬೇಟೆ ಆರಂಭಿಸಿದ್ದಾರೆ.
ಪ್ರಚಾರ ಆರಂಭಿಸಿದ ರಾಜಕೀಯ ನಾಯಕರು
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಇಂದಿನಿಂದಲೇ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿ ಅಭ್ಯರ್ಥಿ, ಶಾಸಕ ನಿರಂಜನಕುಮಾರ್ ಅವರಿಂದು ಗುಂಡ್ಲುಪೇಟೆ ತಾಲೂಕಿನ ಕಂದೇಗಾಲದ ಪಾರ್ವತಿ ಬೆಟ್ಟದಿಂದ ಪ್ರಚಾರ ಆರಂಭಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಸಾದ್ ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದ ಓಂಕಾರ ಸಿದ್ಧೇಶ್ವರನಿಗೆ ಪೂಜೆ ಸಲ್ಲಿಸಿ ಅಖಾಡಕ್ಕೆ ಇಳಿದಿದ್ದಾರೆ.
ಇನ್ನು ಹನೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಕಳೆದ 1 ತಿಂಗಳಿನಿಂದ ಮನೆ-ಮನೆ ಭೇಟಿ, ಪಂಚರತ್ನ ಯೋಜನೆ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಮತ್ತೊಂದೆಡೆ ಕದನ ಕಲಿಗಳ ನಡುವೆ ಶ್ರೀ ಸಾಮಾನ್ಯ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣದ ಮೂಲಕ ಯುವ ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ಟಿಕೆಟ್, ಚಾಮರಾಜನಗರ, ಹನೂರಿನಲ್ಲಿ ಬಿಜೆಪಿ ಟಿಕೆಟ್, ಜೆಡಿಎಸ್‌ನಿಂದ ಕೊಳ್ಳೇಗಾಲ, ಚಾಮರಾಜನಗರ ಟಿಕೆಟ್ ಇನ್ನೂ ಕೂಡ ಫೈನಲ್ ಆಗಬೇಕಿದ್ದು, ಟಿಕೆಟ್ ಘೋಷಣೆಯಾದ ಬಳಿಕ ಚುನಾವಣಾ ಕಾದಾಟ ಮತ್ತಷ್ಟು ಚುರುಕುಗೊಳ್ಳಲಿದೆ.
ಧ್ರವನಾರಾಯಣ್ ದರ್ಶನ್‌ಗೆ "ಕೈ" ಟಿಕೆಟ್ ಘೋಷಣೆ
ಇನ್ನು ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಇಲ್ಲಿ ನಿರೀಕ್ಷೆಯಂತೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಧ್ರುವನಾರಯಣ್ ಅವರ ಮಗ ದರ್ಶನ್ ಅವರಿಗೆ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಅಕಾಲಿಕ ಮರಣ ಹೊಂದಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ ಅವರ ಸಾವು ಮೈಸೂರು, ಚಾಮರಾಜನಗರದ ಕಾಂಗ್ರೆಸ್ ಕಾರ್ಯಕರ್ತರಿಗೆ ಬಹುದೊಡ್ಡ ಆಘಾತ ನೀಡಿತ್ತು. ನಂಜನಗೂಡು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್ ಧ್ರುವನಾರಾಯಣ ಅವರ ನಿಧನದಿಂದ ಈಗ ಕ್ಷೇತ್ರದಲ್ಲಿ ಅವರ ಪುತ್ರ ದರ್ಶನಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಬೇಕು ಎಂಬ ಆಗ್ರಹಗಳು ಹೆಚ್ಚಾಗಿದ್ದವು.
ನಂಜನಗೂಡು ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿದ್ದ ಆರ್. ಧ್ರುವನಾರಾಯಣ ಅವರು ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಪ್ರಚಾರ ಆರಂಭಿಸಿದ್ದರು. ನಿರ್ಣಯ ತೆಗೆದುಕೊಳ್ಳುವ ಸ್ಥಾನದಲ್ಲಿದ್ದ ಅವರಿಗೆ ಹೈಕಮಾಂಡ್ ಟಿಕೆಟ್ ಇಲ್ಲ ಎಂದು ಹೇಳುವ ಸಾಧ್ಯತೆಯೂ ಇರಲಿಲ್ಲ. ಆದರೆ ಅವರ ಅಕಾಲಿಕ ಮರಣದಿಂದ ನಂಜನಗೂಡು ಟಿಕೆಟ್ ಮಾಜಿ ಲೋಕೋಪಯೋಗಿ ಸಚಿವ ಎಚ್‌ಸಿ ಮಹದೇವಪ್ಪ ಅವರಿಗೆ ಸಿಗುತ್ತದೆ ಎಂದು ಹೇಳಲಾಗಿತ್ತು.
ಆದರೆ ಆರ್ ಧ್ರುವನಾರಾಯಣ್ ನಿಧನದಿಂದ ಕಾರ್ಯಕರ್ತರು ಅವರ ಮಗ ದರ್ಶನ್‌ಗೆ ಟಿಕೆಟ್ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುಣ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರ ಮುಂದೆ ದುಂಬಾಲು ಬಿದ್ದಿದ್ದರು. ಧ್ರುವನಾರಾಯಣ್ ಮಗ ದರ್ಶನ್‌ಗೆ ಟಿಕೆಟ್ ಕೊಡಲೇಬೇಕು. ಇಲ್ಲದಿದ್ದರೆ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆ ಎರಡಲ್ಲೂ ಕಾಂಗ್ರೆಸ್ ಸೋಲಿಸುವುದಾಗಿ ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.












Click it and Unblock the Notifications