ವೀರಪ್ಪನ್ ನಿಂದ ಸುದ್ದಿಯಲ್ಲಿದ್ದ ಪೊನ್ನಾಚಿ ಗ್ರಾಪಂನಲ್ಲಿ ಅಭಿವೃದ್ಧಿ ಕೇಳೋರಿಲ್ಲ

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಮೇ 20 : ವೀರಪ್ಪನ್ ಉಪಟಳದ ಕಾಲದಲ್ಲಿ ಪೊನ್ನಾಚಿ ಗ್ರಾಮದ ಹೆಸರು ಆಗಾಗ ಸುದ್ದಿಗೆ ಬರುತ್ತಿತ್ತು. ಈಗಲೂ ಆ ಬಗ್ಗೆ ಹೇಳಲು ಕಾರಣವಿದೆ. ಇಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ.

ಹನೂರು ತಾಲೂಕು ವ್ಯಾಪ್ತಿಯ, ತಮಿಳುನಾಡು- ಕರ್ನಾಟಕ ಗಡಿಭಾಗದಲ್ಲಿರುವ ಪೊನ್ನಾಚಿ ಗ್ರಾಮ ಪಂಚಾಯಿತಿ ಅರಣ್ಯದಂಚಿನಲ್ಲಿದೆ. ಹೀಗಾಗಿ ಇಲ್ಲಿನ ಅಭಿವೃದ್ಧಿಗಾಗಿ ಮಾಡಿದ ಯೋಜನೆಗಳೆಲ್ಲವೂ ಹಳ್ಳ ಹಿಡಿದಿವೆ. ಆದರೆ ಅದಕ್ಕೆ ಬಳಕೆಯಾಗಬೇಕಾದ ಹಣ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಜೇಬು ಸೇರಿದೆ. ಈ ಸಂಬಂಧ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಸಿಇಒಗೂ ದೂರು ಸಲ್ಲಿಸಲಾಗಿದೆ.[ಗಂಡ ಮಾತನಾಡಲಿಲ್ಲ ಎಂದು ಬೆಂಕಿ ಹೊತ್ತಿಸಿಕೊಂಡ ಇಪ್ಪತ್ತರ ಗೃಹಿಣಿ]

Chamarajanagar district Ponnachi GP development neglected

ಪೊನ್ನಾಚಿ ಗ್ರಾಮ ಪಂಚಾಯಿತಿಯಲ್ಲಿ 2016-17ನೇ ಸಾಲಿನಲ್ಲಿ ಗ್ರಾಮಗಳಲ್ಲಿನ ಬೀದಿ ದೀಪ ನಿರ್ವಹಣೆ, ಕುಡಿಯುವ ನೀರು, ಚರಂಡಿ ಹೂಳೆತ್ತುವುದು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು 14ನೇ ಹಣಕಾಸು ಯೋಜನೆಯಡಿ 9,85,678 ರುಪಾಯಿ ಅನುದಾನ ಬಂದಿತ್ತು. ಆದರೂ ಅದನ್ನು ಸಮರ್ಪಕ ಬಳಕೆ ಮಾಡದಿದ್ದರೂ ಸುಳ್ಳು ದಾಖಲೆ ಸೃಷ್ಟಿಸಿ, ಪಂಚಾಯಿತಿ ಕಾರ್ಯದರ್ಶಿ ಹಾಗೂ ಸದಸ್ಯರು ಹಣ ಗುಳುಂ ಮಾಡಿರುವುದು ಈಗ ಸುದ್ದಿಗೆ ಗ್ರಾಸವಾಗಿದೆ.

ನಾಮ್ ಕೇ ವಾಸ್ತೆ ಕಾಮಗಾರಿ
ಈ ಯೋಜನೆಯ ಹಣದಲ್ಲಿ ಅಸ್ತೂರಿನಲ್ಲಿ ಜಾನುವಾರುಗಳು ಕುಡಿಯಲು ನೀರು ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳನ್ನು ನಾಮ್ ಕೇ ವಾಸ್ತೆ ನಿರ್ಮಿಸಲಾಗಿದೆ. ಚರಂಡಿ ಹೂಳೆತ್ತದಿದ್ದರೂ ಈ ಹಿಂದೆ ಹೂಳು ತೆಗೆದಂತಹ ಸಂದರ್ಭದಲ್ಲಿ ಪೋಟೋಗಳನ್ನು ಬಳಸಿ ಬಿಲ್ ಮಾಡಿಕೊಳ್ಳಲಾಗಿದೆ.

