• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಷಪ್ರಸಾದ: ಪತ್ನಿ, 2 ತಿಂಗಳ ಹಸುಗೂಸಿನೆದುರಲ್ಲೇ ಕುಸಿದು ಮೃತನಾದ ಪತಿ

|

ಚಾಮರಾಜನಗರ, ಡಿಸೆಂಬರ್ 15: 'ಮದುವೆಯಾಗಿ ಎಷ್ಟೋ ವರ್ಷವಾದರೂ ಮಕ್ಕಳಿರಲಿಲ್ಲ... ಕಿಚ್ಚುಗತ್ತಿ ಮಾರಮ್ಮನಿಗೆ ಹರಕೆ ಕೇಳಿಕೊಂಡ ಮೇಲೆ ಮಗು ಹುಟ್ಟಿತ್ತು. ಆದರೆ, ಹರಕೆ ತೀರಿಸೋಕಂತ ಬಂದಿದ್ದ ಪತಿಯೇ ಯಮನ ಪಾದ ಸೇರಿದರು. ಇನ್ನು ನನಗೆ, ನನ್ನ ಮಗುವಿಗೆ ಗತಿಯಾರು?'

... ದುಃಖತಪ್ತ ಮಹಿಳೆಯೊಬ್ಬರು ಹಾಗೆ ಹೇಳುತ್ತ ತಲೆ ಚಚ್ಚಿಕೊಳ್ಳುತ್ತ, ರೋದಿಸುತ್ತಿದ್ದರೆ ಕರುಳು ಕಿತ್ತುಬರುತ್ತದೆ. ಇದೆಂಥ ಅನ್ಯಾಯ? ಇದೆಂಥ ವಿಧಿಯಾಟ? ತಪ್ಪು ಯಾರದೋ, ಶಿಕ್ಷೆ ಇನ್ಯಾರಿಗೋ! ಸಂತಾನ ಭಾಗ್ಯ ನೀಡುವ ಕರುಣಾಮಯಿಯಾಗಿ ಪ್ರಸಿದ್ಧಿ ಪಡೆದಿರುವ ಕಿಚ್ಚುಗತ್ತಿ ಮಾರಮ್ಮನ ನೆಲೆಯಲ್ಲಿ ದುರಂತವೊಂದು ನಡೆದಿದೆ.

ವಿಧಿಯಾಟ ನೋಡಿ! ಪ್ರಸಾದ ತಯಾರಿಸಿದ್ದು ಅಪ್ಪ, ತಿಂದು ಮೃತಳಾದ ಮಗಳು!

ಸಕಲ ಇಷ್ಟಾರ್ಥ ಪೂರೈಸುವ ದೇವರ ನೆಲೆಯಲ್ಲಿ ಎಂಥ ಅಮಾನವೀಯತೆ? ದೇವರ ಗೋಪುರಕ್ಕಾಗಿ ಕಿತ್ತಾಡಿ, ಅಮಾಯಕರ ಹತ್ಯೆಗೆ ಕಾರಣವಾಗುವುದು ಯಾವ ರೀತಿಯ ಭಕ್ತಿ? ಚಾಮರಾಜನಗರದ ಸುಳವಾಡಿಯಲ್ಲಿ ನಡೆದ 'ವಿಷ ಪ್ರಸಾದ'ದ ದುರಂತದ ಸುತ್ತ ಯಮಯಾತನೆ ನೀಡುವಂಥ ನೂರಾರು ಕತೆಗಳಿವೆ... ತಂದೆಯನ್ನು ಕಳೆದುಕೊಂಡ ಮಗಳು, ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿ, ಪತ್ನಿಯನ್ನು ಕಳೆದುಕೊಂಡ ಪತಿ... ಹೀಗೆ ಯಾವುದೋ ಪ್ರತೀಕಾರದ ಬೆಂಕಿಯಲ್ಲಿ ಸುಟ್ಟು ಕರಕಲಾದ ಅಮಾಯಕರ ದೌರ್ಭಾಗ್ಯದ ಕತೆ ಘಟನೆಯ ಸುತ್ತ ಸುರುಳಿ ಬಿಚ್ಚುತ್ತದೆ.

ಮಗುವನ್ನು ಕರುಣಿಸಿದ್ದ ಕಿಚ್ಚುಗತ್ತಿ ಮಾರಮ್ಮ!

ಮಗುವನ್ನು ಕರುಣಿಸಿದ್ದ ಕಿಚ್ಚುಗತ್ತಿ ಮಾರಮ್ಮ!

ಶಾಂತರಾಜು ಅವರಿಗೆ 42 ವರ್ಷ ವಯಸ್ಸು. ಬಿದರಹಳ್ಳಿ ಗ್ರಾಮದ ಶಾಂತರಾಜು ಕಳೆದ ಹನ್ನೆರಡು ವರ್ಷದ ಹಿಂದೆ ಶಿವಗಾಮಿ ಎಂಬುವವರನ್ನು ಮದುವೆಯಾಗಿದ್ದರು. ಇಬ್ಬರೂ ಕೂಲಿ ಕೆಲಸ ಮಾಡಿ ಬದುಕು ನಡೆಸುವವರು. ಹಣಕ್ಕೆ ಕೊರತೆಯಿದ್ದರೂ, ಪ್ರೀತಿಗಿರಲಿಲ್ಲ. ಇದ್ದ ಒಂದೇ ಒಂದು ಕೊರತೆ ಎಂದರೆ ಮಕ್ಕಳಿಲ್ಲ ಎಂಬುದು. ಕಿಚ್ಚುಗತ್ತಿ ಮಾರಮ್ಮನಿಗೆ ಬೇಡಿಕೊಂಡರೆ ಇಷ್ಟಾರ್ಥ ಪೂರೈಸುತ್ತದೆ ಎಂಬ ಹಿತೈಶಿಗಳ ಮಾತು ಕೇಳಿ ಈ ದೇವಾಲಯಕ್ಕೆ ಹರಕೆ ಹೊತ್ತಿದ್ದರು. ಕೊನೆಗೂ ಕಿಚ್ಚುಗತ್ತಿ ಮಾರಮ್ಮ ಕಣ್ತೆರೆದಿದ್ದಳು. ದಂಪತಿಗೆ ಮುದ್ದಾದ ಮಗು ಹುಟ್ಟಿತ್ತು.

ಅಪ್ಪ ಹೋದರು..ಅಮ್ಮನನ್ನಾದರೂ ಉಳಿಸಿಕೊಡಿ...ಮಕ್ಕಳ ಗೋಳು

ಕಣ್ಣೆದುರಲ್ಲೇ ಪತಿಯ ಸಾವು!

ಕಣ್ಣೆದುರಲ್ಲೇ ಪತಿಯ ಸಾವು!

