ಬಂಡೀಪುರ ರಾಣಾನ ಸ್ಥಾನ ತುಂಬಲು ಮುಧೋಳ್ ವಿಫಲ ... ಜರ್ಮನ್ ಶೆಫರ್ಡ್ ಶ್ವಾನಕ್ಕೆ ಒಲವು
ಚಾಮರಾಜನಗರ, ಜುಲೈ 22 : ಮುಧೋಳ್ ಹಾಗೂ ಜೆರ್ಮನ್ ಶೆಫರ್ಡ್ ಎರಡು ಕೂಡ ಬೇಟೆ ನಾಯಿಗಳಾಗಿದ್ದರೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕಾಡು ಕಾವಲಿಗೆ ಜರ್ಮನ್ ಶೆಫರ್ಡ್ ತಳಿಯ ಶ್ವಾನವೇ ಸೂಕ್ತ ಎಂಬ ನಿಲುವಿಗೆ ಅರಣ್ಯ ಇಲಾಖೆ ಬಂದಿದೆ.
ಕಳ್ಳಬೇಟೆ ಪತ್ತೆಹಚ್ಚಲು ಕಳೆದ ಎರಡು ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮುಧೋಳ ತಳಿಯ ಶ್ವಾನವನ್ನು ಕರೆತರಲಾಗಿತ್ತು. ಆದರೆ ಈ ಶ್ವಾನ ಎಲ್ಲಾ ರೀತಿಯ ತರಬೇತಿಯನ್ನು ನೀಡಿದರೂ ಇದೂವರೆಗೂ ಒಂದು ಕಳ್ಳತನವನ್ನು ಸಹ ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಹಲವಾರು ಅರಣ್ಯ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಬಂಡೀಪುರದ ಶ್ವಾನ ರಾಣಾ ನಿವೃತ್ತಿಯ ನಂತರ ಕರ್ನಾಟಕದ ತಳಿ ಮುಧೋಳ ತಳಿಯ ಶ್ವಾನ ಇದೀಗ ಬಂಡೀಪುರಕ್ಕೆ ತಂದು ತರಬೇತಿ ನೀಡಲಾಗುತ್ತಿತ್ತು. ಆದರೆ ರಾಣಾ ಉತ್ತರಾಧಿಕಾರಿಯಾಗಿ ದೇಸಿ ತಳಿಯಾದ ಮುಧೋಳ್ ನಾಯಿಗಳನ್ನು ಬಳಸಿಕೊಳ್ಳಲು ಅರಣ್ಯ ಇಲಾಖೆ ಪ್ರಯತ್ನಿಸಿತರಾದರೂ ಮಾರ್ಗಿ ಮತ್ತು ರಾಕಿ ಎಂಬ ಮುಧೋಳ್ ಶ್ವಾನಗಳು ಸಾಕಷ್ಟು ಟ್ರೈನ್ ಆಗದಿರುವುದು ಜೊತೆಗೆ ಕಮಾಂಡಿಗ್ ಕೇಳದಿರುವುದರಿಂದ ಜರ್ಮನ್ ಶೆಫರ್ಡ್ ತಳಿಯ ಶ್ವಾನವೇ ರಾಣಾನ ಉತ್ತರಾಧಿಯಾಗಲಿದೆ.

ರಾಣಾ ಸ್ಥಾನಕ್ಕೆ ಜರ್ಮನ್ ಶೆಫರ್ಡ್ ತಳಿಯೇ ಸೂಕ್ತ
ಈ ಕುರಿತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ರಮೇಶ್ ಕುಮಾರ್ ಮಾತನಾಡಿ, ಮುಧೋಳ್ ಶ್ವಾನವೇನೂ ಅಲ್ಲಗಳೆಯವಷ್ಟು ನಿಶ್ಯಕ್ತ ನಾಯಿಗಳಲ್ಲ, ಆದರೆ ಅವುಗಳು ಬಂಡೀಪುರ ವಾತಾವರಣಕ್ಕೆ ಪಳಗುತ್ತಿಲ್ಲ, ತರಬೇತಿ ಆಗಿಲ್ಲವಾದ್ದರಿಂದ ಜರ್ಮನ್ ಶೆಫರ್ಡ್ ತಳಿಯ ಶ್ವಾನವನ್ನೇ ಕಾಡಿನ ಕಾವಲಿಗೆ ಸೂಕ್ತ ಎಂಬ ಅಭಿಪ್ರಾಯ ಬಂದಿದ್ದು ಕೆಲವೇ ತಿಂಗಳುಗಳಲ್ಲಿ ಜರ್ಮನ್ ಶೆಪರ್ಡ್ ತಳಿಯ ಶ್ವಾನವನ್ನೇ ರಾಣಾ ಸ್ಥಾನಕ್ಕೆ ನಿಯೋಜಿಸಲಾಗುತ್ತದೆ. ಬಂಡೀಪುರದಲ್ಲಿರುವ ಎರಡು ಮುಧೋಳ್ ಶ್ವಾನಗಳಲ್ಲಿ ಒಂದು ಆರೋಗ್ಯಕರವಾಗಿಲ್ಲ ಮತ್ತೊಂದು ತರಬೇತಿಯಲ್ಲಿ ಹುರಿಗೊಂಡಿಲ್ಲ ಎಂದು ತಿಳಿಸಿದರು.

ಅಧಿಕಾರಿಗಳ ಕಮಾಂಡಿಂಗ್ ಕೇಳದ ಮುಧೋಳ್
ಮುಧೋಳ್ ಶ್ವಾನಗಳು ಕಾವಲಿಗೆ ಹೇಳಿ ಮಾಡಿಸಿದ ನಾಯಿಯಾಗಿದ್ದರೂ ಯಾಕೋ ಅರಣ್ಯ ಇಲಾಖೆಗೆ ಫಲಪ್ರದವಾಗಿಲ್ಲ. ಒಂದು ಮೂಲದ ಪ್ರಕಾರ ಮಾರ್ಗಿ ಎಂಬ ಶ್ವಾನ ಕಮಾಂಡಿಗ್ ಕೇಳುತ್ತಿಲ್ಲ ಎಂದು ತಿಳಿದುಬಂದಿದೆ. ಬಿಟ್ಟರೇ ಓಡುವ ಮಾರ್ಗಿ ಮತ್ತೇ ಅದನ್ನು ಹಿಡಿಯಲು ಹರಸಾಹಸವನ್ನೇ ಪಡಬೇಕಾಗಿದೆಯಂತೆ. ಅಲ್ಲದೆ ಈ ಪ್ರದೇಶದಲ್ಲಿ ಕಳ್ಳಬೇಟೆ ಪತ್ತೆ ಹಚ್ಚುವಲ್ಲೂ ಮುಧೋಳ ತಳಿಯ ಶ್ವಾನ ವಿಫಲವಾಗಿದೆ. ಹಾಗಾಗಿ ಅರಣ್ಯ ಇಲಾಖೆ ಮತ್ತೆ ಜರ್ಮನ್ ಶೆಫರ್ಡ್ ತಳಿಗೆ ಮೊರೆ ಹೋಗಿದೆ.

ಹಲವು ಕಳ್ಳ ಪ್ರಕರಣವನ್ನು ಬೇಧಿಸಿದ್ದ ರಾಣಾ
ಜರ್ಮನ್ ಶೆಫರ್ಡ್ ತಳಿಯ ರಾಣಾ ಅರಣ್ಯ ಅಪರಾಧ ಪತ್ತೆಗೆ ಹೆಸರುವಾಸಿಯಾಗಿತ್ತು. ಸೂಕ್ಷ್ಮಮತಿಯಾಗಿದ್ದ ರಾಣಾ ಹಲವು ಮಹತ್ವದ ಪ್ರಕರಣ ಭೇದಿಸಲು ಅರಣ್ಯ ಇಲಾಖೆಗೆ ಸಹಾಯ ಮಾಡಿದೆ. ರಾಣಾನ ಸಹಾಯದಿಂದ 50 ಹೆಚ್ಚು ಕ್ಲಿಷ್ಟಕರವಾದ ಪ್ರಕರಣಗಳನ್ನು ಅಧಿಕಾರಿಗಳು ಭೇದಿಸಿದ್ದರು. ಅಲ್ಲದೆ ಜನರ ಮೇಲೆ ದಾಳಿ ಮಾಡುವ ಹುಲಿಯನ್ನು ಪತ್ತೆ ಹಚ್ಚುವುದಕ್ಕಾಗಿ ರಾಣ ಮುಂಚೂಣಿಯಾಗಿರುತ್ತಿದ್ದ.

ರಾಣಾನನ್ನು ಭೋಪಾಲ್‌ನಿಂದ ಕರೆತರಲಾಗಿತ್ತು
ಬಂಡೀಪುರಕ್ಕೆ ಬರುವ ಮುನ್ನ ರಾಣಾ ಭೋಪಾಲ್‌ನಲ್ಲಿರುವ ಪೊಲೀಸ್ ಬೆಟಾಲಿಯನ್‌ನಲ್ಲಿ 9 ತಿಂಗಳು ತರಬೇತಿ ಪಡೆದುಕೊಂಡಿತ್ತು. ನಂತರ ಒಂದಿಷ್ಟು ಕಾಲ ಅಲ್ಲಿ ಕೆಲಸ ಮಾಡಿದ್ದ ರಾಣಾ, ಕಳೆದ 2015ರಲ್ಲಿ ಅರಣ್ಯ ಅಪರಾಧ ಪತ್ತೆಗಾಗಿ ಬಂಡೀಪುರಕ್ಕೆ ಕರೆಸಲಾಗಿತ್ತು. ಬಂಡೀಪುರ ಹುಲಿ ರಕ್ಷಿತಾರಣ್ಯಕ್ಕೆ ನಿಯೋಜನೆಗೊಂಡಿರುವ ಹುಲಿ ಸಂರಕ್ಷಣಾ ವಿಶೇಷ ಪಡೆ ರಾಣಾನ ನಿರ್ವಹಣೆ ಮಾಡುತ್ತಿದ್ದರು.
ಒಟ್ಟಿನಲ್ಲಿ ಈಗಾಗಲೇ ಅರಣ್ಯ ಇಲಾಖೆಯಲ್ಲಿ ತನ್ನ ಅಪಾರ ಬುದ್ಧಿಶಕ್ತಿಯಿಂದ ಎಲ್ಲರ ಗಮನ ಸೆಳೆದಿರುವ ರಾಣಾನ ಉತ್ತರಾಧಿಕಾರಿಯಾಗಿ ಮತ್ತೊಂದು ಜರ್ಮನ್ ಶೆಫರ್ಡ್ ತಳಿಯ ಶ್ವಾನ ಬರುವುದು ಖಚಿತವಾಗಿದೆ.












Click it and Unblock the Notifications