ಬೀದಿ ದೀಪಗಳ ನಿರ್ವಹಣೆ ಮಾಡದಿದ್ದರೂ ಸಿಕ್ಕಾಪಟ್ಟೆ ಬಲ್ಬುಗಳು, ಎಲೆಕ್ಟ್ರಾನಿಕ್ ಹಾಗೂ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ ಉಪಕರಣಗಳು, ಸಾಮಗ್ರಿಗಳನ್ನು ಖರೀದಿಸಿದಂತೆ ಎಲೆಕ್ಟ್ರಿಕಲ್ ಅಂಗಡಿಗಳಿಂದ ನಕಲಿ ಬಿಲ್ ಪಡೆದು ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ.[ಗುಂಡ್ಲುಪೇಟೆಯ ದೊಡ್ಡಕೆರೆ, ಚೋಳರ ಕಾಲದ ಕಲ್ಯಾಣಿಯೇ?]

Chamarajanagar district Ponnachi GP development neglected

ಗ್ರಾಮ ಸಭೆ ನಡೆಸದೆ ತಮಗೆ ಬೇಕಾದವರಿಗೆ ಹಾಗೂ ಹಣ ನೀಡಿದವರಿಗೆ ಮನೆಗಳನ್ನು ನೀಡುವ ಮೂಲಕ ಅರ್ಹ ಫಲಾನುಭವಿಗಳಿಗೆ ವಂಚಿಸಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.

ಕಾಟಾಚಾರದ ಕೆಲಸ
ಅನ್ಯ ಗ್ರಾಮಗಳ ಜನರ ಹೆಸರಿನಲ್ಲಿ ಜಾಬ್ ಕಾರ್ಡ್ ನೀಡಿರುವುದಲ್ಲದೆ, ಚೆನ್ನಾಗಿರುವ ಮಣ್ಣಿನ ರಸ್ತೆಯನ್ನು ಜೆಸಿಬಿಯಿಂದ ಕೆದಕಿ ಮತ್ತೆ ರಸ್ತೆ ಮಾಡುವುದು ಸೇರಿದಂತೆ ರಾತ್ರೋರಾತ್ರಿ ಜೆಸಿಬಿ ಟ್ರ್ಯಾಕ್ಟರ್ ಮತ್ತಿತರ ಯಂತ್ರೋಪಕರಣಗಳಿಂದ ನಿರುಪಯುಕ್ತ, ಕಾಟಾಚಾರದ ಹಾಗೂ ಕಳಪೆ ಕಾಮಗಾರಿಗಳನ್ನು ನಡೆಸಿ, ನಕಲಿ ಬಿಲ್ ಸೃಷ್ಟಿಸಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಕಾಮಗಾರಿ ಮುಗಿಯುವ ಮುನ್ನವೆ ಪೂರ್ಣವಾಗಿದೆ ಎಂದು ದಾಖಲೆ ಸೃಷ್ಠಿ ಮಾಡಲಾಗಿದೆ.

ಈ ಪಂಚಾಯಿತಿ ವ್ಯಾಪಿಯ ಅಸ್ತೂರಿಗೆ ಕುಡಿಯುವ ನೀರು ಪೂರೈಸಲು 2013-14 ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಕಾಮಗಾರಿ ಕೈಗೊಂಡು, ಬಿಲ್ ಪಡೆದುಕೊಳ್ಳಲಾಗಿತ್ತು. ಆದರೂ ನೀರು ಬಿಟ್ಟಿರಲಿಲ್ಲ. ಇದೀಗ ಅಳಿದುಳಿದ ನಾಶವಾಗಿದ್ದ ಕಡೆ ಕೆಲ ಪೈಪುಗಳನ್ನು ಅಳವಡಿಸಿ, ಹಳೆಯ ತೊಂಬೆಗಳಿಗೆ ನೀರು ಬಿಡುವ ಮೂಲಕ ಅದೇ ಕಾಮಗಾರಿಯನ್ನು ಮತ್ತೆ ಹೊಸದಾಗಿ ನಡೆಸಿದಂತೆ ನಕಲಿ ದಾಖಲೆ ಸೃಷ್ಟಿಸಲಾಗಿದೆ.[ಬಂಡೀಪುರ ಅರಣ್ಯದಲ್ಲಿ ಪ್ರವಾಸಿಗರಿಗೆ ಹೇಳೋರಿಲ್ಲ, ಕೇಳೋರಿಲ್ಲ!]

2016-17ನೇ ಸಾಲಿನಲ್ಲೂ ಸುಮಾರು 10 ಲಕ್ಷ ಬಿಲ್ ಪಡೆದುಕೊಂಡು ಹಣ ಗುಳುಂ ಮಾಡಲಾಗಿದೆ ಎಂಬ ದೂರು ಕೇಳಿ ಬಂದಿದೆ. ತನಿಖೆ ನಡೆದರೆ ಎಲ್ಲವೂ ಬಯಲಾಗಲಿದೆ. ಜಿಲ್ಲಾ ಪಂಚಾಯಿತಿ ಸಿಇಒ ದೂರು ಸ್ವೀಕರಿಸಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

{promotion-urls}15:57:57

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chamarajanagar district, Hanur taluk, Ponnachi GP development neglected. There is an allegation of corruption RS 10 lakhs in 2016-17.
Please Wait while comments are loading...