ಮಳೆಯಲ್ಲೂ ಆರದ ಕಾವೇರಿ ಕಿಚ್ಚು: ಚಾಮರಾಜನಗರದಲ್ಲಿ ನಿರಂತರ ಹೋರಾಟ
ಚಾಮರಾಜನಗರ, ಸೆಪ್ಟೆಂಬರ್ 30: ರಾಜ್ಯ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ನಗರದಲ್ಲಿ ತೆಂಗಿನಕಾಯಿ ಚಿಪ್ಪು, ಹಿಡಿದು ವಿನೂತನ ಪ್ರತಿಭಟನೆ ನಡೆಸಿದರು.
ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ.ಮುರಳಿ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ತೆಂಗಿನಕಾಯಿ ಚಿಪ್ಪು ಹಿಡಿದು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಮಳೆಯ ನಡುವೆಯಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು.

ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರ, ತಮಿಳುನಾಡು ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನೀರು ನಿರ್ವಹಣಾ ಮಂಡಳಿ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ತೆಂಗಿನಕಾಯಿ ಚಿಪ್ಪು ನೀಡಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಶಾ.ಮುರಳಿ ಮಾತನಾಡಿ, 'ರಾಜ್ಯ ಸರ್ಕಾರವು ತಮಿಳು ಸರ್ಕಾರದ ಒತ್ತಡಕ್ಕೆ ಮಣಿದು ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿರುವುದು ಅತ್ಯಂತ ಖಂಡನೀಯವಾಗಿದೆ. ಕರ್ನಾಟಕದ ಜನತೆಯ ಹಿತದೃಷ್ಢಿಯಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು' ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ತಮಿಳು ಸಂಘದ ಕಾರ್ಯದರ್ಶಿ ಜಗದೀಶ್ , ಮುಖಂಡ ವೆಂಕಟಚಲಂ, ರವಿಚಂದ್ರ ಪ್ರಸಾದ್, ಕಹಳೆ, ಪಣ್ಯದಹುಂಡಿ ರಾಜು, ನಿಜಧ್ವನಿಗೋವಿಂದರಾಜು, ಗು.ಪುರುಷೋತ್ತಮ್, ಆಟೋ ಮಹದೇವಸ್ವಾಮಿ ಚಾ.ಹ.ರಾಮು, ಲಿಂಗರಾಜು ಇತರರು ಭಾಗವಹಿಸಿದ್ದರು.
ತಮಿಳುನಾಡು ಗಡಿಯಲ್ಲಿ ಕಾವೇರಿಗಾಗಿ ಹೋರಾಟ
ತಮಿಳುನಾಡಿಗೆ ಮತ್ತೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಚಾಮರಾಜನಗರ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ತಮಿಳುನಾಡು-ಕರ್ನಾಟಕ ಗಡಿಯ ಪುಣಜನೂರು ಚೆಕ್ ಪೋಸ್ಟ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಜೆಡಿಎಸ್ ಮುಖಂಡ ಆಲೂರು ಮಲ್ಲು ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 209 ತಡೆದು ಪ್ರತಿಭಟನೆ ನಡೆಸಲಾಗಿದೆ. ನಮಗೆ ಕುಡಿಯಲು ನೀರಿಲ್ಲ, ರಾಜ್ಯ ಸರ್ಕಾರ ವೈಯಕ್ತಿಕ ಹಿತಾಸಕ್ತಿಗಾಗಿ ರಾಜ್ಯದ ಜನರನ್ನು ಬಲಿ ಕೊಡುತ್ತಿದೆ ಎಂದು ಹೋರಾಟಗಾರು ಆಕ್ರೋಶ ಹೊರಹಾಕಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.












Click it and Unblock the Notifications