ಅಮೇರಿಕಾದ ಸುಂಕಕ್ಕೆ ಚಾಮರಾಜನಗರ ಕರಿಕಲ್ಲು ಉದ್ಯಮ ತಲ್ಲಣ: ಯಾಕೆ?
ಚಾಮರಾಜನಗರ, ಏಪ್ರಿಲ್ 23: ಅಮೇರಿಕಾದಲ್ಲಿ ಆಮದು ಸುಂಕ ಹೆಚ್ಚಳ ಮಾಡುತ್ತಿದ್ದಂತೆಯೇ ಇತ್ತ ಚಾಮರಾಜನಗರ ಜಿಲ್ಲೆಯಲ್ಲಿ ಕರಿಕಲ್ಲು ಉದ್ಯಮ ನಡೆಸುವ ಉದ್ಯಮಿಗಳು ತಲ್ಲಣಗೊಂಡಿದ್ದಾರೆ ಎಂಬ ವಿಚಾರ ಅಚ್ಚರಿ ತರಬಹುದು. ಅಷ್ಟೇ ಅಲ್ಲದೇ, ಅಮೇರಿಕಕ್ಕೂ ಚಾಮರಾಜನಗರದ ಕರಿಕಲ್ಲು ಉದ್ಯಮಕ್ಕೂ ಏನು ಸಂಬಂಧ ಎಂಬ ಪ್ರಶ್ನೆಯೂ ಮೂಡದಿರದು. ಆದರೆ ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಇಲ್ಲಿನ ಕರಿಕಲ್ಲಿನ ಪ್ರಾಮುಖ್ಯತೆ ಏನು ಎಂಬುದನ್ನು ನಾವು ಮೊದಲಿಗೆ ತಿಳಿದುಕೊಳ್ಳಬೇಕಾಗುತ್ತದೆ.
ಚಾಮರಾಜನಗರದ ಕರಿಕಲ್ಲಿಗೆ ದೇಶ ವಿದೇಶಗಳಲ್ಲಿ ಭಾರೀ ಬೇಡಿಕೆಯಿದೆ. ಹೀಗಾಗಿ ಜಿಲ್ಲೆಯಲ್ಲಿ ಗಣಿಗಾರಿಕೆ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಇಲ್ಲಿನ ಕಲ್ಲುಗಳನ್ನು ಬಳಸಿಕೊಂಡು ಹೊರದೇಶದಲ್ಲಿ ಹಲವು ರೀತಿಯ ಶಿಲೆಗಳ ತಯಾರಿ ಮಾಡಲಾಗುತ್ತದೆ. ಹೀಗಾಗಿ ಉದ್ಯಮಿಗಳು ಹೊರದೇಶಗಳಿಗೆ ರಫ್ತು ಮಾಡುವ ಮೂಲಕ ಬೃಹತ್ ವಹಿವಾಟುಗಳನ್ನು ನಡೆಸುತ್ತಿದ್ದಾರೆ. ಚಾಮರಾಜನಗರ ಮತ್ತು ತಮಿಳುನಾಡು ಗಡಿಭಾಗದಲ್ಲಿರುವ ಕರಿಕಲ್ಲುಗಳಿಗೆ ಬಹುಬೇಡಿಕೆಯಿದ್ದು ಇಲ್ಲಿನ ಕಲ್ಲು ಹಡಗಿನ ಮೂಲಕ ವಿದೇಶಗಳಿಗೆ ಅದರಲ್ಲೂ ಅಮೇರಿಕಾಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತಿದೆ.

ಹಾಗೆನೋಡಿದರೆ ಚಾಮರಾಜನಗರ ಪ್ರಕೃತಿಯ ಚೆಲುವನ್ನು ಹೊಂದಿದ್ದಲ್ಲದೆ, ಇಲ್ಲಿನ ಮಣ್ಣಿನಲ್ಲಿ ಹತ್ತು ಹಲವು ವಿಶೇಷತೆಗಳಿದ್ದು ಅದರಲ್ಲಿ ಕರಿಕಲ್ಲು ಕೂಡ ಒಂದಾಗಿದೆ. ಈ ಕರಿಕಲ್ಲು ಆದಾಯ ತಂದುಕೊಡುತ್ತಿದ್ದು, ದೇಶದಲ್ಲಿ ಮಾತ್ರವಲ್ಲದೆ ದೇಶದಾಚೆಗೆ ಅಮೇರಿಕಾಗೂ ಕರಿಕಲ್ಲು ರಫ್ತಾಗುತ್ತಿದೆ. ಅಲ್ಲಿ ಈ ಕಲ್ಲನ್ನು ಬಳಸಿ ಅಲಂಕಾರಿಕ ಶಿಲೆಗಳನ್ನು ತಯಾರು ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಇದೀಗ ಅಮೇರಿಕಾ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಹೆಚ್ಚಿನ ಸುಂಕವನ್ನು ವಿಧಿಸಿರುವುದರಿಂದಾಗಿ ಬೇಡಿಕೆಗಳು ಕಡಿಮೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಚಾಮರಾಜನಗರದ ಕರಿಕಲ್ಲುಗೆ ಬಹುಬೇಡಿಕೆ
ಸದ್ಯ ಅಮೇರಿಕಾದಲ್ಲಿ ಬೇಡಿಕೆ ಕಡಿಮೆಯಾದರೆ ಅದರ ಪರಿಣಾಮಗಳು ಕರಿಕಲ್ಲು ಉದ್ಯಮದ ಮೇಲಾಗುತ್ತದೆ. ನಿಜ ಹೇಳಬೇಕೆಂದರೆ ಚಾಮರಾಜನಗರ ಜಿಲ್ಲೆಯಲ್ಲಿ ಕರಿಕಲ್ಲು ಉದ್ಯಮವೇ ಪ್ರಬಲವಾಗಿದೆ. ಕರ್ನಾಟಕ ತಮಿಳುನಾಡು ಗಡಿಯಲ್ಲಿ ಸಿಗುವ ಕರಿಕಲ್ಲು ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಇದರಿಂದ ಉದ್ಯಮ ನಡೆಸುವವರು ನೆಮ್ಮದಿಯಾಗಿದ್ದರು. ಈಗ ಅಮೇರಿಕಾದ ಸುಂಕ ಸಮರ ಚಾಮರಾಜನಗರದ ಕರಿಕಲ್ಲು ಉದ್ಯಮಕ್ಕೆ ಪೆಟ್ಟು ನೀಡಿದ್ದು, ಉದ್ಯಮದಾರರು ಯೋಚನೆ ಮಾಡುವಂತಾಗಿದೆ.
ಚಾಮರಾಜನಗರಕ್ಕೊಂದು ಸುತ್ತು ಹೊಡೆದರೆ ಕರಿಕಲ್ಲು ಉದ್ಯಮ ಅರ್ಥಾತ್ ಗ್ರಾನೈಟ್ ವ್ಯವಹಾರ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವುದು ಗೋಚರಿಸುತ್ತದೆ. ಭಾರತದ ಕಲ್ಲಿನ ಉತ್ಪನ್ನಗಳ ರಫ್ತಿನ ಪೈಕಿ 5ನೇ ಸ್ಥಾನ ಕರ್ನಾಟಕಕ್ಕಿದೆ. ರಾಜ್ಯದಲ್ಲಿ ಈ ಹಲವು ಜಿಲ್ಲೆಗಳಲ್ಲಿದ್ದರೂ ಚಾಮರಾಜನಗರದ ಕರಿಕಲ್ಲು ಉತ್ತಮ ಗುಣಮಟ್ಟ ಹೊಂದಿರುವ ಕಾರಣಕ್ಕೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯುವಂತಾಗಿದೆ. ಸದ್ಯ ಜಿಲ್ಲೆಯಲ್ಲಿ 45 ಕ್ಕೂ ಹೆಚ್ಚು ಕರಿಕಲ್ಲು ಮತ್ತು ಬಿಳಿಕಲ್ಲು ಕ್ವಾರಿಗಳಿವೆ. 50ಕ್ಕೂ ಅಧಿಕ ಗ್ರಾನೈಟ್ ಕಾರ್ಖಾನೆಗಳಿವೆ. ಇಲ್ಲಿಂದ ಅಮೆರಿಕಾ, ಮಲೇಷ್ಯಾ, ಯುಕೆ, ಇಟಲಿ, ಜಪಾನ್ ಸೇರಿದಂತೆ ಹಲವು ದೇಶಗಳಿಗೆ ರಫ್ತಾಗುತ್ತದೆ.

ಕರಿಕಲ್ಲು ಉದ್ಯಮ ನಡೆಸುವುದು ಸುಲಭವೇನಲ್ಲ
ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ, ಉಡಿಗಾಲ, ನಂಜದೇವನಪುರ, ವೀರನಪುರ ಇನ್ನಿತರೆ ಗ್ರಾಮಗಳಲ್ಲಿ ಸಿಗುವ ಕರಿಕಲ್ಲುಗಳು ಅತ್ಯುತ್ತಮ ಗುಣಮಟ್ಟದ್ದು ಎಂದು ಹೇಳಲಾಗುತ್ತಿದೆ. ಆದರೆ ಅಮೇರಿಕಾ ವಿಧಿಸಿರುವ ಸುಂಕ ಸದ್ಯ ಚಾಮರಾಜನಗರದ ಕರಿಕಲ್ಲು ಉದ್ಯಮಿಗಳನ್ನು ಚಿಂತೆಗೀಡು ಮಾಡಿದೆ. ಆದರೆ ಇಂತಹ ಸಂಕಷ್ಟಗಳು ಇದೇ ಹೊಸದಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳವಣಿಗೆಗಳು ನಡೆದಾಗ ಕೆಲವೊಮ್ಮೆ ಇಂತಹ ಪರಿಸ್ಥಿತಿ ಉದ್ಭವಿಸುತ್ತವೆ ನಂತರ ಚೇತರಿಕೆ ಕಾಣುತ್ತದೆ.
ಕರಿಕಲ್ಲು ಗಣಿಗಾರಿಕೆ ಮತ್ತು ಗ್ರಾನೈಟ್ ಉದ್ಯಮ ಹೊರಗಿನಿಂದ ನೋಡುವವರಿಗೆ ಆರ್ಥಿಕವಾಗಿ ಲಾಭತರುವ ಉದ್ಯಮದಂತೆ ಗೋಚರಿಸಿದರೂ ಅದನ್ನು ನಡೆಸುವುದು ದೊಡ್ಡ ಸವಾಲ್ ಆಗಿದೆ ಎನ್ನುವುದು ಅಷ್ಟೇ ಸತ್ಯ. ಕಾರ್ಮಿಕರ ಕೊರತೆ, ಯಂತ್ರೋಪಕರಣಗಳಿಗೆ ತಗುಲುವ ವೆಚ್ಚ, ಸಾಗಾಣಿಕೆ ವೆಚ್ಚ, ಆಧಿಕ ಬಂಡವಾಳ ಹೀಗೆ ಹತ್ತು ಹಲವು ಸಮಸ್ಯೆಗಳಿದ್ದು, ಇದೆಲ್ಲನ್ನು ನಿಭಾಯಿಸಿ ಉದ್ಯಮ ನಡೆಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಬಹುದು ಎಂಬ ನಿರೀಕ್ಷೆಯಲ್ಲಿ ಉದ್ಯಮಿಗಳಿದ್ದಾರೆ. ಏನಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.












Click it and Unblock the Notifications