ಚಾಮರಾಜನಗರ: ಸಾಂಬಾರ್ ಜಿಂಕೆಯನ್ನು ಅಟ್ಟಾಡಿಸಿಕೊಂಡು ಬೇಟೆಯಾಡಿ ಸಿಗಿದು ತಿಂದ ಸೀಳು ನಾಯಿಗಳು
ಚಾಮರಾಜನಗರ, ಮಾರ್ಚ್, 26: ಸಾಂಬಾರ್ ಜಿಂಕೆಯೊಂದನ್ನು ಸೀಳುನಾಯಿಗಳು ಬೇಟೆಯಾಡಿ ಕಿತ್ತು ತಿನ್ನುತ್ತಿದ್ದ ಘಟನೆಯನ್ನು ಪ್ರವಾಸಿಗರು ಕಣ್ತುಂಬಿಕೊಂಡ ಘಟನೆ ಜನಪ್ರಿಯ ಸಫಾರಿ ಸ್ಥಳಗಳಲ್ಲಿ ಒಂದಾದ ಚಾಮರಾಜನಗರ ತಾಲೂಕಿನ ಕೆ.ಗುಡಿಯಲ್ಲಿ ನಡೆದಿದೆ.
ಕೆ.ಗುಡಿಯಲ್ಲಿ ಸೋಮವಾರ ಬೆಳಗಿನ ಸಫಾರಿಯಲ್ಲಿ ಈ ಘಟನೆ ನಡೆದಿದ್ದು, ಕೆರೆ ಬಳಿ ಸಾಂಬಾರ್ ಜಿಂಕೆಯನ್ನು ಸೀಳುನಾಯಿಗಳ ಗುಂಪು ಬೇಟೆಯಾಡಿ ತಿನ್ನುತ್ತಿದ್ದರೇ ಮತ್ತೊಂದು ಕಡೆ ಸೀಳುನಾಯಿಗಳ ಮರಿಗಳು ಚಿನ್ನಾಟದಲ್ಲಿ ತೊಡಗಿವೆ. ಸದ್ಯ, ಈ ವೀಡಿಯೋವನ್ನು ಸಂತೋಷ್ ಸುಬ್ರಹ್ಮಣ್ಯಂ ಎಂಬವರು ಅಪ್‌ಲೋಡ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇನ್ನು ನೆಟ್ಟಿಗರು ಈ ದೃಶ್ಯ ಕಂಡು ರೋಮಾಂಚಿತರಾಗಿದ್ದಾರೆ.

ಆನೆ ದಾಳಿಗೆ ಯುವಕ ಬಲಿ: ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ನಾಡಿನತ್ತ ಲಗ್ಗೆ ಇಡುವುದು ಹೆಚ್ಚಾಗಿಬಿಟ್ಟಿದೆ. ಅಷ್ಟೇ ಅಲ್ಲದೆ ಅವುಗಳು ಮನುಷ್ಯರ ಜೀವವನ್ನೇ ತೆಗೆಯುವ ಘಟನೆಗಳು ನಡೆಯುತ್ತಿವೆ. ಹಾಗೆಯೇ ಆನೆ ದಾಳಿಗೆ ಯುವಕ ಬಲಿ ಆಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕತ್ತೆಕಾಲು ಪೋಡು ಗ್ರಾಮದಲ್ಲಿ ನಡೆದಿತ್ತು.
ಕತ್ತೆಕಾಲು ಪೋಡು ಗ್ರಾಮದ ಮಾದ (23)ಎಂಬಾತ ಮೃತಪಟ್ಟ ದುರ್ದೈವಿ. ಹಿರಿಯಂಬಲ ಗ್ರಾಮಕ್ಕೆ ಹೋಗಿದ್ದ ಈತ ವಾಪಾಸ್ ಬರುತ್ತಿರುವಾಗ ಜಮೀನಿಗೆ ಲಗ್ಗೆ ಇಟ್ಟಿದ್ದ ಆನೆ ದಾಳಿ ನಡೆಸಿ ತುಳಿದು ಹಾಕಿದೆ. ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿ ಬೈಲೂರು ವಲಯದಲ್ಲಿ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಕೊಟ್ಟಿದ್ದರು.
ನೀರಿಗಾಗಿ ಕೆರೆಗೆ ಇಳಿದ ಹುಲಿ: ದಿನೇದಿನೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದು, ಇದರಿಂದ ಜನರು ಹೈರಾಣಾಗಿದ್ದಾರೆ. ಅಷ್ಟೆ ಅಲ್ಲದೇ ನಾಡಿನಂತೆ ಕಾಡಿನಲ್ಲೂ ಕೂಡ ಬಿಸಿಲ ಬೇಗೆಯಿಂದ ಬೇಸತ್ತ ಹುಲಿಯೊಂದು ಕಂಗಾಲಾಗಿ ಕೆರೆ ನೀರಿಗೆ ಇಳಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ನಡೆದಿದೆ.
ದೇಶದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಬಂಡೀಪುರದಲ್ಲಿ ಹುಲಿಯೊಂದು ಬಿಸಿಲ ಝಳ ತಾಳಲಾರದೇ ಕೆರೆಗೆ ಎಂಟ್ರಿ ಕೊಟ್ಟು ಈಜಾಡಿ ಮೈ ತಣಿಸಿಕೊಂಡಿದೆ. ಸದ್ಯ, ಕೆರೆಯಲ್ಲಿ ರಿಲ್ಯಾಕ್ಸ್‌ಗೆ ಜಾರಿದ ಹುಲಿಯನ್ನು ಕಂಡು ಸಫಾರಿಗೆ ತೆರಳಿದ್ದವರು ಖುಷ್ ಆಗಿದ್ದಾರೆ. ಅಲ್ಲದೆ ಈ ಹುಲಿಯ ಫೋಟೋವನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಇದೀಗ ಎಲ್ಲಡೆ ಭಾರೀ ವೈರಲ್ ಆಗುತ್ತಿದೆ.
ಇನ್ನು, ಹುಲಿ ಚಿನ್ನಾಟ ಮಂಗಳವಾರ (ಮಾರ್ಚ್ 12) ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.












Click it and Unblock the Notifications