Bajrang Dal Controversy: ಕಾಂಗ್ರೆಸ್‌ನವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ: ವಿ.ಸೋಮಣ್ಣ
ಚಾಮರಾಜನಗರ, ಮೇ, 03: ಬಜರಂಗ ದಳ ನಿಷೇಧಿಸುತ್ತೇವೆ ಎಂದು ಹೇಳುವ ಕಾಂಗ್ರೆಸ್ ಪಕ್ಷದ ವಿರುದ್ದ ಸಚಿವ ವಿ.ಸೋಮಣ್ಣ ರಾಮಸಮುದ್ರದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ರಾಮಸಮುದ್ರ ಬಡಾವಣೆಯ ವಿವಿಧ ವಾರ್ಡ್‌ಗಳಲ್ಲಿ ಬುಧವಾರ ಬೆಳಗ್ಗೆ 10:30ರಲ್ಲಿ ಮತಯಾಚನೆ ವೇಳೆ ಕಾಂಗ್ರೆಸ್ ಪಕ್ಷದವರ ಭಜರಂಗದಳ ನಿಷೇಧಿಸುವ ವಿಚಾರವಾಗಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದವರು ಬಾಯಿಗೆ ಬಂದಂತೆ ಮಾತನಾಡುತ್ತಾ ಇದ್ದಾರೆ. ಇದೇನಾ 75 ವರ್ಷ ಆಡಳಿತ ನಡಿಸಿದವರ ರೀತಿ ಮಾತಾಡುತ್ತಾರೆ, ಅವರಿಗೆ ಇದನ್ನು ಯಾರು ಹೇಳಕೊಡುತ್ತಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಸತ್ಸಂಪ್ರದಾಯಗಳು ಭಾರತೀಯರ ಕೊಡುಗೆಯಾಗಿದೆ. ರಾಮನ ಭಕ್ತ ಹನುಂತನೂ ಬೇಡ ಅಂದರೆ ಹೇಗೆ? ಇವರ ಮನೇಲಿ ಪೂಜೆ ಮಾಡಲ್ವಾ? ಕುಂಕುಮ ಇಟ್ಟುಕೊಳ್ಳಲ್ವಾ? ವಿಭೂತಿ ಬಳಿದುಕೊಳ್ಳಲ್ವಾ? ಇದೇನಿದು ಇವರು ದಿನಕ್ಕೊಂದು ರೀತಿ ಆಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಆಕ್ರೊಶ ವ್ಯಕ್ತಪಡಿಸಿದರು.
ಪ್ರಣಾಳಿಕೆಯಲ್ಲಿ ಬದಲಾವಣೆ ಮಾಡಲ್ಲ
ಇನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಬಜರಂಗದಳ, ಪಿಎಫ್‌ಐ ಸೇರಿದಂತೆ ಸಮಾಜದ ಶಾಂತಿಗೆ ಭಂಗ ತರುವ ಸಂಘಟನೆಗಳನ್ನು ಬ್ಯಾನ್ ಮಾಡುತ್ತೇನೆ ಎಂದು ಭರವಸೆ ನೀಡಿರುವುದು ಸದ್ಯ ಭಾರಿ ವಿವಾದಕ್ಕೆ ಕಾರಣವಾಗಿದೆ. ಬಜರಂಗದಳ ನಿಷೇಧ ಘೋಷಣೆಯನ್ನು ಬಂಡವಾಳವಾಗಿಸಿಕೊಂಡಿರುವ ಬಿಜೆಪಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ. ಈಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಣಾಳಿಕೆಯಲ್ಲಿ ಬದಲಾವಣೆ ಮಾಡಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ಬಿಜೆಪಿಯವರು