Get Updates
Get notified of breaking news, exclusive insights, and must-see stories!

Bandipur Forest: ಬಂಡೀಪುರದಲ್ಲಿ ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆ ಸಂಪೂರ್ಣ ಸನ್ನದ್ಧ!

ಚಾಮರಾಜನಗರ, ಜನವರಿ 13: ಬೇಸಿಗೆ ಬರುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅರಣ್ಯದಲ್ಲಿ ಎಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು ಅನಾಹುತ ಸೃಷ್ಟಿ ಮಾಡಿ ಬಿಡುತ್ತದೆಯೋ ಎಂಬ ಭಯ ಕಾಡಲಾರಂಭಿಸುತ್ತದೆ. ಕಳೆದ ಕೆಲವು ವರ್ಷಗಳ ಹಿಂದೆ ಸಂಭವಿಸಿದ ದುರಂತಗಳೆಲ್ಲವೂ ಕಣ್ಮುಂದೆ ಹಾದು ಹೋದ ಅನುಭವವಾಗಿ ಬಿಡುತ್ತದೆ. ಹೀಗಾಗಿ ಬೇಸಿಗೆ ಆರಂಭದ ಮೊದಲೇ ಕಾಡ್ಗಿಚ್ಚು ತಡೆಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದೋ? ಅದೆಲ್ಲವನ್ನು ಕೈಗೊಳ್ಳಲು ಈಗಿನಿಂದಲೇ ಅಧಿಕಾರಿಗಳು ಮುಂದಾಗಿದ್ದಾರೆ.

ಬಂಡೀಪುರದ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುವುದು ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಇದರಿಂದ ಅರಣ್ಯ ನಾಶ, ಪ್ರಾಣಿಪಕ್ಷಿಗಳ ದಹನ ಮಾತ್ರವಲ್ಲದೆ ಕಾಡ್ಗಿಚ್ಚು ಆರಿಸಲು ಹೋಗಿ ಅರಣ್ಯ ಇಲಾಖೆ ಸಿಬ್ಬಂದಿ ಜೀವಂತ ದಹನವಾಗಿರುವ ನಿದರ್ಶನಗಳು ನಮ್ಮ ಮುಂದಿವೆ. ಹೀಗಾಗಿಯೇ ಕಳೆದ ಕೆಲವು ವರ್ಷಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಬೇಸಿಗೆಗೆ ಮುನ್ನವೇ ಕಾಡ್ಗಿಚ್ಚು ತಡೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಗ್ನಿ ಅನಾಹುತ ತಡೆಗೆ ಟೊಂಕ ಕಟ್ಟಿ ನಿಲ್ಲುತ್ತಿರುವುದು ಕಂಡು ಬರುತ್ತಿದೆ.

Bandipur Forest Department Prepares for Summer Fire Prevention

ಹಾಗೆನೋಡಿದರೆ ಬಂಡೀಪುರ ಅರಣ್ಯವನ್ನು ಕಾಡ್ಗಿಚ್ಚಿನಿಂದ ತಡೆಯುವುದು ಅಷ್ಟು ಸುಲಭವೇನಲ್ಲ. ಆದರೂ ಅಧಿಕಾರಿಗಳು ಸವಾಲ್ ಆಗಿ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಬಾರಿ ಅಗ್ನಿ ಅನಾಹುತಗಳಿಗೆ ಎಡೆ ಮಾಡದಂತೆ ಕಣ್ಣಿಟ್ಟು ನೋಡಿಕೊಂಡಿದ್ದಾರೆ. ಅದರಂತೆ ಈ ಬಾರಿಯೂ ಯಾವುದೇ ಅನಾಹುತಕ್ಕೆ ಎಡೆ ಮಾಡಿಕೊಡಬಾರದು ಎಂಬ ಉದ್ದೇಶದಿಂದ ಈಗಿನಿಂದಲೇ ರಸ್ತೆಗೆ ಹೊಂದಿಕೊಂಡಂತಿರುವ ಅರಣ್ಯ ಸೇರಿದಂತೆ ಗಡಿಭಾಗಗಳಲ್ಲಿ ಬೆಂಕಿ ನಿಯಂತ್ರಣ ರೇಖೆಯನ್ನು ನಿರ್ಮಿಸಲಾಗುತ್ತಿದೆ.

ಸಮಾರೋಪಾದಿಯಲ್ಲಿ ಸಾಗಿದ ಬೆಂಕಿ ತಡೆ ರೇಖೆ

ರಸ್ತೆಯ ಆಸುಪಾಸಿನಲ್ಲಿರುವ ಕುರುಚಲು ಕಾಡನ್ನು ಕಡಿದು ಅದನ್ನು ಸುಡುವ ಮೂಲಕ ಅಪ್ಪಿ ತಪ್ಪಿ ರಸ್ತೆ ಬದಿಗೆ ಬಿದ್ದ ಬೆಂಕಿ ಅರಣ್ಯದೊಳಗೆ ಹೋಗದಂತೆ ತಡೆಯುವ ಕೆಲಸವನ್ನು ಮಾಡಲಾಗುತ್ತಿದೆ. ಬೆಂಕಿ ನಿಯಂತ್ರಣ ರೇಖೆ ನಿರ್ಮಾಣದಿಂದ ಯಾರಾದರೂ ಸಿಗರೇಟು, ಬೀಡಿ ಸೇದಿ ಎಸೆದರೂ ಅದರಿಂದ ಬೆಂಕಿ ಹೊತ್ತಿಕೊಳ್ಳುವುದನ್ನು ತಡೆಯಲು ಸಾಧ್ಯವಾಗಲಿದೆ. ಇದೊಂದು ಪ್ರಮುಖ ಕ್ರಮವಾಗಿದ್ದು, ಸಾಮಾನ್ಯವಾಗಿ ಎಲ್ಲ ಅರಣ್ಯಗಳಲ್ಲಿ ಇದನ್ನು ಮಾಡಲಾಗುತ್ತಿದೆ.

ಬಂಡೀಪುರ ಅರಣ್ಯವು ತಮಿಳುನಾಡು ಮತ್ತು ಕೇರಳದೊಂದಿಗೆ ಗಡಿಯನ್ನು ಹಂಚಿಕೊಂಡಿದ್ದು, ಜೊತೆಗೆ ಅರಣ್ಯದ ನಡುವೆ ಹೆದ್ದಾರಿಯೂ ಹಾದು ಹೋಗಿದೆ. ಹೀಗಾಗಿ ತುಂಬಾ ಎಚ್ಚರಿಕೆ ವಹಿಸಿ ಅರಣ್ಯವನ್ನು ಅಗ್ನಿ ಅವಘಡದಿಂದ ರಕ್ಷಿಸಬೇಕಾಗಿದೆ. ಸದ್ಯ ಅರಣ್ಯ ಇಲಾಖೆಯಿಂದ ಬೆಂಕಿ ನಿಯಂತ್ರಣ ರೇಖೆ ನಿರ್ಮಿಸುವ ಕಾರ್ಯ ಸಮಾರೋಪಾದಿಯಲ್ಲಿ ಸಾಗಿದ್ದು, ಇದೀಗ ಸುಮಾರು ಶೇ.80ರಷ್ಟು ಬೆಂಕಿ ನಿಯಂತ್ರಣ ರೇಖೆಯನ್ನು ನಿರ್ಮಿಸಿರುವುದು ವಿಶೇಷವಾಗಿದೆ.

Bandipur Forest Department Prepares for Summer Fire Prevention

2650 ಚದರ ಕಿ.ಮೀ ಬೆಂಕಿ ತಡೆ ರೇಖೆ

ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿನ 13 ವಲಯದಲ್ಲಿ ಸುಮಾರು 2650 ಚದರ ಕಿಲೋ ಮೀಟರ್ ನಷ್ಟು ಬೆಂಕಿ ನಿಯಂತ್ರಣ ರೇಖೆಯನ್ನು ನಿರ್ಮಿಸಲಾಗುತ್ತಿದೆ. ಇದನ್ನು ರಾಷ್ಟ್ರೀಯ ಹೆದ್ದಾರಿ, ಟೈಗರ್ ಹಾಗೂ ವಾಟರ್ ರಸ್ತೆಗಳಲ್ಲಿ 10 ರಿಂದ 20 ಮೀಟರ್ ತನಕ ಮಾಡಲಾಗುತ್ತಿದೆ. ಇಷ್ಟೇ ಅಲ್ಲದೆ ಸೂಕ್ಷ್ಮ ಪ್ರದೇಶಗಳಲ್ಲಿಯೂ ನಿಗಾವಹಿಸಲಾಗಿದೆ.

ಬೆಂಕಿ ನಿಯಂತ್ರಣ ರೇಖೆ ಕುರಿತಂತೆ ಮಾಹಿತಿ ನೀಡಿರುವ ಬಂಡೀಪುರದ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ಅವರು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರದಲ್ಲಿ ಬೆಂಕಿ ತಡೆಗೆ ಸರ್ವ ರೀತಿಯಲ್ಲಿ ಸಿದ್ಧತೆಯನ್ನು ಮತ್ತು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಬೆಂಕಿ ನಿಯಂತ್ರಣ ರೇಖೆಗೆ ಸಂಬಂಧಿಸಿದಂತೆ ಕುರುಚಲು ಕಾಡು ಕಡಿದು ಅದನ್ನು ಸುಡುವ ಕೆಲಸ ಶೇ.80ರಷ್ಟು ಮುಗಿದಿದೆ ಎಂದು ಹೇಳಿದ್ದಾರೆ.

450 ಫೈರ್ ವಾಚರ್‌ಗಳ ನೇಮಕ

ಇಷ್ಟೇ ಅಲ್ಲದೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ ಬೀಳದಂತೆ ಅರಣ್ಯ ಇಲಾಖೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಕಾಡಂಚಿನ ಗ್ರಾಮಗಳ ರೈತರು ಜಮೀನಿನಲ್ಲಿ ಬೆಂಕಿ ಹಾಕುವಾಗ ಮುನ್ನಚ್ಚರಿಕೆ ಇರಲಿ. ಕಾಡು ಹಾಗೂ ಪ್ರಾಣಿಗಳ ಸಂರಕ್ಷಣೆಗೆ ರೈತರು, ಸಾರ್ವಜನಿಕರ ಸಹಕಾರ ಇಲಾಖೆ ಮೇಲಿರಲಿ ಎಂದು ಮನವಿಯನ್ನು ಕೂಡ ಮಾಡಿದ್ದಾರೆ. ಇದರ ಜತೆಗೆ ಅರಣ್ಯ ಪ್ರದೇಶದಲ್ಲಿ ವನ್ಯಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡುವುದು, ಸೋಲಾರ್ ಬೋರ್ ವೆಲ್ ಗಳ ತಪಾಸಣೆ ನಡೆಸಿ ಕೆರೆಕಟ್ಟೆಗಳಿಗೆ ನೀರು ತುಂಬಿಸಲಾಗುತ್ತದೆ ಎಂದು ಹೇಳಿದ್ದಾರೆ.

Bandipur Forest Department Prepares for Summer Fire Prevention

ಇಷ್ಟೇ ಅಲ್ಲದೆ ಬೇಸಿಗೆಯ ದಿನಗಳಲ್ಲಿ ಅಗ್ನಿಅವಘಡಗಳು ಸಂಭವಿಸದಂತೆ ನೋಡಿಕೊಳ್ಳುವ ಸಲುವಾಗಿ ಕಾವಲಿಗೆ ಅರಣ್ಯದಲ್ಲಿ 450 ಫೈರ್ ವಾಚರ್ ಗಳನ್ನು ನೇಮಕ ಮಾಡುವ ಕಾರ್ಯವೂ ನಡೆಯಲಿದೆ. ಅರಣ್ಯದ 13 ವಲಯಗಳಲ್ಲಿ ಸಂಚರಿಸುತ್ತಾ ಪರಿಶೀಲನೆ ನಡೆಸಲು ಒಂದು ಅಥವಾ ಎರಡು ಹೆಚ್ಚುವರಿ ಜೀಪುಗಳ ವ್ಯವಸ್ಥೆ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯ ಬಂಡೀಪುರ ಸಂರಕ್ಷಿತ ಅರಣ್ಯದಲ್ಲಿ 450 ಫೈರ್ವಾಚರ್ಗಳ ನೇಮಕ ಈ ತಿಂಗಳ ಅಂತ್ಯದೊಳಗೆ ಆಗಲಿದೆ. 13 ವಲಯಗಳಲ್ಲಿ ಒಂದು ಅಥವಾ ಎರಡು ಹೆಚ್ಚುವರಿ ಜೀಪು ನೀಡಲಾಗಿದೆ.

ಕಾಡ್ಗಿಚ್ಚು ತಡೆಗೆ ಸನ್ನದ್ಧವಾದ ಇಲಾಖೆ

ಎಲ್ಲ ವಲಯಗಳಲ್ಲಿ ಎರಡು ವಾಚ್ ಟವರ್ಗಳಿದ್ದು, ವಾಚ್ ಟವರ್ ಇಲ್ಲದ ಕಡೆಗಳಲ್ಲಿ ಮಚ್ಚಾನ್ ನಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ತನಕ ಹದ್ದಿನ ಕಣ್ಣಿಟ್ಟ ಸಿಬ್ಬಂದಿ ಕಾವಲು ಕಾಯಲಿದ್ದಾರೆ. ಒಂದು ವೇಳೆ ಬೆಂಕಿ ಅವಘಡ ಸಂಭವಿಸಿದ ಸಂದರ್ಭ ಅದನ್ನು ನಿಯಂತ್ರಿಸಲು ಅನುಕೂಲವಾಗುವಂತೆ ಬೆಂಕಿ ನಂದಿಸುವ ಬೋಯರ್ಸ್, ಸ್ಪ್ರೇಯರ್ಸ್, ಫೈರ್ ಬೇಯರ್ಸ್‌ಗನ್ನು ಸಿದ್ಧಗೊಳಿಸಲಾಗುತ್ತಿದೆ. ಇದೆಲ್ಲರ ನಡುವೆ ಅರಣ್ಯ ಸಿಬ್ಬಂದಿ, ಫೈರ್ ವಾಚರ್ ಮತ್ತು ವಿಶೇಷ ಹುಲಿ ಸಂರಕ್ಷಣಾ ಪಡೆಯ ಸಿಬ್ಬಂದಿ ಕೂಡ ಗಸ್ತು ನಡೆಸಲಿದ್ದಾರೆ.

ಗುಂಡ್ಲುಪೇಟೆ ಹಾಗೂ ಬಂಡೀಪುರ ಉಪ ವಿಭಾಗದ ಅಧಿಕಾರಿಗಳ ಸಭೆ ನಡೆಸಿ ಬೇಸಿಗೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಹಲವು ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಅರಣ್ಯದ ಪ್ರಮುಖ ಸ್ಥಳ ಹಾಗೂ ಹೆದ್ದಾರಿಯಲ್ಲಿ ಡ್ರೋಣ್ ಮೂಲಕ ಕಿಡಿಗೇಡಿಗಳ ಚಲನ, ವಲನಗಳ ಮೇಲೆ ಕಣ್ಣಿಡಲಾಗುತ್ತದೆ. ಅಗ್ನಿಶಾಮಕ ದಳಕ್ಕೆ ಪತ್ರ ಬರೆದು ಸಹಕಾರ ಪಡೆಯುವ ನಿರ್ಧಾರ ಮಾಡಲಾಗಿದೆ. ಒಟ್ಟಾರೆ ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆ ಸನ್ನದ್ಧವಾಗಿರುವುದಂತು ನಿಜ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+