ಆನೆ-ಹುಲಿಗೆ ಹೆದರದವರನ್ನು ಕಂಗೆಡಿಸಿದ ಕೋತಿಗಳು
ಚಾಮರಾಜನಗರ, ನವೆಂಬರ್3: ಕಾಡಿನಲ್ಲೇ ಜೀವಿಸಿ ಕಾಡನ್ನೇ ದೇವರಾಗಿ ಕಾಣುವ ಸೋಲಿಗರಿಗೆ ಆನೆ, ಹುಲಿ ಸೇರಿದಂತೆ ಕಾಡುಪ್ರಾಣಿಗಳು ಎಂದರೆ ಯಾವ ಭಯವೂ ಇಲ್ಲ. ಅವುಗಳಿಂದ ತೊಂದರೆಯೂ ಇಲ್ಲ. ಆದರೆ ಚಾಮರಾಜನಗರ ತಾಲೂಕಿನ ಕನ್ನೇರಿ ಕಾಲೋನಿಯ ಜನರು ಕೋತಿಗಳ ಕಾಟದಿಂದ ಬೇಸತ್ತು ರೋಸಿ ಹೋಗಿದ್ದಾರೆ.
ಕನ್ನೇರಿ ಕಾಲೋನಿ ಗಿರಿಜನರ ಹಾಡಿಯಲ್ಲಿ 150ಕ್ಕೂ ಹೆಚ್ಚು ಮನೆಗಳಿದ್ದು, ಬಿಳಿಗಿರಿರಂಗನ ಬೆಟ್ಟ ದೇವಾಲಯದ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕೆ.ಗುಡಿ ವಲಯ ವ್ಯಾಪ್ತಿಗೆ ಒಳಪಡಲಿದೆ. ಈ ಹಿಂದೆ ಇಲ್ಲಿ ಇರದ ಕೋತಿಗಳು ಕಳೆದ 15 ದಿನಗಳಿಂದ ಪ್ರತ್ಯಕ್ಷವಾಗಿದ್ದು ವನ್ಯಪ್ರಾಣಿಗಳಿಗೆ ಹೆದರದ ಇಲ್ಲಿನ ಜನರು ಈಗ ಕೋತಿ ಕಾಟಕ್ಕೆ ಬೇಸತ್ತಿದ್ದಾರೆ.

ಕೂಲಿ ಮಾಡಿ ತಿನ್ನುವವರಿಗೆ ಪಜೀತಿ ತಂದಿಟ್ಟ ಅರಣ್ಯ ಇಲಾಖೆ
ಬಿಳಿಗಿರಿರಂಗನಾಥ ದೇವಸ್ಥಾನದಲ್ಲಿದ್ದ ಅಥವಾ ಬೇರೆ ಕಡೆಯಲ್ಲಿದ್ದ ಕೋತಿಗಳನ್ನು ಹಿಡಿದು ಅರಣ್ಯ ಇಲಾಖೆಯವರು ಕಾಲೋನಿ ಬಳಿ ತಂದು ಬಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದ ಜನರಿಗೆ ಫಜೀತಿ ತಂದಿಟ್ಟಿದ್ದಾರೆ. ಮನೆಯ ಹೆಂಚನ್ನು ತೆಗೆದು ಒಳಗಿಳಿಯುವ ಕೋತಿಗಳು ಕಾಳು- ಕಡ್ಡಿ, ಊಟ, ಊಟದ ಪಾತ್ರೆಗಳು, ಮೊಟ್ಟೆ, ಎಣ್ಣೆ ಪ್ಯಾಕೆಟ್ ಎಲ್ಲವನ್ನೂ ತೆಗೆದುಕೊಂಡು ಹೋಗುತ್ತವೆ. ನಾವುಗಳು ಕೂಲಿ ಕೆಲಸಕ್ಕೆ ಹೋದರೆ ಅವುಗಳದ್ದೇ ರಾಜ್ಯಭಾರ ಎಂದು ಕಾಲೋನಿಯ ಕೇತಮ್ಮ ಎನ್ನುವರರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕೋತಿಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರ ಆಗ್ರಹ
ಕೋತಿಗಳಿಂದ ತುಂಬಾ ತೊಂದರೆ ಉಂಟಾಗುತ್ತಿದೆ, ಸರ್ಕಾರ ಕೊಡುವ ಪೌಷ್ಟಿಕ ಆಹಾರವೂ ಕಪಿಗಳ ಪಾಲಾಗುತ್ತಿದೆ. ಈ ಭಾಗದಲ್ಲಿ 300ಕ್ಕೂ ಹೆಚ್ಚು ಕೋತಿಗಳಿವೆ. ನಮಗೆ ಆನೆ-ಹುಲಿಯಿಂದ ತೊಂದರೆ ಇಲ್ ಕೋತಿಗಳಿಂದಲೇ ತೊಂದರೆ. ಬೇರೆ ಭಾಗದಿಂದ ತಂದು ಇಲ್ಲಿಗೆ ಬಿಟ್ಟಿರುವ ಕೋತಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆಹಿಡಿಯಬೇಕು ಎಂದು ಕನ್ನೇರಿ ಕಾಲೋನಿ ನಿವಾಸಿ ರಂಗೇಗೌಡ ಒತ್ತಾಯಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕೋತಿಗಳ ಕಾಟಕ್ಕೆ ಬೇಸತ್ತಿರುವ ಕಾಡಿನ ಜನರ ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕಿದೆ.
ನಕಲಿ ವೈದ್ಯರಿಗೆ ಬಿಸಿಮುಟ್ಟಿಸಿದ ಚಾಮರಾಜನಗರ ಆರೋಗ್ಯ ಇಲಾಖೆ
ಚಾಮರಾಜನಗರದಲ್ಲಿ ವಿವಿಧಡೆ ನಕಲಿ ಕ್ಲಿನಿಕ್‌ಗಳ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ವಿವಿಧ ತಾಲೂಕುಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

ಮೂರು ಕ್ಲಿನಿಕ್‌ಗಳಿಗೆ ಬೀಗ ಜಡಿದ ಆರೋಗ್ಯಾಧಿಕಾರಿಗಳು
ಚಾಮರಾಜನಗರದಲ್ಲಿ ಜನರ ಜೀವದೊಟ್ಟಿಗೆ ಚೆಲ್ಲಾಟ ಆಡುತ್ತಿದ್ದ ನಕಲಿ ಅಲೋಪತಿ ವೈದ್ಯರಿಗೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಹನೂರು ತಾಲೂಕಿನ ಕೌದಳ್ಳಿಯಲ್ಲಿ ಮೂರು ಕ್ಲಿನಿಕ್‌ಗಳನ್ನು ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ. ಜಿಲ್ಲಾ ಡಿಎಷ್‌ಓ ಡಾ.ವಿಶ್ವೇಶ್ವರಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಕೌದಳ್ಳಿ ಗ್ರಾಮದಲ್ಲಿ ಇರುವ ಆದಮ್ ಕ್ಲಿನಿಕ್, ಜನತಾ ಕ್ಲಿನಿಕ್ ಹಾಗೂ ದೀಪಾ ಕ್ಲಿನಿಕ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ ಅಧಿಕಾರಿಗಳು ಕ್ಲಿನಿಕ್‌ಗಳಿಗೆ ಬೀಗ ಜಡಿದಿದ್ದಾರೆ.

ಆಯುಷ್ ವೈದ್ಯರಿಂದ ಅಲೋಪತಿ ಚಿಕಿತ್ಸೆ
ಹನೂರು ತಾಲೂಕಿನ ವಿವಿಧಡೆ ನಕಲಿ ಕ್ಲಿನಿಕ್‌ಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಅಜ್ಜೀಪುರ, ರಾಮಾಪುರ ಮತ್ತು ಕೂಡ್ಲೂರು, ಹೂಗ್ಯಂ ಇನ್ನಿತರ ಭಾಗಗಳಲ್ಲಿ ಇರುವ ಕ್ಲಿನಿಕ್‌ಗಳನ್ನು ಸಹ ಅಧಿಕಾರಿಗಳ ತಂಡ ಪರಿಶೀಲನೆ ಮಾಡಲಿದ್ದಾರೆ. ಕ್ಲಿನಿಕ್ ಲೈಸೆನ್ಸ್ ಒಬ್ಬರದ್ದಾದರೇ, ಚಿಕಿತ್ಸೆ ಕೊಡುವವರು ಮತ್ತೊಬ್ಬರು, ಹಾಗೂ ಆಯುಷ್ ವೈದ್ಯರು ಅಲೋಪತಿ ಚಿಕಿತ್ಸೆ ಕೊಡುತ್ತಿರುವುದು ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ.












Click it and Unblock the Notifications