ಗುಂಡ್ಲುಪೇಟೆಯಲ್ಲಿ ಹಕ್ಕಿ ಜ್ವರ ಆತಂಕ: ನೂರಕ್ಕೂ ಹೆಚ್ಚು ಕೋಳಿ ಸಾವು
ಚಾಮರಾಜನಗರ, ಜನವರಿ 16: ನೆರೆಯ ರಾಜ್ಯ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುಂಡ್ಲುಪೇಟೆ ತಾಲೂಕಿನ ಗಡಿಭಾಗದಲ್ಲಿ ಪಶುಪಾಲನಾ ಇಲಾಖೆ ನಿಗಾವಹಿಸಿದ್ದರು ಸಹ, ತಾಲೂಕಿನ ಕಾಡಂಚಿನ ಗ್ರಾಮ ಮೇಲುಕಾಮನಹಳ್ಳಿ ಸುತ್ತಮುತ್ತಲಿನಲ್ಲಿ ಸಾಕು ಕೋಳಿಗಳು ಸಾಮೂಹಿಕವಾಗಿ ಸಾವನ್ನಪ್ಪುತ್ತಿವೆ. ಇದರಿಂದ ತಾಲೂಕಿನಲ್ಲಿ ಹಕ್ಕಿ ಜ್ವರ ಹರಡಿರಬಹುದು ಎನ್ನುವ ಆತಂಕ ಎದುರಾಗಿದೆ.
ಗ್ರಾಮದಲ್ಲಿ ಅನೇಕರು ಮನೆಗಳಲ್ಲಿ ನಾಟಿ ತಳಿಯ ಕೋಳಿಗಳನ್ನು ಸಾಕಿ ಮಾರಾಟ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಹದಿನೈದು ದಿನಗಳಿಂದ ಕೋಳಿಗಳು ಆರೋಗ್ಯವಾಗಿದ್ದಂತೆ ಕಂಡುಬಂದರೂ ಅಲ್ಲಲ್ಲಿ ಸಾಯುತ್ತಿದೆ. ಇದರಿಂದಾಗಿ ಗ್ರಾಮದಲ್ಲಿ ಸುಮಾರು ಈವರೆಗೆ ನೂರಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿದೆ.
ಕೇರಳದಿಂದ ರಾಜ್ಯದ ರಾಷ್ಟ್ರೀಯ ಹೆದ್ದಾರಿ 766 ನಲ್ಲಿ ಬರುವಾಗ ಗಡಿಭಾಗ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ವಾಹನಗಳಿಗೆ ಸೋಡಿಯಂ ಹೈಪೋ ಕ್ಲೋರೈಡ್ ಸಿಂಪಡಣೆ ಮಾಡಲಾಗುತ್ತದೆ ಆದರೆ,ರಾಷ್ಟ್ರೀಯ 212 ನಲ್ಲಿ ಕೆಕ್ಕನಹಳ್ಳ ಚೆಕ್ಪೋಸ್ಟಿನ ಕಡೆಯಿಂದ ಬರುವ ಕೇರಳದ ವಾಹನಗಳಿಗೆ ಯಾವುದೇ ತಪಾಸಣೆ ಇರುವುದಿಲ್ಲ.

ಗುಂಡ್ಲುಪೇಟೆ ತಾಲೂಕಿನ ಅನೇಕ ವಾಹನಗಳು ಕೇರಳದ ವಿವಿಧ ಭಾಗಗಳಿಗೆ ರಾಷ್ಟ್ರೀಯ ಹೆದ್ದಾರಿ 766 ನಲ್ಲಿ ಹೋಗಿ ಬರುವಾಗ ರಾಷ್ಟ್ರೀಯ 212 ತಮಿಳುನಾಡಿನ ಗುಡಲೂರು ಮಾರ್ಗವಾಗಿ ಬರುತ್ತದೆ. ಇದರಿಂದಾಗಿ ಸೋಂಕು ಹರಡಿರಬಹುದು ಎನ್ನುವ ಆತಂಕ ಎದುರಾಗಿದೆ.
ಈಗಾಗಲೇ ರೈತರು ಕೋಳಿಯ ಮೃತದೇಹವನ್ನು ಗುಂಡ್ಲುಪೇಟೆ ಪಟ್ಟಣದ ಪಶುಸಂಗೋಪನೆ ಇಲಾಖೆಗೆ ತಲುಪಸಿದ್ದಾರೆ. ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್ ಅವರು ಮರಣೋತ್ತರ ಪರೀಕ್ಷೆ ನಡೆಸಿ ಅಂಗಾಂಗಗಳನ್ನು ಮೈಸೂರಿನ ಲ್ಯಾಬ್‌ಗೆ ಕಳುಸಿದ್ದಾರೆ. ಈ ಬಗ್ಗೆ ವರದಿ ಬಂದ ನಂತರ ಮಾಹಿತಿ ಸಿಗುತ್ತದೆ ಎಂದು ಡಾ.ಮೋಹನ್ ಕುಮಾರ್ ತಿಳಿಸಿದ್ದಾರೆ.

ಸದ್ಯ ಗುಂಡ್ಲುಪೇಟೆ ತಾಲೂಕಿನ ಗಡಿಭಾಗದಲ್ಲಿ ಹಕ್ಕಿ ಜ್ವರ ಆತಂಕ ಎದುರಾಗಿದ್ದು, ಕೋಳಿ ಸಾಕಿ ಮಾರಾಟ ಮಾರುವವರಿಗೆ ಆತಂಕ ಎದುರಾಗಿದೆ. ಇನ್ನು ಈ ಬಗ್ಗೆ ಪಶುಪಾಲನಾ ಇಲಾಖೆ ಹೆಚ್ಚಿನ ನಿಗಾವಹಿಸ ಬೇಕಾಗಿದ್ದು, ವರದಿ ಬಂದ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.












Click it and Unblock the Notifications