ಚಾಮರಾಜನಗರ ಜಿಲ್ಲಾಧಿಕಾರಿ ನಿವಾಸದ ಬಳಿಯೇ ಶ್ರೀಗಂಧ ಮರಗಳನ್ನು ಕೊಯ್ದ ಖದೀಮರು
ಚಾಮರಾಜನಗರ, ನವೆಂಬರ್, 18: ಕೆಲ ದಿನಗಳ ಹಿಂದೆಯಷ್ಟೇ ಖದೋಮರು ಪೊಲೀಸ್ ಕಾನ್ಸ್‌ಟೇಬಲ್ ಮನೆಗೆ ಕನ್ನ ಹಾಕಿದ್ದರು. ಆದರೆ, ಇದೀಗ ಚಾಮರಾಜನಗರ ಜಿಲ್ಲಾಧಿಕಾರಿ ನಿವಾಸದ ಬಳಿಯೇ ಶ್ರೀಗಂಧ ಕಳವಿಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಾಗಾದರೆ ಮುಂದೇನಾಯ್ತು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ನಿವಾಸದ ಸುತ್ತಮುತ್ತಲೂ ಬೆಳೆದಿರುವ 4 ಶ್ರೀಗಂಧ ಮರಗಳನ್ನು ಖದೀಮರು ಅಲ್ಪ-ಸ್ವಲ್ಪ ಕೊಯ್ದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲಾಧಿಕಾರಿ ನಿವಾಸದ ಪಕ್ಕದಲ್ಲಿ ಚಾಮರಾಜನಗರ ಎಸ್ಪಿ ನಿವಾಸವೂ ಇದ್ದು, ಈ ನಡುವೆ ಶ್ರೀಗಂಧ ಮರಗಳ ಕಳವಿಗೆ ಯತ್ನಿಸಿರುವುದು ನಿಜಕ್ಕೂ ವಿಪರ್ಯಾಸವಾಗಿದೆ. ಜಿಲ್ಲಾಧಿಕಾರಿ ವಸತಿ ಗೃಹದ ಆಗ್ನೇಯ ಭಾಗದಲ್ಲಿ ಬೆಳೆದಿದ್ದ 4 ಶ್ರೀಗಂಧ ಮರಗಳನ್ನು ಸ್ವಲ್ಪ ಕೊಯ್ದು ಕಳ್ಳರು ತೆರಳಿದ್ದು, 5-6 ದಿನಗಳ ಹಿಂದೆ ಈ ಘಟನೆ ನಡೆದಿದೆ.
ಗಾರ್ಡನಿಂಗ್ ಮಾಡುವಾಗ ಕಳವಿಗೆ ಯತ್ನಿಸಿರುವುದು ಗೊತ್ತಾಗಿದ್ದು, ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆ ಮೇರೆಗೆ ವಸತಿ ಗೃಹದ ಅಟೆಂಡರ್ ಚಿನ್ನಸ್ವಾಮಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಇನ್ನು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಸಿಬ್ಬಂದಿ ಮನೆಯಲ್ಲೇ ಕಳ್ಳತನ: ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳರ ಕರಾಮತ್ತು ಮುಂದುವರೆದಿದೆ. ಪೊಲೀಸ್ ಸಿಬ್ಬಂದಿ ಮನೆಯಲ್ಲೇ ಕಳ್ಳರು ಕೈ ಚಳಕ ತೋರಿರುವ ಘಟನೆ ನಗರದ ಹೊಸ ವಿಎಚ್‌ಪಿ ಶಾಲೆ ಸಮೀಪದ ಮನೆಯಲ್ಲಿ ನಡೆದಿದೆ. ಹಾಗಾದರೆ ಈ ಘಟನೆ ನಡೆದಿದ್ದು ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಚಾಮರಾಜನಗರ ಪಟ್ಟಣ ಠಾಣೆ ಕಾನ್ಸ್‌ಟೇಬಲ್ ಮನುಕುಮಾರ್ ಎಂಬವವರ ಮನೆಯಲ್ಲಿ ಕಳ್ಳತನ ಆಗಿದ್ದು, 93 ಗ್ರಾಂ ಚಿನ್ನ, ಒಂದೂವರೆ ಕೆ.ಜಿ. ಬೆಳ್ಳಿ, 40,000 ರೂಪಾಯಿ ಹಣವನ್ನು ಹೊತ್ತೊಯ್ದಿದ್ದಾರೆ. ಮನೆ ಮಂದಿ ಕಳೆದ ಸೋಮವಾರದಂದು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಇಂದು ಮಧ್ಯಾಹ್ನ ಬಂದು ನೋಡಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದನ್ನು ಗಮನಿಸಿ ಕಳ್ಳರು ಬಾಗಿಲು ಮೀಟಿ ಕೃತ್ಯ ಎಸಗಿದ್ದಾರೆ.
ಜಿಲ್ಲೆಯಲ್ಲಿ ಕಳವು ಪ್ರಕರಣಗಳು ಒಂದರ ಹಿಂದೆ ಒಂದಂತೆ ನಡೆಯುತ್ತಿದ್ದು, ಇದೀಗ ಖಾಕಿ ಮನೆಗೇ ಕಳ್ಳರು ಕನ್ನ ಹಾಕಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಗುಂಡ್ಲುಪೇಟೆ ಪಟ್ಟಣದಲ್ಲಿ ಆಟೋ ಚಾಲಕ ಸೇರಿದಂತೆ ಇಬ್ಬರ ಮನೆಯಲ್ಲಿ ಕನ್ನ ಹಾಕಿ ನಗದು, ಚಿನ್ನ ಎಗರಿಸಿದ್ದರು.
ಇದಕ್ಕೂ ಮುನ್ನ ಚಾಮರಾಜನಗರದ ಭುವನೇಶ್ವರಿ ವೃತ್ತದ ಸಮೀಪದ 3 ಅಂಗಡಿಗಳಿಗೆ ಏಣಿ ಮೂಲಕ ಹತ್ತಿ ನಗದು ಕದ್ದೊಯ್ದಿದ್ದರು. ಹನೂರು ತಾಲೂಕಿನಲ್ಲೂ ಕಳ್ಳತನ ಪ್ರಕರಣಗಳು ವರದಿ ಆಗಿದ್ದು, ಸದ್ಯ ಜನರು ಬೆಚ್ಚಿ ಬೀಳುವಂತಾಗಿದೆ.
ಸಿಸಿ ಕ್ಯಾಮೆರಾ ತೆಗೆಸುವಂತೆ ಬೆದರಿಕೆ: ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದೀಗ ತಮ್ಮ ಅಂಗಡಿಗಳಲ್ಲಿ ಅಳವಡಿಕೆ ಮಾಡಿರುವ ಸಿಸಿಟಿವಿ ಕ್ಯಾಮೆರಾವನ್ನು ತೆಗೆದು ಹಾಕುವಂತೆ ಚಿನ್ನದಂಗಡಿ ಹಾಗೂ ಬಟ್ಟೆ ಅಂಗಡಿ ಮಾಲೀಕರಿಗೆ ಅಪರಿಚಿತರು ಬೆದರಿಕೆ ಪತ್ರ ಅಂಟಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರದ ಎಂ.ಕೆ.ಸುಬ್ರಮಣ್ಯ, ಎಂ.ಕೆ.ಶ್ರೀನಿವಾಸ ಹಾಗೂ ವಾಸುಕಿ ಎಂಬುವವರಿಗೆ ಬೆದರಿಕೆ ಪತ್ರ ಬರೆದು ಅಂಚೆ ಮೂಲಕ ಕಳುಹಿಸಲಾಗಿದೆ. ನಿಮ್ಮ ಅಂಗಡಿಗಳ ಮುಂದೆ ಇರುವ ಸಿಸಿ ಕ್ಯಾಮೆರಾ ತೆಗೆಸಿ, ಇಲ್ಲದಿದ್ದರೇ ತಕ್ಕ ಪಾಠ ಕಲಿಸುತ್ತೇವೆ ಎಂದು ಡೇಂಜರ್ ಸಿಂಬಲ್ ಬರೆದು ಕಳುಹಿಸಿದ್ದಾರೆ. ಮೂರು ಅಂಗಡಿ ಮಾಲೀಕರ ಹೆಸರು ಬರೆದು ಬೆದರಿಕೆ ಹಾಕಿರುವ ಆಸಾಮಿಗಳ ವಿರುದ್ಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ಕೊಡಲಾಗಿದೆ. ಇದರ ಬೆನ್ನಲೆ ನಿನ್ನೆ (ಅಕ್ಟೋಬರ್ 02) ರಾತ್ರಿ ಮೂರು ಅಂಗಡಿಗಳಲ್ಲಿ ಕಳ್ಳತನ ಆಗಿದ್ದು, ವ್ಯಾಪಾರಿಗಳನ್ನು ಬೆಚ್ಚಿ ಬೀಳಿಸಿದೆ.












Click it and Unblock the Notifications