Sunil Bose: ಹೆಂಡತಿ-ಮಕ್ಕಳ ಮಾಹಿತಿ ಮುಚ್ಚಿಟ್ಟ ಕೈ ಅಭ್ಯರ್ಥಿಗೆ ಸಂಕಷ್ಟ: ಬಿಜೆಪಿಯಿಂದ ದೂರು-ಸ್ಪರ್ಧೆ ಕತೆ ಏನು?
ಚಾಮರಾಜನಗರ, ಏಪ್ರಿಲ್, 06: ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಗೆಲುವಿಗಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಭಾರೀ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹಾಗೆಯೇ 0 ಮೇಲೊಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಾ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಮತ್ತೊಂದೆಡೆ ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವಿವಾಹಿತರೆಂದು ಸುಳ್ಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಶುಕ್ರವಾರ (ಏಪ್ರಿಲ್ 05) ಸಂಜೆ ಜಿಲ್ಲಾ ಚುನಾವಣಾಧಿಕಾರಿಗೆ ಬಿಜೆಪಿ ಮುಖಂಡ ದೂರು ನೀಡಿದ್ದಾರೆ.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್ ಚಾಮರಾಜನಗರ ಜಿಲ್ಲಾಧಿಕಾರಿಗೆ ಸುನಿಲ್ ಬೋಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋಗಳನ್ನು ಲಗತ್ತಿಸಿ ದೂರು ಕೊಡಲಾಗಿದೆ. ಏಪ್ರಿಲ್ 3ರಂದು ಚಾಮರಾಜನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಸುನಿಲ್ ಬೋಸ್ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರದ ಅಫಿಡವಿಟ್‌ನಲ್ಲಿ ಪತ್ನಿ, ಅವಲಂಬಿತರು ಯಾರೂ ಇಲ್ಲಾ ಎಂದು ನಮೂದು ಮಾಡಿದ್ದಾರೆ.

ಇನ್ನು, ನನ್ನ ಮಗಳಿಗೆ ಹುಟ್ಟುಹಬ್ಬದ ಶುಭಾಶಯಗಳು, ಹೆಚ್ಚಿನ ಆರೋಗ್ಯ, ಆಯಸ್ಸು ಸಿಗಲೆಂದು ಪೋಸ್ಟ್ ಮಾಡಿರುವ ಫೋಟೋ, ಕುಟುಂಬದ ಜೊತೆ ಇರುವ ಫೋಟೋಗಳನ್ನು ಫೇಸ್ ಬುಕ್‌ನಲ್ಲಿ ಅಪಲೋಡ್ ಮಾಡಿದ್ದಾರೆ. ಇನ್ನು ಈ ಫೋಟೋಗಳನ್ನೇ ಬಿಜೆಪಿಯು ಅಸ್ತ್ರವಾಗಿ ಬಳಸಿಕೊಂಡು ದೂರು ನೀಡಿದೆ.
3 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕ್ರತ: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನಾ ಕಾರ್ಯ ಇಂದು ನಡೆದಿದ್ದು, ಒಟ್ಟಾರೆ ನಾಮಪತ್ರಗಳನ್ನು ಸಲ್ಲಿಸಿದ್ದ 25 ಅಭ್ಯರ್ಥಿಗಳ ಪೈಕಿ 3 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕ್ರತಗೊಂಡಿದ್ದು, ಒಟ್ಟಾರೆ 22 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿವೆ.
ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಗಳಾಗಿ ಗುರುಲಿಂಗಯ್ಯ, ಸಿ.ರಾಜು ಹಾಗೂ ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ)ಯಿಂದ ಚಾಮದಾಸಯ್ಯ ಅವರು ಸಲ್ಲಿಸಿದ್ದ ನಾಮಪತ್ರಗಳು ತಿರಸ್ಕ್ರತವಾಗಿವೆ.
ಕ್ರಮಬದ್ದವಾಗಿರುವ ನಾಮನಿರ್ದೇಶಿತ ಅಭ್ಯರ್ಥಿಗಳ ವಿವರ ಇಂತಿದೆ: ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾದ ಎಂ.ಕೃಷ್ಣಮೂರ್ತಿ (ಬಹುಜನ ಸಮಾಜ ಪಾರ್ಟಿ), ಎಸ್.ಬಾಲರಾಜು (ಭಾರತೀಯ ಜನತಾ ಪಾರ್ಟಿ), ಸುನೀಲ್ ಬೋಸ್ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾದ ಸಿ.ಎಂ.ಕೃಷ್ಣ (ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ), ನಿಂಗರಾಜು.ಎಸ್ (ಕರ್ನಾಟಕ ಜನತಾ ಪಕ್ಷ), ಪ್ರಸನ್ನ ಕುಮಾರ್. ಬಿ (ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ)) ನಾಮಪತ್ರಗಳು ಕ್ರಮಬದ್ದವಾಗಿವೆ ಎಂದು ತಿಳಿಸಿದ್ದಾರೆ.
ಕಂದಳ್ಳಿ ಮಹೇಶ್ (ಕರ್ನಾಟಕ ರಾಷ್ಟ್ರ ಸಮಿತಿ), ಸುಮ.ಎಸ್. (ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷ) ಹಾಗೂ ಸ್ವತಂತ್ರ (ಪಕ್ಷೇತರ) ಅಭ್ಯರ್ಥಿಗಳಾದ ಕದಂಬ ನಾ.ಅಂಬರೀಷ್, ನಟರಾಜು, ಎಂ.ನಾಗೇಂದ್ರಬಾಬು, ನಿಂಗರಾಜು.ಜಿ, ನಿಂಗರಾಜು.ಜೆ, ಪಟಾಸ್ ಪ್ರದೀಪ್ ಕುಮಾರ್.ಎಂ, ಬಲ್ಲಯ್ಯ (ಬಾಲು), ಮಹದೇವಸ್ವಾಮಿ.ಬಿ.ಎಂ (ಪಂಪಿ), ಜಿ.ಡಿ.ರಾಜಗೋಪಾಲ (ಹೆಚ್.ಡಿ.ಕೋಟೆ), ರಾಜು.ಕೆ, ಸಿ.ಶಂಕರ ಅಂಕನಶೆಟ್ಟಿಪುರ, ಸಣ್ಣಸ್ವಾಮಿ, ಹೆಚ್.ಕೆ.ಸ್ವಾಮಿ ಹರದನಹಳ್ಳಿ, ಸುಭಾಷ್ ಚಂದ್ರ.ಕೆ, ಅವರ ನಾಮಪತ್ರಗಳು ಕ್ರಮಬದ್ದವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಶಿಲ್ಪಾ ನಾಗ್ ಅವರು ತಿಳಿಸಿದ್ದಾರೆ.












Click it and Unblock the Notifications