ಹರಕೆ ತೀರಿಸುವ ಸಲುವಾಗಿ ಎರಡು ತಿಂಗಳ ಹಸುಗೂಸನ್ನು ದಂಪತಿ ಮಾರಮ್ಮದ ದರ್ಶನಕ್ಕೆಂದು ಹೊತ್ತುತಂದಿದ್ದರು. ಮಗು ಅಳುತ್ತಿದ್ದರಿಂದ ಶಿವಗಾಮಿ ಪ್ರಸಾದವನ್ನು ಹಾಗೆಯೇ ಇಟ್ಟು ಮಗುವನ್ನು ಸಂತೈಸುತ್ತಿದ್ದರು. ಆದರೆ ಇಷ್ಟಾರ್ಥ ಪೂರೈಸಿದ ದೇವರ ಪ್ರಸಾದವನ್ನು ಕಣ್ಣಿಗೊತ್ತಿಕೊಂಡು ತಿಂದಿದ್ದ ಶಾಂತರಾಜುವಿನ ದೇಹದಲ್ಲಿ ಇದ್ದಕ್ಕಿದ್ದಂತೆಯೇ ಯಮಯಾತನೆ ಆರಂಭವಾಗಿತ್ತು. ನೋಡುನೋಡುತ್ತಿದ್ದಂತೆಯೇ ಕಣ್ಣುಗಳೆಲ್ಲ ನೀಲಿಯಾಗಿ, ದೇವಾಲಯದ ಎದುರಲ್ಲೇ ಕುಸಿದು ಬಿದ್ದ ಶಾಂತರಾಜು ಪ್ರೀತಿಯ ಪತ್ನಿ, ಮುದ್ದಿನ ಹಸುಗೂಸನ್ನು ಇನ್ನೆಂದಿಗೂ ನೋಡಲಾಗದ ಲೋಕಕ್ಕೆ ತೆರಳಿದ್ದ. ಹೌದು, ಶಾಂತರಾಜು ಇನ್ನೆಂದಿಗೂ ಬರಲಾರ!

ದೇಗುಲದ ಪ್ರಸಾದ ತಯಾರಿಸಿದ ಅಡುಗೆಯವನಿಗೆ ಮೊದಲೇ ಅನುಮಾನ ಬಂದಿತ್ತು!

ಮನೆಗೆ ಬಂದಿದ್ದು ಪ್ರಸಾದವಲ್ಲ, ಪತಿಯ ಕಳೇಬರ!

ಮನೆಗೆ ಬಂದಿದ್ದು ಪ್ರಸಾದವಲ್ಲ, ಪತಿಯ ಕಳೇಬರ!

ಸಾಮಿದೊರೆ 38 ವರ್ಷ ವಯಸ್ಸಿನ ಕೂಲಿ ಕೆಲಸಗಾರ. ಮದುವೆಯಾಗಿ ಎಂಟು ವರ್ಷವಾದರೂ ಮಕ್ಕಳಾಗಿರಲಿಲ್ಲ. ಕಿಚ್ಚುಗತ್ತಿ ಮಾರಮ್ಮ ಕೃಪೆ ತೋರಿಯಾಳು ಎಂದು ನಿಯಮಿತವಾಗಿ ಈ ದೇವಾಲಯಕ್ಕೆ ಬಂದು ಪ್ರಾರ್ಥಿಸುತ್ತಿದ್ದ. ಶುಕ್ರವಾರವೂ ಹಾಗೆಯೇ ದೇವಾಲಯಕ್ಕೆ ಬಂದಿದ್ದ ಸಾಮಿದೊರೆ ಮರಳಿ ಮನೆಗೆ ಬರಲಿಲ್ಲ... ಪತಿ ಪ್ರಸಾದ ತಂದಾರು ಎಂದು ಕಾಯುತ್ತಿದ್ದ ಪತ್ನಿ ಮಂಗಮ್ಮಗೆ ತಿಳಿದಿದ್ದು, 'ದೇವಾಲಯದ ಪ್ರಸಾದ ವಿಷವಾಗಿದೆ. ಅದನ್ನು ತಿಂದು ಕೆಲವರು ಮೃತರಾಗಿದ್ದೆ. ಅವರಲ್ಲಿ ನಿಮ್ಮ ಪತಿಯೂ ಒಬ್ಬ' ಎಂಬ ಸುದ್ದಿ! ಪತಿ ಪ್ರಸಾದ ತರುತ್ತಾರೆಂದು ಕಾಯುತ್ತಿದ್ದರೆ ಮನೆಗೆ ಬಂದಿದ್ದು ಪತಿಯ ಕಳೇಬರ!

