ಕೋವಿಡ್ ಸೋಂಕಿತರ ಮನೆಯಿಂದ ಹಾಲು ಸ್ವೀಕರಿಸಲ್ಲವೆಂದ ಹಾಲು ಉತ್ಪಾದಕ ಸಂಘ
ಚಾಮರಾಜನಗರ, ಜೂನ್ 15: ಚಾಮರಾಜನಗರ ಜಿಲ್ಲೆಯ ಹಲವು ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕೋವಿಡ್ ಸೋಂಕಿತರು ಇರುವ ಮನೆಗಳಿಂದ 14 ದಿನಗಳ ಕಾಲ ಹಾಲು ಸ್ವೀಕರಿಸಲು ನಿರಾಕರಿಸಿರುವ ಮಾಹಿತಿ ವರದಿ ಆಗಿದೆ. ಸ್ಥಳೀಯವಾಗಿ ಈ ತೀರ್ಮಾನ ಕೈಗೊಂಡಿರುವುದರಿಂದ ಹೈನುಗಾರಿಕೆಯನ್ನೇ ನಂಬಿ ಬದುಕುವ ರೈತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ರಾಜ್ಯದ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಈ ಜಿಲ್ಲೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇಂದಿಗೂ ಹೈನುಗಾರಿಕೆಯೇ ಜೀವನಾಧಾರವಾಗಿದೆ. ಸೋಂಕಿತರು ಆಸ್ಪತ್ರೆ ಇಲ್ಲವೆ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಿದ್ದರೂ, ಮನೆಯ ಇತರರು ಸಹ ಹಾಲು ಹಾಕಲು ಅವಕಾಶವಿಲ್ಲದಂತಾಗಿದ್ದು, ದೈನಂದಿನ ಬದುಕಿಗೆ ಹೈನುಗಾರಿಕೆಯನ್ನೇ ನಂಬಿಕೊಂಡಿರುವ ನೂರಾರು ಕುಟುಂಬಗಳು ದಿಕ್ಕು ತೋಚದಂತಾಗಿವೆ.

ಹೈನುಗಾರರ ಕುಟುಂಬಗಳು ತೊಂದರೆ
ಚಾಮರಾಜನಗರ ಜಿಲ್ಲೆಯಲ್ಲಿ 475 ಹಾಲು ಉತ್ಪಾದಕ ಸಹಕಾರ ಸಂಘಗಳಿದ್ದು, ಹಲವು ಸಂಘಗಳಲ್ಲಿ ಇಂತಹ ನಿಯಮಗಳನ್ನು ಅಳವಡಿಸಿಕೊಂಡಿರುವುದರಿಂದ ಸೋಂಕು ತಗುಲಿದ ಹೈನುಗಾರರ ಕುಟುಂಬಗಳು ತೊಂದರೆಗೀಡಾಗಿವೆ. ಚಾಮರಾಜನಗರ ತಾಲೂಕು ಬಿಸಿಲವಾಡಿಯಲ್ಲಿ ಅಳಿಯ, ಮಗಳಿಗೆ ಕೊರೊನಾ ಪಾಸಿಟಿವ್ ಆದ ಕಾರಣ ರೈತ ನಾಗರಾಜಪ್ಪ ಕುಟುಂಬದಿಂದ ಹಾಲು ಹಾಕಿಸಿಕೊಳ್ಳಲು ಬಿಸಿಲವಾಡಿ ಹಾಲು ಉತ್ಪಾದಕರ ಸಹಕಾರ ಸಂಘ ನಿರಾಕರಿಸಿದೆ.

ಅಳಿಯ, ಮಗಳು ಚಾಮರಾಜನಗರದ ಕೇರ್ ಸೆಂಟರ್‌ನಲ್ಲಿದ್ದಾರೆ
ಸೋಂಕಿತರು ಗುಣಮುಖರಾಗಿ ವಾಪಸ್ ಬರುವವರೆಗೂ ಹಾಲು ಹಾಕುವುದು ಬೇಡ ಎಂದು ನಾಗರಾಜಪ್ಪ ಅವರಿಗೆ ತಿಳಿಸಲಾಗಿದೆ. "ಅಳಿಯ, ಮಗಳು ಇಬ್ಬರು ಚಾಮರಾಜನಗರದಲ್ಲಿರುವ ಕೇರ್ ಸೆಂಟರ್‌ನಲ್ಲಿದ್ದಾರೆ. ನಾನು, ನನ್ನ ಪತ್ನಿ ಎರಡು ಬಾರಿ ಟೆಸ್ಟ್ ಮಾಡಿಸಿದ್ದು, ಎರಡು ಬಾರಿಯು ನೆಗೆಟಿವ್ ಬಂದಿದೆ. ಆದರೂ ಡೈರಿಯಲ್ಲಿ 14 ದಿನಗಳ ಕಾಲ ಹಾಲು ಬೇಡವೆನ್ನುತ್ತಿದ್ದಾರೆ. ಹೀಗಾದರೆ ಜೀವನ ನಡೆಸುವುದಾದರೂ ಹೇಗೆ," ಎಂಬುದು ರೈತ ನಾಗರಾಜಪ್ಪ ಅವರ ಅಳಲಾಗಿದೆ.