ಮಾತ್ರ ಆಂಜನೇಯನ ಭಕ್ತರಾ? ನಾವೂ ಹನುಮನ ಭಕ್ತರೇ. ಶಾಂತಿ ತೋಟ ಹಾಳಾಗಬಾರದು, ಸೌಹಾರ್ದತೆ ಇರಬೇಕು, ಬಜರಂಗದಳ ಬ್ಯಾನ್ ಮಾಡ್ತೀವಿ ಅಂದ್ರೆ ಬಿಜೆಪಿಯವರು ಯಾಕೆ ಗಾಬರಿ ಆಗ್ತಿದ್ದಾರೆ. ಆಂಜನೇಯನಿಗೂ ಬಜರಂಗದಳಕ್ಕೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿದ್ದಾರೆ. ಬಿಜೆಪಿಯವರು ಬಹಳ ಪ್ರವೋಕ್ ಮಾಡ್ತಿದ್ದಾರೆ, ಜನಕ್ಕೆ ಅವರ ಉದ್ದೇಶ ಅರ್ಥವಾಗಿದೆ ಎಂದ ಅವರು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಯಾವುದೇ ಬದಲಾವಣೆ ಮಾಡಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
"ನಾವು ಹನುಮನ ಭಕ್ತರು, ಆಂಜನೇಯ ಬೇರೆ ಬಜರಂಗದಳ ಬೇರೆ, ಬಿಜೆಪಿಯವರು ಬಜರಂಗಿ ಎಂದು ಕ್ಯಾಂಪೇನ್ ಮಾಡುವ ಅಗತ್ಯವಿಲ್ಲ. ಜನರಿಗೆ ಹೊಟ್ಟೆಗೆ ಏನು ಕೊಟ್ಟಿದ್ದಾರೆ, ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ ಹೇಳಿ ಎಂದರು. ಮೇ 4ರಂದು ರಾಜ್ಯದಲ್ಲಿ ಹನುಮ ಚಾಲಿಕ ಪಠಣೆ ಮಾಡುವ ಬಗ್ಗೆ ಮಾತನಾಡಿ, ನಾವು ದಿನಾ ಹನುಮ ಚಾಲಿಸ ಮಾಡ್ತೀವಿ, ಅವರೊಬ್ಬರೇನಾ ಮಾಡೋದು, ಮೊದಲಿದ್ದ ಆರ್ ಎಸ್‌ಎಸ್ ಬೇರೆ ಈಗಿರುವ ಆರ್ ಎಸ್‌ಎಸ್ ಬೇರೆ ಎಂದು ಹೇಳಿದ್ದಾರೆ.
ಕುಂಬಳಕಾಯಿ ಕಳ್ಳ ಅಂದರೆ ಬಿಜೆಪಿಯವರು ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತಿದ್ದಾರೆ. ಆಯನೂರು ಮಂಜುನಾಥ್ ಏನು ಹೇಳಿದ್ರು ಎಲ್ಲರಿಗೂ ಗೊತ್ತಿದೆ. ಈಶ್ವರಪ್ಪಗೆ ಟಿಕೆಟ್ ಯಾಕೆ ಕೊಟ್ಟಿಲ್ಲ ಹೇಳಲಿ. ನಾವು ಐತಿಹಾಸಿಕ ಭರವಸೆ ನೀಡಿದ್ದೇವೆ, ಅದನ್ನು ಈಡೇರಿಸ್ತೀವಿ. ಬಿಜೆಪಿಯವರು ಏನೆ ಮಾಡಿದ್ರು ಅದು ಸಫಲವಾಗಲ್ಲ ಎಂದರು.
ನಾನೂ ಕೂಡ ಹಿಂದೂ, ಆಂಜನೇಯ ಮತ್ತು ರಾಮನ ಭಕ್ತ. ಬಿಜೆಪಿಯವರು ಏನು ಬೇಕಾದ್ರೂ ಮಾಡಿಕೊಳ್ಳಲಿ. ನಮಗೆ 141 ಸೀಟು ಬರೋದು ಗ್ಯಾರಂಟಿ. ಮೇ 13ರಂದು ಫಲಿತಾಂಶ ಬಂದ ನಂತರ ಎಲ್ಲರಿಗೂ ಅರ್ಥವಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications