ಪ್ರೀತಿಸಿದ ಯುವತಿಯ ಕೈ ಬೆರಳಿಗೆ ಅಣ್ಣನಿಂದ ಮಚ್ಚಿನೇಟಿನ ಉಡುಗೊರೆ
ಚಾಮರಾಜನಗರ, ಡಿಸೆಂಬರ್ 5: ಎರಡು ವರ್ಷಗಳಿಂದ ಒಂದು ಜೋಡಿ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇಬ್ಬರೂ ಮದುವೆಯಾಗಿ ಸುಖಕರ ದಾಂಪತ್ಯ ಜೀವನಕ್ಕೆ ಕಾಲಿಡಲೂ ಯೋಜನೆ ಹಾಕಿಕೊಂಡಿದ್ದರು. ಅದರೆ ಯುವತಿಯ ಅಣ್ಣ ಅವರ ಪ್ರೀತಿಯ ಬಳ್ಳಿಗೆ ಮಚ್ಚಿನೇಟು ನೀಡಿದ್ದಾನೆ.
ಯುವತಿಯ ಅಣ್ಣ ಸ್ವತಃ ತಂಗಿಯ ನಾಲ್ಕು ಕೈಬೆರಳುಗಳನ್ನು ಕತ್ತರಿಸಲು ವಿಫಲ ಯತ್ನ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಿ.ಜಿ ಪಾಳ್ಯದಲ್ಲಿ ನಡೆದಿದೆ.
ಪಿ.ಜಿ ಪಾಳ್ಯದ ನಿವಾಸಿಗಳಾದ ಸತ್ಯ ಹಾಗೂ ಧನಲಕ್ಷ್ಮಿ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈ ವಿಚಾರ ಯುವತಿಯ ಪೋಷಕರಿಗೆ ತಿಳಿದು ಅವರು ತೀವ್ರವಾಗಿ ವಿರೋಧಿಸಿದ್ದರಲ್ಲದೇ, ಯುವಕನನ್ನು ನೋಡಕೂಡದು ಎಂದು ಧನಲಕ್ಷ್ಮಿಗೆ ತಾಕೀತು ಮಾಡಿದ್ದರು.

ಮನೆಯವರ ತೀವ್ರ ವಿರೋಧದ ನಡುವೆಯೂ ಪ್ರೇಮಿಗಳು ಮದುವೆಗೆ ಮುಂದಾಗಿದ್ದರು. ಇದರಿಂದ ಆಕ್ರೋಶಗೊಂಡ ಯುವತಿಯ ತಂದೆ ಹಾಗೂ ಅಣ್ಣನೇ ಮಚ್ಚಿನಿಂದ ಯುವತಿಯ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ.
ಗ್ರಾಮದ ಮೆಡಿಕಲ್ ಸ್ಟೋರ್ ಮುಂಭಾಗದಲ್ಲಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಧನಲಕ್ಷ್ಮೀ ಮೇಲೆ ಹಲ್ಲೆ ಮಾಡಲು ಆಕೆಯ ತಂದೆ ಶಿವಸ್ವಾಮಿ ಹಾಗೂ ಅಣ್ಣ ಮಹೇಂದ್ರ ಮಚ್ಚು, ಕುಡಗೋಲು ಹಿಡಿದು ಬಂದಿದ್ದರು. ಅಲ್ಲದೆ ಮೆಡಿಕಲ್ ಮುಂಭಾಗದಲ್ಲಿದ್ದ ಧನಲಕ್ಷ್ಮಿ ಮೇಲೆ ಕುಡುಗೋಲಿನಿಂದ ಏಕಾಏಕಿ ಹಲ್ಲೆ ಮಾಡಿದ್ದಾರೆ.
ಹಲ್ಲೆಯ ಪರಿಣಾಮ ಯುವತಿ ಬಲಗೈನ 4 ಬೆರಳುಗಳೇ ತುಂಡಾಗುವ ಸ್ಥಿತಿಗೆ ಬಂದಿವೆ. ಈಗ ಯುವತಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಲ್ಲದೇ ತನ್ನ ಹಾಗೂ ಪ್ರಿಯತಮನ ಪ್ರಾಣ ರಕ್ಷಿಸುವಂತೆ ಪೊಲೀಸರನ್ನು ಕೋರಿದ್ದಾಳೆ. ಘಟನೆ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications