ಬಂಡೀಪುರ ಉದ್ಯಾನದ ಪ್ರಾಣಿಗಳಿಗೆ ನೀರು ವ್ಯವಸ್ಥೆ!

Posted By:
Subscribe to Oneindia Kannada

ಚಾಮರಾಜನಗರ, ನವೆಂಬರ್,24: ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆಯೇ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಶುರುವಾಗಿದೆ. ಹೀಗಾಗಿ ವನ್ಯಜೀವಿಗಳು ಒಂದೆಡೆಯಿಂದ ಮತ್ತೊಂದೆಡೆಗೆ ನೀರನ್ನು ಅರಸುತ್ತಾ ಹೊರಡುತ್ತಿವೆ.

ನೀರಿನಾಸರೆಗಳಾಗಿದ್ದ ಕೆರೆ, ಕೊಳಗಳು ಬತ್ತುತ್ತಿವೆ. ಹೀಗಾಗಿ ಕಾಡಾನೆಗಳು ಸೇರಿದಂತೆ ವನ್ಯಪ್ರಾಣಿಗಳು ಪರದಾಡುವಂತಾಗಿದ್ದು, ಬೇಸಿಗೆ ವೇಳೆಗೆ ಪರಿಸ್ಥಿತಿ ಹದಗೆಡುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ಮನಗಂಡ ಅರಣ್ಯ ಇಲಾಖೆ ನೀರಿನ ಕೊರತೆ ನೀಗಿಸುವ ಸಲುವಾಗಿ ಕೊಳವೆ ಬಾವಿಗಳನ್ನು ಕೊರೆಸಿ ಸೌರ ಶಕ್ತಿ ಚಾಲಿತ ಮೋಟಾರ್ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗಿದೆ.[ಬಂಡೀಪುರದಲ್ಲಿ ಹುಲಿ ಹತ್ಯೆ: ಒಬ್ಬನ ಬಂಧನ]

bandipur national park area animals have water problem

ಈಗಾಗಲೇ ಓಂಕಾರ್ ವಲಯದ ಸೌತ್ ಕೆರೆಯಲ್ಲಿ ಕೊಳವೆ ಬಾವಿಯನ್ನು ಕೊರೆಯಲಾಗಿದ್ದು, ಇಲ್ಲಿಂದ ಸೌರಶಕ್ತಿ ಮೋಟಾರು ಮೂಲಕ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಅಂತರಸಂತೆ ವಲಯ ಹುಲಿಕೆರೆಯಲ್ಲಿ ಕಳೆದ ವರ್ಷ ಇದೇ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಅದೇ ಮಾದರಿಯನ್ನು ಇಲ್ಲಿ ಅಳವಡಿಸಿರುವುದು ಗಮನಾರ್ಹವಾಗಿದೆ.

ಸುಮಾರು 800 ಅಡಿಯಷ್ಟು ಆಳಕ್ಕೆ ಬಾವಿಯನ್ನು ಕೊರೆಸಲಾಗಿದ್ದು, ಸುಮಾರು 300 ಅಡಿಯಷ್ಟು ಆಳದವರೆಗೆ ಪೈಪ್ ಅಳವಡಿಸಲಾಗಿದೆ. 18 ಸೌರ ಫಲಕಗಳ ಸಹಾಯದಿಂದ ವಿದ್ಯುತ್ ಒದಗಿಸಲಾಗಿದ್ದು ಐದು ಅಶ್ವಶಕ್ತಿಯ ಮೋಟಾರ್ ಕಾರ್ಯನಿರ್ವಹಿಸುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೂ ಸ್ವಯಂ ಕಾರ್ಯನಿರ್ವಹಿಸಲಿದೆ.[ಬಂಡೀಪುರದಲ್ಲಿ ಸರಸ-ಸಲ್ಲಾಪದಲ್ಲಿದ್ದ ಪ್ರೇಮಿಗಳ ಮೇಲೆ ಕೇಸು]

bandipur national park area animals have water problem

ಅರಣ್ಯ ಇಲಾಖೆ ಕೊಳವೆಬಾವಿ ಕೊರೆಸಿದ್ದರೆ, ವಲ್ಡ್ ವೈಲ್ಡ್ ಲೈಫ್ ಫೌಂಡೇಶನ್ ಸೌರಶಕ್ತಿ ಹಾಗೂ ಮೋಟಾರ್ ಒದಗಿಸಿದೆ. ಇದಕ್ಕೆ ಸುಮಾರು 10ಲಕ್ಷ ರು.ವೆಚ್ಚ ತಗುಲಿದೆ ಎನ್ನಲಾಗಿದೆ. ಟಾರ್ಪಾಲಿನ್ ಅಳವಡಿಸಿದ ಹೊಂಡಕ್ಕೆ ನೀರನ್ನು ತುಂಬಿಸಿ ಶೇಖರಿಸಿಡುವ ಪ್ರಯತ್ನ ಮಾಡಲಾಗುತ್ತಿದೆ.

ಸೌರಫಲಕಕ್ಕೆ ಕಾಡುಪ್ರಾಣಿ ಅಥವಾ ಕಾಳ್ಗಿಚ್ಚಿನಿಂದ ಹಾನಿಯಾಗದಂತೆ ಫಲಕ ಇಟ್ಟಿರುವ ಪ್ರದೇಶದ ಸುತ್ತಲೂ ಆಳವಾದ ಕಂದಕ ನಿರ್ಮಾಣ ಮಾಡಲಾಗಿದ್ದು, ಮೋಟಾರಿಗೆ ಕಬ್ಬಿಣದ ಪಟ್ಟಿಗಳಿಂದ ಮುಚ್ಚಲಾಗಿದೆ. ಅರಣ್ಯ ಇಲಾಖೆ ಈಗಿನಿಂದಲೇ ಮುಂಜಾಗ್ರತೆ ವಹಿಸಿರುವುದರಿಂದ ಕಾಡು ಪ್ರಾಣಿಗಳು ಅರಣ್ಯ ಬಿಟ್ಟು ನೀರು ಹುಡುಕಿಕೊಂಡು ನಾಡಿನತ್ತ ಬರುವುದನ್ನು ತಡೆದಂತಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bandipur national park area forest animals have no drinking water, animals go out other where. Drinking water supply system has progress. Up coming summer the system has done
Please Wait while comments are loading...