Chamarajanagar Lok sabha Constituency: ಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯಂದಿರಿಗೆ ತಪ್ಪಿದ ಬಿಜೆಪಿ ಟಿಕೆಟ್: ಮತ್ಯಾರಿಗೆ?
ಚಾಮರಾಜನಗರ, ಮಾರ್ಚ್, 13: ಲೋಕಸಭಾ ಚುನಾವಣೆಯಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದ ಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯಂದಿರಿಗೆ ಟಿಕೆಟ್ ಕೈ ತಪ್ಪಿದ್ದು, ಮಾಜಿ ಶಾಸಕ ಬಾಲಾರಾಜು ಕಮಲಪಡೆ ಹುರಿಯಾಳಾಗಿದ್ದಾರೆ.
2004ರಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಶಾಸಕರಾಗಿದ್ದ ಬಾಲರಾಜು ಬಳಿಕ ನಡೆದ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರೂ ಕೈ ಹಿಡಿದಿರಲಿಲ್ಲ. 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಬಾಲರಾಜು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಗುರುರಿಸಿಕೊಂಡು ಕ್ಷೇತ್ರದಲ್ಲಿ ಓಡಾಟ ನಡೆಸಿದ್ದರು.

ಬಿ.ಎಸ್.ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಾಲರಾಜು ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಮೊದಲ ಬಾರಿಗೆ ಲೋಕಸಭಾ ಅಖಾಡಕ್ಕೆ ಇಳಿಯಲಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಾಮರಾಜನಗರದಲ್ಲಿ ಮೊದಲ ಬಾರಿಗೆ ಪ್ರಸಾದ್ ಕಮಲ ಅರಳಿಸಿದ್ದರು.
ಟಿಕೆಟ್ ಆಕಾಂಕ್ಷಿಗಳು ಇದ್ದರರ್ಯಾರು?: ಬಿಜೆಪಿಯಿಂದ ಟಿಕೆಟ್ ಪಡೆಯಲು ಆಕಾಂಕ್ಷಿಗಳ ಸರತಿ ಸಾಲೆ ನಿರ್ಮಾಣವಾಗಿತ್ತು. ಎಸ್.ಬಾಲರಾಜು, ಪ್ರಸಾದ್ ಅಳಿಯಂದಿರಾದ ಡಾ.ಮೋಹನ್, ಹರ್ಷವರ್ಧನ್, ದಿ.ಕೆ.ಶಿವರಾಂ, ಎಸ್.ಮಹಾದೇವಯ್ಯ, ವೆಂಕಟರಮಣಸ್ವಾಮಿ ಪಾಪು ಆಕಾಂಕ್ಷಿಗಳಾಗಿ ಗುರುತಿಸಿಕೊಂಡಿದ್ದರು.
ಬಾಲರಾಜು ವಿವರ: ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಬಾಲರಾಜು 1991ರಲ್ಲಿ ಮುತ್ಸದಿ ರಾಜಕಾರಣಿ ಎಂ.ರಾಜಶೇಖರಮೂರ್ತಿ ಅವರ ಗರಡಿಯಿಂದ ಬಂದ ರಾಜಕಾರಣಿಯಾಗಿದ್ದಾರೆ. ರಾಜಶೇಖರಮೂರ್ತಿ ಶಿಷ್ಯನಾಗಿ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಬಂದು ವಿವಿಧ ಘಟಕಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅದಾದ ಬಳಿಕ, 1993ರಲ್ಲಿ ಟಿಎಪಿಎಂಎಸ್ ನಿರ್ದೇಶಕರಾಗಿ ಆಯ್ಕೆಯಾಗಿ, 1997ರಲ್ಲಿ ಯುವ ಕಾಂಗ್ರೆಸ್ ಚಾಮರಾಜನಗರ ವಿಭಾಗದ ಅಧ್ಯಕ್ಷರಾದರು.
1999ರಲ್ಲಿ ರಾಜಶೇಖರಮೂರ್ತಿ ಅವರೊಟ್ಟಿಗೆ ಬಿಜೆಪಿಗೆ ಸೇರ್ಪಡೆಗೊಂಡು ಕೊಳ್ಳೇಗಾಲ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 5,421 ಮತಗಳಿಂದ ಸೋಲು ಕಂಡರು. ಅದೇ ವರ್ಷ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ-ಜೆಡಿಯು ಹೊಂದಾಣಿಕೆ ನಡುವೆ ಟಿಕೆಟ್ ಕೈ ತಪ್ಪಿದ್ದರಿಂದ 2004ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಮೊದಲ ಬಾರಿಗೆ ಶಾಸಕರಾದರು.
2013ರಲ್ಲಿ ಯಡಿಯೂರಪ್ಪ ಅವರನ್ನು ಹಿಂಬಾಲಿಸಿ ಕೆಜೆಪಿ ಸೇರಿದ ಬಾಲರಾಜು ಮತ್ತೇ ಚುನಾವಣೆಗೆ ನಿಂತು ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
2013 ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹೊರಬಂದು ಬಿಜೆಪಿ ಸೇರ್ಪಡೆಗೊಂಡು ಎನ್.ಮಹೇಶ್ ಪರ ಪ್ರಚಾರ ನಡೆಸಿದ್ದರು.
ವಿಧಾನಸಭಾ ಚುನಾವಣೆಯಾದ ಬಳಿಕ ಲೋಕಸಭಾ ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದ ಬಾಲರಾಜು ಅವರಿಗೆ ಹೈಕಮಾಂಡ್ ಒಲವು ತೋರಿ ಟಿಕೆಟ್ ಕೊಟ್ಟಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆ-ಸಿದ್ದು ಹವಾ ಎರಡೂ ಇದ್ದು, ಮತದಾರ ಯಾರಿಗೆ ಮಣೆ ಹಾಕುತ್ತಾರೆಂದಯ ಕಾದು ನೋಡಬೇಕಿದೆ.












Click it and Unblock the Notifications