ಗುಂಡ್ಲುಪೇಟೆ ಅಕ್ರಮ ಗಣಿಗಾರಿಕೆಯ ಹಿಂದೆ ಪ್ರಭಾವಿಗಳ ಕೈವಾಡ

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ನವೆಂಬರ್ 17: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಹಿಂದೆ ಪ್ರಭಾವಿಗಳು ನಿಂತಿರುವ ಕಾರಣ ಸದ್ಯಕ್ಕೆ ಯಾರೇ ಹೋರಾಟ ನಡೆಸಿದರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಾಗಿದೆ.

ರಾಜ್ಯದ ಅಕ್ರಮ ಗಣಿಗಾರಿಕೆ ತನಿಖೆ ಎಸ್ಐಟಿ ಹೆಗಲಿಗೆ

ರೈತರು, ಗ್ರಾಮಸ್ಥರು, ರೈತ ಸಂಘದ ಕಾರ್ಯಕರ್ತರು ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿದ್ದರೂ ಅದು ಜಿಲ್ಲಾಡಳಿತಕ್ಕೆ ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ. ಪರಿಣಾಮ ಗುಂಡ್ಲುಪೇಟೆಯಿಂದ ಕರಿಕಲ್ಲುಗಳು ಲಾರಿಗಳಲ್ಲಿ ನೇರವಾಗಿ ಕೇರಳ, ತಮಿಳುನಾಡಿಗೆ ಸೇರುತ್ತಿದೆ.

Chamarajanagara: Influential personalities behind illegal mining

ಬಂಡೀಪುರ ಅರಣ್ಯ ವ್ಯಾಪ್ತಿಯ ರಸ್ತೆಗಳಲ್ಲೇ ಈ ಲಾರಿಗಳು ಸಾಗುತ್ತಿದ್ದರೂ ಅರಣ್ಯ ಇಲಾಖೆ ತಲೆಕೆಡಿಸಿಕೊಳ್ಳುತ್ತಿಲ್ಲ. ಪ್ರಾದೇಶಿಕ ಸಾರಿಗೆ ಕಚೇರಿಯ ಎದುರೇ ಅಧಿಕ ಭಾರಹೊತ್ತು ಟಿಪ್ಪರ್ ಲಾರಿಗಳು ಹೋದರೂ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ್ಲ. ಯಾವತ್ತಾದರೊಮ್ಮೆ ಅಧಿಕ ಭಾರದ ಪ್ರಕರಣ ದಾಖಲಿಸಿ ಸುಮ್ಮನಾಗುತ್ತಿದ್ದಾರೆ.

ಬಂಡೀಪುರ ವ್ಯಾಪ್ತಿಯ ಗುಮ್ಮಕಲ್ಲುಗುಡ್ಡದಲ್ಲಿ ಕಳೆದ ಕೆಲವು ವರ್ಷಗಳಿಂದ ನಿಯಮ ಮೀರಿ ಭೂಮಿಯನ್ನು ಕೊರೆದು ಗಣಿಗಾರಿಕೆ ನಡೆಸಿದ್ದು, ಬೆಟ್ಟಗಳು ಕರಗಿ ಹೋಗಿವೆ. ಹಿರೀಕಾಟಿ, ಬೆಳಚಲವಾಡಿ, ಅರೇಪುರ ತೊಂಡವಾಡಿಗಳಲ್ಲಿಯೂ ಭೂಮಿಯನ್ನು ಬಗೆಯಲಾಗಿದೆ. ಈ ಗಣಿಗಾರಿಕೆಯಿಂದ ಅಂತರ್ಜಲ ಕುಸಿದಿದೆ. ಜತೆಗೆ ಸ್ಪೋಟದೊಂದಿಗೆ ಕಲ್ಲುಗಳು ಸಿಡಿದು ಬಂದು ಜಮೀನಿಗೆ ಚಿಕ್ಕ ಚೂರುಗಳಾಗಿ ಬೀಳುತ್ತಿವೆ. ಇದರಿಂದ ಕೃಷಿ ಮಾಡಲು ಕಷ್ಟವಾಗುತ್ತಿದೆ. ಕೆಲವೆಡೆ ಮನೆಗಳ ಮೇಲೆಯೂ ಪರಿಣಾಮ ಬೀರಿದೆ.

Chamarajanagara: Influential personalities behind illegal mining

ಗುಂಡ್ಲುಪೇಟೆಗೆ ಸಮೀಪದ ಗುಮ್ಮಕಲ್ಲುಗುಡ್ಡ, ಮಡಹಳ್ಳಿಯ ಗುಡ್ಡ, ಬೇಗೂರು ಹೋಬಳಿಯ ಹಸಗೂಲಿಗುಡ್ಡ, ಬೆಳಚಲವಾಡಿ, ಅರೇಪುರ, ಹಿರೀಕಾಟಿ, ತೊಂಡವಾಡಿ ಗ್ರಾಮಗಳಲ್ಲಿ ಕೆಲವೇ ಮಂದಿ ಮಾತ್ರ ಅನುಮತಿ ಪಡೆದು ಗಣಿಗಾರಿಕೆ ನಡೆಸುತ್ತಿದ್ದರೆ, ಮತ್ತೆ ಕೆಲವರು ಯಾವುದೇ ಪರವಾನಗಿ ಇಲ್ಲದೆ ಗಣಿಗಾರಿಕೆ ನಡೆಸುತ್ತಿದ್ದು ಇವರ ಬೆನ್ನಿಗೆ ಪ್ರಭಾವಿಗಳು ನಿಂತಿರುವ ಕಾರಣ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಬೆಟ್ಟಗಳೆಲ್ಲ ಕರಗಿ ಹೋಗುವುದರಲ್ಲಿ ಅಚ್ಚರಿ ಪಡಬೇಕಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Common men in Chamarajanagara doubted, there are some influential persons behind illegal mining which has been taking place in the district since many years.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