ಚಾಮರಾಜನಗರ: ಈ ದೇಗುಲಕ್ಕೆ ಮಹಿಳೆಯರಿಗಿಲ್ಲ ಪ್ರವೇಶ.! ಆದರೂ ಒಬ್ಬಾಕೆ ಎಂಟ್ರಿಕೊಟ್ಟು ಮತ್ತೆ ವಾಪಸ್, ವಿಡಿಯೋ ವೈರಲ್
ಚಾಮರಾಜನಗರ, ನವೆಂಬರ್, 07: ಚಾಮರಾಜನಗರ ಗಡಿ ಭಾಗದಲ್ಲಿರುವ ತಮಿಳುನಾಡಿನ ಕೊಂಗಳ್ಳಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಇಲ್ಲ. ಆದರೂ ಕೂಡ ದರ್ಶನಕ್ಕಾಗಿ ಒಬ್ಬ ಮಹಿಳೆ ಬಂದಿದ್ದ ಘಟನೆ ಇಂದು (ನವೆಂಬರ್ 07) ನಡೆದಿದೆ. ಇನ್ನೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ತಮಿಳುನಾಡಿನ ತಾಳವಾಡಿ ತಾಲೂಕಿನಲ್ಲಿರುವ ಕೊಂಗಳ್ಳಿ ಬೆಟ್ಟಕ್ಕೆ ಕನ್ನಡಿಗರೇ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಕಾನನದ ನಡುವೆ ಇರುವ ಈ ದೇವಾಲಯಕ್ಕೆ ಹಿಂದಿನಿಂದಲೂ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವಿದೆ.

ಮಹಿಳೆಯರು ಬರಬಾರದೆಂಬ ಮಾಹಿತಿ ಕೊರತೆಯಿಂದ ಒಬ್ಬಾಕೆ ಬಂದಿದ್ದರು. ಇನ್ನು, ದೇಗುಲದ ಮುಂಭಾಗ ಮಹಿಳೆ ನಡೆದು ಹೋಗುವ ದೃಶ್ಯ ವೈರಲ್ ಕೂಡ ಆಗಿದೆ. ಸದ್ಯ, ದೇವರ ಸಂಪ್ರದಾಯ ಅರಿತು ಮಲ್ಲಿಕಾರ್ಜುನಸ್ವಾಮಿ ದರ್ಶನ ಮಾಡದೇ ಮಹಿಳೆ ವಾಪಾಸ್ ಆಗಿದ್ದಾರೆ.
ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶಕ್ಕೆ ಈ ದೇಗುಲ ಒಳಪಡುತ್ತೆ. ದೀಪಾವಳಿ ಹಾಗೂ ಯುಗಾದಿ ಜಾತ್ರೆಗೆ ಇಲ್ಲಿ ಕೊಂಡೋತ್ಸವ ನಡೆಯುತ್ತೆ. ಆದರೆ, ಇದೇ ದೇಗುಲಕ್ಕೆ ಒಂದು ಒಂದೂವರೆ ಕಿ.ಮೀಟರ್ ದೂರದಲ್ಲೇ ಮಹಿಳೆಯರಿಗೆ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ. ಇಲ್ಲಿ ಯಾವುದೇ ವಯೋಮಾನದ ಸ್ತ್ರೀಯರಿಗೂ ಪ್ರವೇಶ ಸಂಪೂರ್ಣ ನಿಷಿದ್ಧವಾಗಿದೆ.
ಮಹದೇಶ್ವರ ಸಮಕಾಲೀನರಾದ ಮಲ್ಲಿಕಾರ್ಜುನಸ್ವಾಮಿ ಘೋರ ತಪಸ್ವಿ ಆಗಿದ್ದರಂತೆ. ಅವರು ತನ್ನ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಿದ್ದರು ಎಂದು ಇಲ್ಲಿನ ಹಿರಿಯರು ಹೇಳುತ್ತಿದ್ದಾರೆ. ಆದ್ದೆರಿಂದ ಇಲ್ಲಿಗೆ ಯಾವುದೇ ಮಹಿಳೆಯರು ಪ್ರವೇಶ ನೀಡುವುದಿಲ್ಲ. ಇದು ಈಗಿನದ್ದಲ್ಲ, ಹಿಂದಿನಿಂದಲೂ ನಡೆದುಕೊಂಡುಬಂದಂತಹ ಸಂಪ್ರದಾಯವಾಗಿದೆ.
ಅರ್ಚಕ ಹೇಳಿದ್ದೇನು.?: ಪ್ರವಾಸಕ್ಕೆಂದು ಬಂದಿದ್ದ ಮಹಿಳೆಯೊಬ್ಬರು ಜನರೆಲ್ಲಾ ಬೆಟ್ಟಕ್ಕೆ ಬರುವುದನ್ನು ಕಂಡು ಅವರು ಕೂಡ ಮಲ್ಲಿಕಾರ್ಜುನನ ದರ್ಶನಕ್ಕೆ ಬಂದಿದ್ದರು. ಆದರೆ, ದೇವಾಲಯದ ಐತಿಹ್ಯ ಮತ್ತು ಸಂಪ್ರದಾಯವನ್ನು ತಿಳಿದು ಆಕೆ ದೇವರ ದರ್ಶನ ಮಾಡದೇ, ದೇಗುಲ ಹೊರಾಂಗಣದಲ್ಲೇ ತಪ್ಪು ಕಾಣಿಕೆ ಸಲ್ಲಿಸಿ ತೆರಳಿದ್ದಾರೆ ಎಂದು ಕೊಂಗಳ್ಳಿ ಬೆಟ್ಟದ ಅರ್ಚಕ ಮಲ್ಲಿಕಾರ್ಜುನಪ್ರಸಾದ್ ಒನ್ ಇಂಡಿಯಾಗೆ ಮಾಹಿತಿ ನೀಡಿದ್ದಾರೆ.
ಜಮೀನು ಕಳೆದುಕೊಳ್ಳುವ ಆತಂಕ: ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ವಕ್ಫ್ ಆಸ್ತಿ ವಿವಾದ ಗಡಿ ಜಿಲ್ಲೆ ಚಾಮರಾಜನಗರಕ್ಕು ಕಾಲಿಟ್ಟಿದೆ. ಇಲ್ಲಿನ ವಿ.ಸಿ.ಹೊಸೂರಿನ ಮೂವರು ರೈತರು ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಗ್ರಾಮದ ಮೂವರು ರೈತರ ಜಮೀನನ್ನು ವಕ್ಫ್ ಸಂಸ್ಥೆಯ ಹೆಸರಿಗೆ ಖಾತೆ ಬದಲಿಸುವಂತೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ತಹಶೀಲ್ದಾರರಿಗೆ 2022ರ ಜುಲೈನಲ್ಲೇ ಬರೆದಿರುವ ಪತ್ರ ಇದೀಗ ಬೆಳಕಿಗೆ ಬಂದಿದೆ. ಬಂಡಿಗೆರೆ ಸರ್ವೆ ನಂಬರ್ 179ರ 2 ಎಕರೆ 9 ಗುಂಟೆ ಜಮೀನು ಎಚ್.ಜಿ.ಶಾಂತಪ್ಪ, ಎಚ್.ವಿ.ಗಿರಿಮಲ್ಲು, ಎಚ್.ವಿ.ನಾಗರಾಜು ಎಂಬುವರ ಹೆಸರಿನಲ್ಲಿದೆ.
ಇದನ್ನು ಹರದನಹಳ್ಳಿಯ ಜಾಮಿಯಾ ಮಸೀದಿ ವಕ್ಫ್ ಆಸ್ತಿ ಎಂದು ಖಾತೆ ಬದಲಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆ ಖಾತೆ ಬದಲಿಗೆ ಕ್ರಮ ಕೈಗೊಳ್ಳಲು ಮೂರು ತಿಂಗಳ ಹಿಂದೆಯಷ್ಟೇ ಆರ್.ಆರ್.ಟಿ ವಿಭಾಗದಿಂದ ರಾಜಸ್ವ ನಿರೀಕ್ಷಕರಿಗೆ ಈ ಪತ್ರ ರವಾನೆ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತರು, 45 ವರ್ಷಗಳ ಹಿಂದೆ ನಮ್ಮ ತಂದೆ ಮುಸ್ಲಿಂ ವ್ಯಕ್ತಿಯಿಂದ ಜಮೀನು ಖರೀದಿಸಿದ್ದಾರೆ. ಆದರೆ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಪತ್ರದ ಪ್ರತಿ ನಮಗೆ ಇದೀಗ ಲಭ್ಯವಾಗಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ನಮಗೂ ಜಮೀನು ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications