ಬಂಡಿಪುರ ಕಾಡಿಗೆ ಕಳೆ ತಂದ ಮಳೆ: ಪ್ರಾಣಿಗಳ ಪರೇಡ್ ನೋಡೋದೇ ಚೆಂದ!

Posted By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಆಗಸ್ಟ್ 21: ವೀಕೆಂಡ್ ಬಂತೆಂದರೆ ಸಾಕು ಪ್ರವಾಸಿಗರ ದಂಡು ಬಂಡೀಪುರದತ್ತ ಸುಳಿಯುತ್ತಿದೆ. ಕಾರಣ ಎಲ್ಲರಲ್ಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಅರಣ್ಯದ ನಡುವೆ ವನ್ಯ ಜೀವಿಗಳ ಪರೇಡ್ ನೋಡುವ ತವಕ!

ಈ ಬಾರಿಯ ಬೇಸಿಗೆ ವನ್ಯ ಜೀವಿಗಳನ್ನು ಬಂಡೀಪುರದಿಂದ ಪಲಾಯನ ಮಾಡುವಂತೆ ಮಾಡಿತ್ತು. ಬರದಿಂದಾಗಿ ನೀರು ಸಿಗದೆ ಬರಗೆಟ್ಟಿದ್ದ ವನ್ಯ ಪ್ರಾಣಿಗಳು ನೀರು ಮೇವು ಅರಸಿಕೊಂಡು ಕೇರಳ, ತಮಿಳುನಾಡಿನತ್ತ ವಲಸೆ ಹೋಗಿದ್ದವು. ಆದರೀಗ ಅವುಗಳೆಲ್ಲ ತಮ್ಮ ಸ್ವಸ್ಥಾನಕ್ಕೆ ಮರಳಿದ್ದು, ಸಫಾರಿ ತೆರಳುವ ಪ್ರವಾಸಿಗರ ಮುಂದೆ ಫೋಸ್ ಕೊಡುತ್ತಾ ತಮ್ಮ ಚೆನ್ನಾಟವಾಡುತ್ತಿವೆ.

Bandipur wild life got a new look after continuous rainfall in the state

ಈ ಹಿಂದೆ ಇಲ್ಲಿಗೆ ಬಂದವರಿಗೆ ಒಣಗಿ ನಿಂತ ಗಿಡಮರಗಳು, ಅವುಗಳ ನಡುವೆ ಮೇವು ನೀರಿಗಾಗಿ ಹುಡುಕಾಡುತ್ತಾ ಅಸಹಾಯಕವಾಗಿ ಓಡಾಡುತ್ತಿದ್ದ ಪ್ರಾಣಿಗಳು ಅಲ್ಲೊಂದು ಇಲ್ಲೊಂದು ಕಾಣುತ್ತಿದ್ದವು. ಇದರಿಂದ ಬೇಸರಗೊಂಡ ಪ್ರವಾಸಿಗರು ಇದನ್ನು ನೋಡೋಕೆ ಅಷ್ಟೊಂದು ದೂರದಿಂದ ಬರಬೇಕಿತ್ತಾ ಎಂದು ಬೇಸರದಿಂದ ತಮ್ಮ ಊರಿನ ಹಾದಿ ಹಿಡಿಯುತ್ತಿದ್ದರು.

ಬಂಡೀಪುರ ಅಭಯಾರಣ್ಯದಲ್ಲಿ ಸುಮಾರು 140 ಕ್ಕೂ ಹೆಚ್ಚು ಹುಲಿ, ಆನೆ, ಚಿರತೆ, ಕರಡಿ, ಕಾಡೆಮ್ಮೆ, ಹೆಬ್ಬಾವು, ವಿವಿಧ ಜಾತಿಯ ಜಿಂಕೆಗಳು ನವಿಲು, ಸೀಳು ನಾಯಿ ಸೇರಿದಂತೆ ಸಾವಿರಾರು ಪ್ರಾಣಿ ಪಕ್ಷಿಗಳಿದ್ದರೂ ಕೆಲವೇ ಕೆಲವು ಈ ಹಿಂದೆ ಕಾಣಿಸುತ್ತಿದ್ದವು. ಇದೀಗ ಅರಣ್ಯದಲ್ಲಿ ನೀರು ಮತ್ತು ಮೇವಿನ ಕೊರತೆ ನೀಗಿದ್ದರಿಂದ ಎಲ್ಲ ಪ್ರಾಣಿ-ಪಕ್ಷಿಗಳು ಕಂಡು ಬರತೊಡಗಿವೆ.

Bandipur wild life got a new look after continuous rainfall in the state

ಅರಣ್ಯ ಇಲಾಖೆ ಮತ್ತು ಜಂಗಲ್ ಲಾಡ್ಜಸ್ ನಲ್ಲಿ ವಾಸ್ತವ್ಯ ಹೂಡಿ ಮುಂಜಾನೆ ಮತ್ತು ಸಂಜೆ ವಾಹನದಲ್ಲಿ ಸಫಾರಿಗೆ ತೆರಳುತ್ತಿರುವ ಪ್ರವಾಸಿಗರಿಗೆ ಈಗಂತು ಖುಷಿಯೋ ಖುಷಿ. ವಾಹನ ಬಳಿಯೇ ಹಾದು ಹೋಗುವ ಹುಲಿ, ಮರದ ಮೇಲೆ ಮಲಗಿ ವಿಶ್ರಾಂತಿ ಪಡೆಯುವ ಚಿರತೆ, ಛಂಗನೆ ನೆಗೆದು ಓಡುವ ಜಿಂಕೆಗಳು, ಗರಿಬಿಚ್ಚಿ ಕುಣಿಯುವ ನವಿಲುಗಳು, ತಂಗಾಳಿಯೊಂದಿಗೆ ಕೇಳಿ ಬರುವ ಪಕ್ಷಿಗಳ ನಿನಾದ ಎಲ್ಲವೂ ಮೈಮನ ಪುಳಕಗೊಳಿಸುತ್ತವೆ.

ಇಲ್ಲಿನ ಮೂರ್ಕೆರೆ, ಹುಲಿಕಟ್ಟೆ, ಕಡಮತ್ತೂರುಕಟ್ಟೆ, ದೆವ್ವದಕಟ್ಟೆ, ಆನೆಕೆರೆ, ನಂಜನಾಪುರಕೆರೆಗಳು ಹುಲಿಗಳ ಆವಾಸ ಸ್ಥಾನವಾಗಿದ್ದು, ಈ ವ್ಯಾಪ್ತಿಯಲ್ಲಿ ಹುಲಿಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ.

Bandipur wild life got a new look after continuous rainfall in the state

ಬಂಡೀಪುರ ಸಫಾರಿಗೆ ತೆರಳಿದವರಿಗೆ ಮಾತ್ರವಲ್ಲದೆ, ಅರಣ್ಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರಿಗೂ ಹಲವು ರೀತಿಯ ಪ್ರಾಣಿಗಳು ನೋಡಲು ಸಿಗುತ್ತಿವೆ. ಒಟ್ಟಾರೆ ಬಂಡೀಪುರದಲ್ಲೀಗ ವನ್ಯಪ್ರಾಣಿಗಳದ್ದೇ ಸಂಭ್ರಮ ಎಂದರೆ ತಪ್ಪಾಗಲಾರದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After one week's continuous rain in Chamarajanagar, Bandipur forest wears green dress and Animals in the forest are enjoying the whether.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X