ನನಗೆ ಮಕ್ಕಳು ಬೇಡ, ಪತಿಯನ್ನು ವಾಪಸ್ ಕೊಡಿ

ನನಗೆ ಮಕ್ಕಳು ಬೇಡ, ಪತಿಯನ್ನು ವಾಪಸ್ ಕೊಡಿ

ಘಟನೆಯ ಸುದ್ದಿ ತಿಳಿದಾಗಿನಿಂದಲೂ ಮಂಗಮ್ಮ ಅವರದು ಒಂದೇ ಕೂಗು. "ನನಗೆ ಮಕ್ಕಳು ಬೇಡ. ಪತಿಯನ್ನು ವಾಪಸ್ ಕೊಡಿ ಸಾಕು! ನಾವಿಬ್ಬರು ಈಗ ಎಷ್ಟು ಖುಷಿಯಾಗಿ ಬದುಕುತ್ತಿದ್ದೆವೋ ಹಾಗೆಯೇ ಬದುಕುತ್ತೇವೆ. ಮಕ್ಕಳಿಲ್ಲದಿದ್ದರೂ ಪರವಾಗಿಲ್ಲ...ದಯವಿಟ್ಟು ನನ್ನ ಪತಿಯನ್ನು ವಾಪಸ್ ಕೊಡಿ.." ಪ್ರತೀಕಾರದ ದುರ್ಬುದ್ಧಿಯಿಂದ ಇಂಥ ಅಮಾನುಷ ಕೃತ್ಯ ಎಸಗಿದವರಿಗೆ ಮಂಗಮ್ಮನ ತೇವಭರಿತ ಕಣ್ಣು, ಅಂಗಲಾಚುವ ಮೊರೆತ ಕೇಳುತ್ತದೆಯೇ?

ತಂದೆ ತಯಾರಿಸಿದ ಪ್ರಸಾದ ತಿಂದು ಮಗಳ ಸಾವು

ತಂದೆ ತಯಾರಿಸಿದ ಪ್ರಸಾದ ತಿಂದು ಮಗಳ ಸಾವು

ಆತ ಪುಟ್ಟಸ್ವಾಮಿ. ಹಲವು ವರ್ಷಗಳಿಂದ ದೇವಾಲಯದಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಪುಟ್ಟಸ್ವಾಮಿಗೆ ಪ್ರಸಾದ ಎಲ್ಲ ದಿನದಂತಿಲ್ಲ ಎಂಬ ಅನುಮಾನ ಬಂದಿತ್ತು. ಅದನ್ನು ಸ್ವಲ್ಪ ಸೇವಿಸಿಯೂ ನೋಡಿದ್ದರು. ಆದರೆ ತಮಗೆ ಏನೂ ಆಗದಿರುವುದನ್ನು ಕಂಡು, ತಮಗೆಲ್ಲೋ ಭ್ರಮೆ ಇರಬೇಕು ಎಂದು ಸುಮ್ಮನಾಗಿದ್ದರು. ಆದರೆ ತಂದೆಯೇ ಮಾಡಿದ ಪ್ರಸಾದವನ್ನು ತಿಂದು ಪುಟ್ಟಸ್ವಾಮಿ ಅವರ ಹನ್ನೆರಡು ವರ್ಷದ ಮಗಳು ನಳಿನಿ ಸಾವನ್ನಪ್ಪಿದ್ದಾರೆ. 'ಅನುಮಾನ ಬರುತ್ತಿದ್ದಂತೆಯೇ ನಾನು ಏನಾದರೂ ಮಾಡಬೇಕಿತ್ತು. ಸುಮ್ಮನಾಗಬಾರದಿತ್ತು' ಎಂದು ತಾವು ಮಾಡದ ತಪ್ಪಿಗೆ ಪುಟ್ಟಸ್ವಾಮಿ ಪರಿತಪಿಸುತ್ತಿದ್ದಾರೆ.

English summary
Chamarajanagar (Karnataka) Temple food poison : There are many sad stories around the incidents. A father came to fulfill harake died in front of his 2 month old baby, who was born as a blessings from Maramma goddess.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X