ಬಂಡೀಪುರ: ಆಹಾರವಿಲ್ಲದೆ ಪರಿತಪಿಸುತ್ತಿರುವ ಸಾಕಾನೆಗಳು
ಚಾಮರಾಜನಗರ, ಜನವರಿ 16: ಮಾವುತರು ಮತ್ತು ಕಾವಾಡಿಗಳ ಆರೈಕೆಯಲ್ಲಿ ದಿನಕಳೆಯುತ್ತಿದ್ದ ಸಾಕಾನೆಗಳು ಇದೀಗ ಕಾಡಾನೆಗಳಂತೆ ಅರಣ್ಯದಲ್ಲಿ ಅಲೆದಾಡುತ್ತಾ ಸೊಪ್ಪು ತಿಂದು ಬದುಕುವಂತಹ ಪರಿಸ್ಥಿತಿ ಬಂಡೀಪುರದಲ್ಲಿ ನಿರ್ಮಾಣವಾಗಿದೆ.
ಈ ಸುದ್ದಿ ಕೇಳಲು ಅಚ್ಚರಿಯಾದರೂ ಸತ್ಯ. ಇದುವರೆಗೆ ಭತ್ತ, ಹುಲ್ಲು, ಬೆಲ್ಲ ಮುಂತಾದವುಗಳನ್ನೊಳಗೊಂಡ ಆಹಾರವನ್ನು ಸೇವಿಸುತ್ತಾ ನೆಮ್ಮದಿಯಾಗಿದ್ದ ಸಾಕಾನೆಗಳು ಅನಿವಾರ್ಯವಾಗಿ ಅರಣ್ಯದಲ್ಲಿ ಸೊಪ್ಪು ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ಅರಣ್ಯ ಇಲಾಖೆಯನ್ನು ಜನ ಸಂಶಯದಿಂದ ನೋಡುವಂತಾಗಿದೆ.
ಬಂಡೀಪುರದಲ್ಲಿ ಪ್ರವಾಸಿಗರಿಂದ ಲಕ್ಷಾಂತರ ರೂ.ನಷ್ಟು ಆದಾಯವಿದ್ದರೂ ಸಾಕಾನೆಗಳಿಗೆ ಆಹಾರವಿಲ್ಲ ಎಂಬ ಕಾರಣಕ್ಕೆ ಅರಣ್ಯಕ್ಕೆ ಅಟ್ಟಿರುವುದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಬಂಡೀಪುರ ಅಭಯಾರಣ್ಯದಲ್ಲಿರುವ ಮೂರು ದೊಡ್ಡ ಆನೆಗಳಾದ ಜಯಪ್ರಕಾಶ್, ಲಕ್ಷ್ಮೀ, ಚೈತ್ರ ಹಾಗೂ ಎರಡು ಮರಿಗಳಿದ್ದು, ಇವುಗಳಿಗೆ ಪ್ರತಿನಿತ್ಯ ಭತ್ತದ ಹುಲ್ಲು, ಮೊಳಕೆ ಕಾಲು, ಕಾಯಿ, ಬೆಲ್ಲ, ಹುರುಳಿ ಕಾಳನ್ನು ನಿಗದಿತ ಪ್ರಮಾಣದಲ್ಲಿ ನೀಡಲಾಗುತ್ತಿತ್ತು. ಆದರೆ ಒಂದು ವಾರದಿಂದ ಸಾಕಾನೆಗಳ ಶಿಬಿರಕ್ಕೆ ಆಹಾರ ಧಾನ್ಯ ವಿತರಣೆಯಾಗಲಿಲ್ಲ. ಹೀಗಾಗಿ ಅನ್ಯ ಮಾರ್ಗವಿಲ್ಲದೆ ಸಾಕಾನೆಗಳನ್ನು ಅರಣ್ಯಕ್ಕೆ ಬಿಡಲಾಗಿದೆ ಎನ್ನಲಾಗುತ್ತಿದೆ.

ಪ್ರತಿ ತಿಂಗಳಿಗೆ ಮೂರು ಆನೆಗಳಿಗೆ ಒಟ್ಟು 600 ಕೆ.ಜಿ. ಭತ್ತದ ಹುಲ್ಲು, 950 ಕೆಜಿ ಭತ್ತ, 25 ಕೆ.ಜಿ ಬೆಲ್ಲ, 25 ಕೆ.ಜಿ.ಉಪ್ಪು, ಎರಡು ಮರಿಯಾನೆಗಳಿಗೆ 25 ಕೆ.ಜಿ. ಅಕ್ಕಿಯನ್ನು ಪೌಷ್ಠಿಕ ಆಹಾರವನ್ನು ನೀಡಬೇಕಾಗಿದೆ. ಆದರೆ ಸರ್ಕಾರದಿಂದ ನೀಡಲಾಗುವ ಪೌಷ್ಠಿಕ ಆಹಾರಗಳ ದಾಸ್ತಾನು ಸರಬರಾಜಾಗದೆ ಇರುವುದರಿಂದ ಆಹಾರವಿಲ್ಲದೆ ಸಾಕಾನೆಗಳು ಕಾಡಿನಲ್ಲಿರುವ ಒಣ ಮೇವು, ಪೊದೆ ಹಾಗೂ ಗಿಡ-ಗಂಟಿಗಳನ್ನೇ ತಿಂದು ತೃಪ್ತಿಪಟ್ಟುಕೊಳ್ಳುತ್ತಿವೆ.
ಕಳೆದೊಂದು ವಾರದಿಂದ ಇದು ಪುನರಾವರ್ತನೆಯಾಗುತ್ತಿದ್ದು, ಆಹಾರವಿಲ್ಲದ ಕಾರಣ ಅರಣ್ಯದಲ್ಲಿರುವ ಐದು ಆನೆಗಳು ಒಂದು ವಾರದಿಂದ ಬಂಡೀಪುರದ ಶಿಬಿರಕ್ಕೆ ವಾಪಸ್ ಬಾರದೆ ಕಾಡಿನಲ್ಲೇ ಅಲೆದಾಡುತ್ತಿವೆ. ಇವುಗಳಿಗೆ ಸಂಬಂಧಪಟ್ಟ ಕಾವಾಡಿಗಳು ಆನೆಗಳು ಇರುವ ಜಾಗವನ್ನು ಪತ್ತೆ ಮಾಡಿ ಅವುಗಳ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಬರುತ್ತಿದ್ದಾರೆ. ಈ ಪರಿಸ್ಥಿತಿ ಇನ್ನೆಷ್ಟು ದಿನ ಮುಂದುವರೆಯಲಿದೆಯೋ ಕಾದು ನೋಡಬೇಕಿದೆ.












Click it and Unblock the Notifications