Chamarajanagar Lok Sabha Constituency: ಕೆ.ಶಿವರಾಂ ಪತ್ನಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್?
ಚಾಮರಾಜನಗರ, ಮಾರ್ಚ್, 18: ನಿವೃತ್ತ ಐಎಎಸ್ ಅಧಿಕಾರಿ ದಿವಂಗತ ಕೆ.ಶಿವರಾಂ ಅವರ ಪತ್ನಿ ವಾಣಿ ಕೆ.ಶಿವರಾಂ ಅವರಿಗೆ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಈಗಾಗಲೇ ಟಿಕೆಟ್ ಕೈ ತಪ್ಪಿದೆ. ಇನ್ನು ಕಾಂಗ್ರೆಸ್‌ನಲ್ಲಿ ಅವಕಾಶಕ್ಕಾಗಿ ಕಾಯಲಾಗುತ್ತಿದೆ. ಅಲ್ಲೂ ಟಿಕೆಟ್ ಕೈ ತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಅರ್.ರಮೇಶ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಕೆ.ಶಿವರಾಂ ಅವರು ನಿವೃತ್ತಿ ನಂತರ ಕಳೆದ 10 ವರ್ಷಗಳಿಂದ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿ ಪಕ್ಷದ ಎಲ್ಲಾ ಚುನಾವಣೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ಕೊನೆಯ ಹಂತದವರಿಗೆ ಅವರು ಚಾಲ್ತಿಯಲ್ಲಿದ್ದು, ನಾನಾ ಕಾರಣಗಳಿಂದ ಟಿಕೆಟ್ ವಂಚಿತರಾಗಿದ್ದು, ಈ ಭಾರಿ ಶತಾಗತಾಯ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಪಡೆಯುವ ಉತ್ಸಾಹದಲ್ಲಿದ್ದರು. ಬಿಜೆಪಿ ವರಿಷ್ಠರಾದ ಯಡಿಯೂರಪ್ಪ ಹಾಗೂ ಅನೇಕ ಮುಖಂಡರು ಸಹ ಕೆ.ಶಿವರಾಂ ಅವರಿಗೆ ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದರು.

ಅದರಂತೆಯೇ ಶಿವರಾಂ ಅವರು ಸಹ ಕ್ಷೇತ್ರದ ವ್ಯಾಪ್ತಿಯ 500ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರವಾಸ ಕೈಗೊಂಡು ಸಂಘಟನೆ ಮಾಡಿದ್ದರು ಎಂದರು. ಆದರೆ, ವಿಧಿಯಾಟ ನಮ್ಮ ನಾಯಕರಾದ ಕೆ.ಶಿವರಾಂ ಅವರು ಹೃದಯಘಾತದಿಂದ ಅಕಾಲಿಕ ಮರಣ ಹೊಂದಿದರು. ಇದರಿಂದ ರಾಜ್ಯ ಹಾಗೂ ಛಲವಾದಿ ಮಹಾಸಭಾಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಭಾವುಕರಾದರು.
ಈಗ ಅವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಛಲವಾದಿ ಮಹಾಸಭಾದಿಂದ ಅವರ ಕುಟುಂಬದ ನೋವಿನ ಮಧ್ಯೆಯು ಅವರ ಪತ್ನಿ ವಾಣಿ ಶಿವರಾಂ ಅವರನ್ನು ಭೇಟಿಯಾಗಿ, ಕೆ.ಶಿವರಾಂ ಅಣ್ಣ ಅವರ ಸ್ಥಾನವನ್ನು ನೀವು ತುಂಬಬೇಕು. ಈ ನಿಟ್ಟಿನಲ್ಲಿ ಸಕ್ರಿಯ ರಾಜಕಾರಣ ಹಾಗೂ ಸಮಾಜ ಸೇವೆಗೆ ಬರುವಂತೆ ಅವರನ್ನು ಒಪ್ಪಿಸಿದ್ದೇವೆ ಎಂದರು.
ಹೀಗಾಗಿ, ಕೆ.ಶಿವರಾಂ ಅವರ ಬದಲಾಗಿ ಅವರ ಪತ್ನಿ ವಾಣಿ ಶಿವರಾಂ ಅವರಿಗೆ ಚಾಮರಾಜನಗರ ಕ್ಷೇತ್ರದಿಂದ ಟಿಕೆಟ್ ನೀಡಿದರೆ ಗೆಲುವು ಖಚಿತ. ಶಿವರಾಂ ಅವರು ಮಾಡಿರುವ ಜನಪರ ಕೆಲಸಗಳು ಹಾಗೂ ಅವರ ವರ್ಚಸ್ಸು ಕ್ಷೇತ್ರದಲ್ಲಿ ಅನುಕಂಪದ ಅಲೆಯಲ್ಲಿ ವಾಣಿ ಶಿವರಾಂ ಗೆಲುವು ಸಾಧಿಸಲಿದ್ದಾರೆ.
ಆದ್ದರಿಂದ ಬಿಜೆಪಿ ಅಥವಾ ಕಾಂಗ್ರೆಸ್ ಟಿಕೆಟ್ ನೀಡಿ ಸ್ಪರ್ಧೆಗೆ ಅವಕಾಶ ಮಾಡಬೇಕು ಮನವಿ ಮಾಡಿದ್ದೇವು. ಆದರೆ ಈಗಾಗಲೇ ಬಿಜೆಪಿ ಅಧಿಕೃತವಾಗಿ ಮಾಜಿ ಶಾಸಕ ಎಸ್.ಬಾಲರಾಜು ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಕಾಂಗ್ರೆಸ್0ನಲ್ಲಿ ಅವಕಾಶಕ್ಕಾಗಿ ಕಾದು ನೋಡುತ್ತೇವೆ. ಅಲ್ಲೂ ಟಿಕೆಟ್ ಕೈ ತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ವಾಣಿ ಕೆ.ಶಿವರಾಂ ಅವರು ಕಣಕ್ಕಿಳಿಯಲಿದ್ದಾರೆ ಎಂದು ರಮೇಶ್ ತಿಳಿಸಿದರು.












Click it and Unblock the Notifications