Mysuru Dasara: ಮಹಿಷ ಸಾಂಸ್ಕೃತಿಕ ಹಬ್ಬದ ಬಗ್ಗೆ ದಲಿತ ಸಂಘರ್ಷ ಸಮಿತಿಯ ಮುಖಂಡ ಹೇಳಿದ್ದೇನು ಗೊತ್ತಾ?
ಚಾಮರಾಜನಗರ, ಸೆಪ್ಟೆಂಬರ್, 26: ಈಗಾಗಲೇ ನಾಡಹಬ್ಬ ದಸರಾಗೆ ಭಾರೀ ಸಿದ್ಧತೆ ನಡೆದಿವೆ. ಇನ್ನು ವಿವಿಧ ಸಂಘಟನೆ ವತಿಯಿಂದ ಮೈಸೂರಿನಲ್ಲಿ ಸೆಪ್ಟೆಂಬರ್ 29ರಂದು ಮಹಿಷ ಮಂಡಲೋತ್ಸವ ಹಾಗೂ ರಾಜ್ಯದ ಮೂಲ ನಿವಾಸಿಗಳಿಂದ ಮಹಿಷ ಸಾಂಸ್ಕೃತಿಕ ಹಬ್ಬಕ್ಕೆ ಆಯೋಜನೆ ಮಾಡಲಾಗುತ್ತದೆ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ದಲಿತ ಸಂಘರ್ಷ ಸಮಿತಿಯ ಮುಖಂಡ ಕೆ.ಎಂ.ನಾಗರಾಜು ಮನವಿ ಮಾಡಿದರು.
ಮೈಸೂರಿನಿಂದ ಅಂದು ಬೆಳಗ್ಗೆ 8:30ಕ್ಕೆ ಬೈಕ್ ಜಾಥಾದ ಮೂಲಕ ಚಾಮುಂಡಿ ಬೆಟ್ಟಕ್ಕೆ ತೆರಳಿ ಅಲ್ಲಿರುವ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಗುವುದು. ಬಳಿಕ 10:30ಕ್ಕೆ ಮೈಸೂರಿನ ಪುರಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಗುರುವಾರ (ಸೆಪ್ಟೆಂಬರ್ 26) ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಹಿಷ ಎಂಬ ಹೆಸರಿನಿಂದ ಮೈಸೂರು ಎಂಬ ಹೆಸರು ಬಂದಿದೆ. ಮೈಸೂರು ಸಂಸ್ಕೃತಿಕ, ಪರಂಪರೆ ಉಳಿಸುವ ಅಗತ್ಯವಿದೆ. ಪ್ರತಿ ವರ್ಷದಂತೆ ಈ ಬಾರಿಯೂ ವಿಜೃಂಭಣೆಯಿಂದ ಮಹಿಷ ಮಂಡಲೋತ್ಸವ ಆಚರಣೆ ಮಾಡಲಾಗುವುದು. ಕಳೆದ ಬಾರಿ 30,000 ಜನರು ಸೇರಿದ್ದು, ವಿಚಾರಸಂಕಿರಣ ಆಯೋಜಿಸಲಾಗಿತ್ತು. ಈ ಬಾರಿಯೂ 30,000ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಇದೇ ವೇಳೆ, ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಘನತೆಯಿಂದ ಮಾತನಾಡಿದ್ದಾರೆ. ಆದರೆ, ಮಾಜಿ ಸಂಸದ ಪ್ರತಾಪ್ ಸಿಂಹ ವಿವೇಚನೆ ರಹಿತವಾಗಿ ಮಾತನಾಡಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಮಹಿಷ ಮಂಡೋಲತ್ಸವಕ್ಕೂ ಮುನ್ನ ಪ್ರತಾಪ್ ಸಿಂಹ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಸೇನಾ, ದಸಂಸ ಮುಖಂಡ ಯರಿಯೂರು ರಾಜಣ್ಣ, ಬಂಗಾರಸ್ವಾಮಿ ಹಾಜರಿದ್ದರು.
ಇನ್ನು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಜಂಬೂ ಸವಾರಿ ದಿನ ಚಿನ್ನದ ಅಂಬಾರಿ ಹೋರುವ ಗಜಪಡೆ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸುವ ಕುದುರೆಗಳಿಗೆ ಕುಶಾಲತೋಪುಗಳ ಶಬ್ದಕ್ಕೆ ಹೆದರದಂತೆ ತಾಲೀಮು ನೀಡಲಾಗುತ್ತಿದೆ.
ಈ ಕುಶಾಲತೋಪು ತಾಲೀಮಿನ ಮೊದಲನೇ ದಿನದ ನಾಲ್ಕನೇ ಹಂತದ ವೇಳೆ ದಸರಾ ಗಜಪಡೆ ಏಕಲವ್ಯ ಹಾಗೂ ಹಿರಣ್ಯ ಆನೆಗಳು ಗಾಬರಿಗೊಂಡಿದ್ದು, ಅವುಗಳನ್ನು ಮಾವುತರು-ಕಾವಾಡಿಗಳು ಸಮಾಧಾನ ಮಾಡಿದರು.
ನಗರದ ವಸ್ತು ಪ್ರದರ್ಶನ ಆವರಣದ ಪಾರ್ಕಿಂಗ್ ಸ್ಥಳದಲ್ಲಿ ದಸರಾ ಗಜಪಡೆ ಹಾಗೂ ಅಶ್ವದಳಕ್ಕೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಯನ್ನು ಅರಮನೆಯಿಂದ ಕರೆದುಕೊಂಡು ಹೋಗಿ, ಮೈದಾನದಲ್ಲಿ ಸಾಲಾಗಿ ನಿಲ್ಲಿಸಲಾಯಿತು. ಬಳಿಕ ಗಜಪಡೆಯ ಮುಂಭಾಗದಲ್ಲಿ ಕುಶಾಲತೋಪು ಹಾರಿಸುವ ಫಿರಂಗಿಗಳನ್ನು ಇಟ್ಟು ತಾಲೀಮು ನಡೆಸಲಾಯಿತು. ಇದಕ್ಕೂ ಮುನ್ನ ನಾಡದೇವತೆ ಪೂಜೆ ಸಲ್ಲಿಸಲಾಯಿತು. ನಂತರ, ಫಿರಂಗಿಗಳಿಂದ 21 ಸುತ್ತು ಕುಶಾಲತೋಪು ಸಿಡಿಸುವಿಕೆಯು ಮೊದಲ ದಿನದ ಅಭ್ಯಾಸದಲ್ಲಿ ನಡೆಯಿತು.












Click it and Unblock the Notifications