ಗುಂಡ್ಲುಪೇಟೆ: ನೀರಿಲ್ಲದ ಕೆರೆಗೆ ಕಾಲುವೆ ನಿರ್ಮಾಣ

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಅಕ್ಟೋಬರ್, 18: ಕಳೆದ ಹದಿನೈದು ವರ್ಷಗಳಿಂದ ಭರ್ತಿಯಾಗದ ಕೆರೆಯ ಅಂತರ್ಜಲ ವೃದ್ಧಿಸುವ ಯೋಜನೆಯನ್ನು ಕೈಗೊಳ್ಳುವ ಬದಲು ಲಕ್ಷಾಂತರ ರೂ. ವೆಚ್ಚದಲ್ಲಿ ಸರ್ಕಾರ ಕಾಲುವೆ ನಿರ್ಮಿಸುತ್ತಿದೆ.

ಇಲ್ಲಿಯ ಗುಂಡ್ಲುಪೇಟೆ ತಾಲ್ಲೂಕಿನ ಹುಲ್ಲಾಣ ಹುಲಿಕೆರೆ 15 ವರ್ಷದಿಂದ ನೀರಿಲ್ಲದೇ ಬತ್ತಿರುವುದು ಗೊತ್ತಿದ್ದರೂ ಸುಮಾರು ಮೂವತ್ತು ಲಕ್ಷ ರೂ. ವೆಚ್ಚದಲ್ಲಿ ಕಾಲುವೆ ನಿರ್ಮಿಸುತ್ತಿದ್ದು, ಗ್ರಾಮಸ್ಥರು ಈ ವಿಪರ್ಯಾಸಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Constructing channel for dry lake Hullana Hulikere

ಗುಂಡ್ಲುಪೇಟೆಯ ಸೋಮನಪುರ ಹಾಗೂ ಕೊಡಸೋಗೆ ಗ್ರಾಮಗಳ ಸಮೀಪದ ಹುಲ್ಲಾಣ ಹುಲಿಕೆರೆಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಸಣ್ಣನೀರಾವರಿ ಇಲಾಖೆಯು ಕೆರೆಗಳ ಆಧುನೀಕರಣ ಯೋಜನೆಯಲ್ಲಿ ಹೊಸದಾಗಿ ಕಾಲುವೆಗಳನ್ನು ನಿರ್ಮಾಣ ಮಾಡುತ್ತಿದೆ.

ಬರಿದಾದ ಕೆರೆಗೆ ಕಾಲುವೆ ನಿರ್ಮಾಣದ ಅವಶ್ಯಕತೆ ಇದೆಯಾ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ ಇದೇ ಹಣವನ್ನು ಕೆರೆಯ ಅಭಿವೃದ್ಧಿಗೆ ಉಪಯೋಗಿಸಬಹುದಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಸ್ಕಂದಗಿರಿ ಪಾರ್ವತಾಂಬಾ ಬೆಟ್ಟದ ಪಾಶ್ರ್ವದಲ್ಲಿ ಹುಲ್ಲಾಣ ಹುಲಿಕೆರೆಯಿದ್ದು ಇದು ಸುಮಾರು 70 ಎಕರೆ ಪ್ರದೇಶವನ್ನು ಹೊಂದಿದ್ದು, ಮಳೆಗಾಲದಲ್ಲಿ ಬೆಟ್ಟದಿಂದ ಬಂದ ನೀರು ಕೆರೆಯಲ್ಲಿ ಸಂಗ್ರವಾಗಿ ಕೆರೆ ತುಂಬುತ್ತಿತ್ತು.

ಆದರೆ ಕಾಲಾನಂತರದಲ್ಲಿ ಹುಲಿಕೆರೆಯ ಜಲಮಾರ್ಗಗಳು ಮುಚ್ಚಿಹೋಗಿರುವುದರಿಂದ ಕೆರೆ ಭರ್ತಿಯಾದ ನೆನಪೇ ಗ್ರಾಮಸ್ಥರಿಗೆ ಮರೆತು ಹೋಗಿದೆ.

Constructing channel for dry lake Hullana Hulikere

ನೀರು ತುಂಬಿ ಸುಮಾರು 15 ವರ್ಷಗಳೇ ಸಂದಿರುವುದರಿಂದ ಕೆರೆಗೆ ಸೇರಿದ ಕೆಲವು ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ. ಸುತ್ತಲಿನ ಪ್ರದೇಶವು ಒತ್ತುವರಿಯಾಗಿದೆ.

ಕೆರೆಯಲ್ಲಿ ಸವುಳು ಮಣ್ಣಿರುವ ಕಾರಣ ನೀರು ನಿಲ್ಲದೆ ಪೋಲಾಗುತ್ತಿತ್ತು. ಅಂತರ್ಜಲವೂ ಬತ್ತುತ್ತಿತ್ತು. ಅದನ್ನು ತಡೆಯುವ ಸಲುವಾಗಿ ಕೂಡಿದ ಕೆರೆಯಲ್ಲಿ ಹೆಚ್ಚುಕಾಲ ನೀರು ಸಂಗ್ರಹವಾಗಲಿ ಎಂದು ವರ್ಷಗಳ ಹಿಂದೆಯೇ ಸಣ್ಣನೀರಾವರಿ ಇಲಾಖೆಯು 50 ಲಕ್ಷ ರೂಪಾಯಿ ವ್ಯಯಿಸಿ ಮಳೆ ನೀರು ಸಂಗ್ರಹಕ್ಕೆ ಕ್ರಮ ಕೈಗೊಂಡಿತ್ತು.

ಕೆರೆಯ ಏರಿನಿರ್ಮಾಣ, ಹೂಳು ತೆಗೆಸುವುದು ಹಾಗೂ ಬೇರೆ ಕೆರೆಯಿಂದ ಜೇಡಿ ಮಣ್ಣನ್ನು ತಂದು ಸುರಿದು. ಮಳೆನೀರು ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಮಳೆ ಬಾರದೆ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ.

ಹೀಗಿದ್ದರೂ ಕೆರೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಬದಲಿಗೆ ಕೆರೆಯಿಂದ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸಲು 30 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 540 ಮೀಟರ್ ಉದ್ದದ ಕಾಲುವೆಯನ್ನು ನಿರ್ಮಾಣ ಮಾಡುತ್ತಿರುವುದು ಏತಕ್ಕೆ ಎಂಬುದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ಇನ್ನು ನಡೆಸುತ್ತಿರುವ ಕಾಮಗಾರಿಯಾದರೂ ಗುಣಮಟ್ಟದಿಂದ ಕೂಡಿದೆಯೇ ಅದು ಇಲ್ಲ. ಸಿಮೆಂಟ್ ಹಾಕಿದ ನಂತರ ಇದಕ್ಕೆ ನೀರು ಹಾಕದ ಪರಿಣಾಮವಾಗಿ ಕಾಮಗಾರಿಯು ಮುಗಿಯುವ ಮೊದಲೇ ಕುಸಿದು ಬೀಳುತ್ತಿದೆ ಎಂಬ ಆರೋಪವೂ ಇದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಲಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Department of small irrigation, constructing channel for dry lake Hullana Hulikere in gundlupet Chamaraja Nagar district.
Please Wait while comments are loading...