ಇತರರಿಗೂ ಸೋಂಕು ಹರಡುವ ಸಾಧ್ಯತೆ
"ಪ್ರತಿದಿನ 10 ರಿಂದ 12 ಲೀಟರ್ ಹಾಲು ಹಾಕುತ್ತಿದ್ದೆವು. ಆದರೆ ಡೈರಿಯಲ್ಲಿ ಹಾಲು ಸ್ವೀಕರಿಸದ ಕಾರಣ ಕರೆದ ಹಾಲನ್ನು ನಾಯಿ, ಬೆಕ್ಕುಗಳಿಗೆ ಹಾಕುತ್ತಿದ್ದೇವೆ. ಹಾಲಿನಿಂದ ಬರುತ್ತಿದ್ದ ಆದಾಯ ನಿಂತು ಹೋಗಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ,'' ಎಂದು ರೈತ ಮಹಿಳೆ ರಾಜಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಬಿಸಿಲವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮಹೇಶ್, "ಹಾಲು ಉತ್ಪಾದಕರಿಗೆ ತೊಂದರೆ ಕೊಡಬೇಕು ಎಂಬುದು ನಮ್ಮ ಉದ್ದೇಶವಲ್ಲ. ಯಾವುದೇ ಸೋಂಕಿತರು ಅಥವಾ ಅವರ ಸಂಪರ್ಕಿತರು ಡೈರಿಗೆ ಬಂದರೆ ಇತರರಿಗೂ ಸೋಂಕು ಹರಡುವ ಸಾಧ್ಯತೆಗಳಿರುವುದರಿಂದ, ಅಂತಹವರಿಂದ 8-10 ದಿನಗಳ ಕಾಲ ಹಾಲು ಹಾಕಿಸಿಕೊಳ್ಳಬಾರದೆಂದು ಸಂಘದ ಆಡಳಿತ ಮಂಡಳಿ ನಿರ್ಧರಿಸಿದೆ,'' ಎಂದು ತಿಳಿಸಿದರು.

ನಾವು ಯಾರಿಗೂ ಸೂಚನೆ ಕೊಟ್ಟಿಲ್ಲ
ಈ ಕುರಿತು ಪ್ರತಿಕ್ರಿಯಿಸಿದ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್, "ಸೋಂಕಿತರ ಕುಟುಂಬದಿಂದ ಹಾಲು ಹಾಕಿಸಿಕೊಳ್ಳಬಾರದೆಂದು ನಾವು ಯಾರಿಗೂ ಸೂಚನೆ ಕೊಟ್ಟಿಲ್ಲ. ಸ್ಥಳೀಯವಾಗಿ ಡೈರಿ ಆಡಳಿತ ಮಂಡಳಿಗಳು ಇಂತಹ ನಿರ್ಧಾರ ಕೈಗೊಂಡಿರುವುದು ತಮ್ಮ ಗಮನಕ್ಕೆ ಬಂದಿದೆ. ಕೊರೊನಾ ನೆಗೆಟಿವ್ ಇದ್ದವರಿಂದ ಹಾಗೂ ಸೋಂಕಿತರ ಕುಟುಂಬದ ಇತರರಿಂದ ಹಾಲು ಹಾಕಿಸಿಕೊಳ್ಳಲು ನಿರಾಕರಿಸಬಾರದೆಂದು,'' ತಿಳಿಸುತ್ತೇವೆ ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘಗಳು ಕನಿಷ್ಠ ಆರೋಗ್ಯ ಇಲಾಖೆಯ ಮಾರ್ಗದರ್ಶನ ಪಡೆದು ಸೂಕ್ತ ತೀರ್ಮಾನ ಕೈಗೊಳ್ಳಲಿ ಎಂದು ಬಡ ಹೈನುಗಾರಿಕೆ ಕುಟುಂಬಗಳ ಒತ್ತಾಯವಾಗಿದೆ.