ಚಾಮರಾನಗರ: ಕೊನೆಗೂ ಮಗು ಅಪಹರಿಸಿದ್ದ ಭಿಕ್ಷುಕಿ ಬಂಧನ
ಚಾಮರಾಜನಗರ, ನವೆಂಬರ್, 20: ಕಳೆದ ಕೆಲವು ದಿನಗಳ ಹಿಂದೆಯಷ್ಟೇ ತಾಯಿಯಿಂದ ಭಿಕ್ಷುಕಿಯೊಬ್ಬಳು ಮಗು ಅಪಹರಿಸಿ ಪರಾರಿಯಾಗಿದ್ದಳು. ಇದೀಗ ಪರಾರಿಯಾಗಿದ್ದ ಭಿಕ್ಷುಕಿಯನ್ನು ಚಾಮರಾಜನಗರ ಪೊಲೀಸರು ಬಂಧಿಸಿ, ಮಗು ರಕ್ಷಣೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಎಲ್ಲಿ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಚಾಮರಾಜನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಗು ಅಪಹರಿಸಿದ್ದ ಪ್ರಕರಣದಲ್ಲಿ ಆರೋಪಿ ಮಂಡ್ಯದ ಹೊಸಹಳ್ಳಿ ಕಾಲನಿಯ ರಾಧಾಳನ್ನು(28) ಬಂಧಿಸಲಾಗಿದೆ. ಈಕೆ ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಮನಗರ ಮೂಲದ ಅನಿತಾಳನ್ನು ತನ್ನ ಹೆಸರು, ವಿಳಾಸ ತಿಳಿಸದೆ ಪರಿಚಯ ಮಾಡಿಕೊಂಡಿದ್ದಳು. ಅನಿತಾಳ ಮಗುವನ್ನು ಭಿಕ್ಷೆ ಬೇಡಲು ಪಡೆದುಕೊಂಡು ಹಣ ಕೊಟ್ಟು ಆಸೆ ತೋರಿಸಿದ್ದಳು. ಇಲ್ಲಿಂದ ಅನಿತಾ ಮತ್ತು ಮಗುವನ್ನು ಕೊಳ್ಳೇಗಾಲ, ಮೈಸೂರು, ನಂಜನಗೂಡಿಗೆ ಕರೆದುಕೊಂಡು ಬಂದು ಭಿಕ್ಷೆ ಬೇಡಿದ್ದಳು.

ನಂತರ ನವೆಂಬರ್ 14ರಂದು ಚಾಮರಾಜನಗರಕ್ಕೆ ಬಂದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅನಿತಾಳಿಂದ ಮಗು ಪಡೆದು ಪರಾರಿ ಆಗಿದ್ದಳು. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಆರೋಪಿ ರಾಧಾ ಇದೀಗ ಕೊನೆಗೂ ಸಿಕ್ಕಿಬಿದ್ದಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದರು. ಇದನ್ನು ಆಧರಿಸಿದ ತನಿಖಾ ತಂಡ ವಿವಿಧ ಆಯಾಮಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ವೀಕ್ಷಣೆ ಮಾಡಿದ್ದಾರೆ. ಆಗ ರಾಧಾ ನಗರದ ಹಲವು ಕಡೆ ಮಗುವನ್ನು ಎತ್ತಿಕೊಂಡು ಭಿಕ್ಷಾಟನೆ ಮಾಡಿ, ನಂತರ ಚಾಮರಾಜೇಶ್ವರ ದೇಗುಲದ ಮುಂಭಾಗ ಆಟೋದಲ್ಲಿ ಹೋಗಿರುವುದು ಗೊತ್ತಾಗಿತ್ತು. ಈ ಆಟೋವನ್ನು ಪತ್ತೆ ಮಾಡಿ ವಿಚಾರ ಮಾಡಿದಾಗ ಆಟೋ ಚಾಲಕ ಆಕೆಯ ಜೊತೆಯಲ್ಲಿ ಮಗು ಇತ್ತು. ರೈಲು ನಿಲ್ದಾಣಕ್ಕೆ ಬಿಟ್ಟಿರುವ ಮಾಹಿತಿ ನೀಡಿದ್ದ.
ಪೊಲೀಸರು ರಾಧಾ ಮತ್ತು ಮಗುವನ್ನು ದೇವಸ್ಥಾನಗಳು, ಪ್ರೇಕ್ಷಣೀಯ ಸ್ಥಳಗಳು, ಬಸ್ ನಿಲ್ದಾಣಗಳು, ಮೈಸೂರು, ಮಂಡ್ಯ, ರಾಮನಗರ, ಚನ್ನಪಟ್ಟಣ, ಕೆಂಗೇರಿ ಮತ್ತು ಇಲ್ಲಿನ ರೈಲು ನಿಲ್ದಾಣಗಳಲ್ಲಿ ಹುಡುಕಿ, ಹಲವು ಮಾಹಿತಿ ಕಲೆಹಾಕಿದ್ದರು. ನವೆಂಬರ್ 19ರಂದು ಮೈಸೂರು ರೈಲ್ವೆ ಪೊಲೀಸರ ನೆರವಿನೊಂದಿಗೆ ಮಗುವನ್ನು ಅಪರಿಸಿದ್ದ ರಾಧಾಳನ್ನು ಮೈಸೂರಿನಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಪೊಲೀಸರು ರಾಧಾಳನ್ನು ವಿಚಾರಣೆಗೊಳಪಡಿಸಿದಾಗ ಮಗುವನ್ನು ಅಪಹರಿಸಿಕೊಂಡು ಹೋಗಿ ಕಳೆದ 4 ದಿನಗಳಿಂದ ರೈಲಿನಲ್ಲಿ ಭಿಕ್ಷಾಟನೆ ಮಾಡಿದ್ದಾಗಿ ತಿಳಿಸಿದ್ದಾಳೆ. ಬಳಿಕ ಪೊಲೀಸರು ಈಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಇಲಾಖೆಯ ಮುಂದೆ ಹಾಜರು ಪಡಿಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications