ಅಳಿವಿನಂಚಿನಲ್ಲಿ ರಣಹದ್ದು: ಮೂರು ರಾಜ್ಯಗಳಲ್ಲಿ ಏಕಕಾಲಕ್ಕೆ ರಣಹದ್ದು ಸಮೀಕ್ಷೆ
ಕರ್ನಾಟಕದ ಬಂಡೀಪುರ, ನಾಗರಹೊಳೆ, ಬಿಆರ್ಟಿ ತಮಿಳುನಾಡಿನ ಮಧುಮಲೈ ಹಾಗೂ ಕೇರಳದ ವೈನಾಡು ಅರಣ್ಯ ಪ್ರದೇಶದಲ್ಲಿ 80ರ ದಶಕದಲ್ಲಿ ಆಜುಮಾಸು 10 ಸಾವಿರದಷ್ಟಿದ್ದ ರಣಹದ್ದುಗಳ ಸಂಖ್ಯೆ ಗಣನೀಯವಾಗಿ ಕುಸಿದಿದ್ದು 250 ಇರಬಹುದು ಎನ್ನಲಾಗುತ್ತಿದೆ.
ಚಾಮರಾಜನಗರ, ಫೆಬ್ರವರಿ 25: ಒಂದು ಕಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ರಣಹದ್ದುಗಳು ಈಗ ನಶಿಸುವ ಹಂತ ತಲುಪಿರುವುದರಿಂದ ಎಚ್ಚೆತ್ತ ಅರಣ್ಯ ಸಚಿವಾಲಯವು ರಣಹದ್ದುಗಳ ಸರ್ವೇಗೆ ಮುಂದಾಗಿದೆ.
ಕರ್ನಾಟಕದ ಬಂಡೀಪುರ, ನಾಗರಹೊಳೆ, ಬಿಆರ್ಟಿ ತಮಿಳುನಾಡಿನ ಮಧುಮಲೈ ಹಾಗೂ ಕೇರಳದ ವೈನಾಡು ಅರಣ್ಯ ಪ್ರದೇಶದಲ್ಲಿ 80ರ ದಶಕದಲ್ಲಿ ಆಜುಮಾಸು 10 ಸಾವಿರದಷ್ಟಿದ್ದ ರಣಹದ್ದುಗಳ ಸಂಖ್ಯೆ ಗಣನೀಯವಾಗಿ ಕುಸಿದಿದ್ದು 250 ಇರಬಹುದು ಎನ್ನಲಾಗುತ್ತಿದೆ.

ಅಳಿವಿನಂಚಿನಲ್ಲಿರುವ ಜಟಾಯುಗಳನ್ನು ಉಳಿಸಿಕೊಳ್ಳಲೇ ಬೇಕಾದ ತುರ್ತು ಎದುರಿಗಿರುವ ಹಿನ್ನೆಲೆಯಲ್ಲಿ ನೀಲಗಿರಿ ಶ್ರೇಣಿಯಲ್ಲಿ 25 ಹಾಗೂ 26 ರಂದು ಸರ್ವೇ ನಡೆಯಲಿದ್ದು ಶುಕ್ರವಾರ ಬಂಡೀಪುರದಲ್ಲಿ ರಣಹದ್ದು ಸರ್ವೇಕ್ಷಣೆ ಬಗ್ಗೆ ಸಿಬ್ಬಂದಿಗೆ ತರಬೇತಿ ಕೊಡಲಾಗಿದೆ.
ಸುಸ್ಥಿರ ಪರಿಸರದಲ್ಲಿ ಒಂದಕ್ಕೊಂದು ಸರಪಳಿ ಸಂಬಂಧ ಹೊಂದಿದ್ದು ರಣಹದ್ದುಗಳು ಬೇಟೆಯಾಡಿ ಬದುಕುವುದಿಲ್ಲ. ಕಾಡಿನಲ್ಲಿ, ಕಾಡಂಚಿನಲ್ಲಿ ಸತ್ತ ಪ್ರಾಣಿಗಳನ್ನು ತಿಂದು ಬದುಕುವುದರಿಂದ ಕಾಡಿನ ಪರಿಸರ ಸ್ವಚ್ಛತೆಗೆ ರಣಹದ್ದುಗಳು ಬೇಕೆ ಬೇಕು. ರಣಹದ್ದುಗಳನ್ನು ಉಳಿಸಿಕೊಳ್ಳಲು 2025 ರವರೆಗೆ ಕೇಂದ್ರ ಪರಿಸರ ಸಚಿವಾಲಯವು ಯೋಜನೆ ಹಾಕಿಕೊಂಡಿದ್ದು ಅದರ ಮೊದಲ ಹಂತವೇ ಈ ಸರ್ವೇಕ್ಷಣೆಯಾಗಿದೆ. ಕಾಡಿನ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ರಣಹದ್ದುಗಳನ್ನು ಉಳಿಸಲೇಬೇಕಿದೆ.

ಅವನತಿಗೆ ನಾಂದಿ ಹಾಡಿದ ಚುಚ್ಚುಮದ್ದು..!
ರಾಸುಗಳಿಗೆ ನೀಡುತ್ತಿದ್ದ ಡೈಕ್ಲೊಪೆನಾಕ್ (diclofenac) ಎಂಬ ಚುಚ್ಚುಮದ್ದು ರಣಹದ್ದುಗಳ ಅವನತಿಗೆ ಕಾರಣವಾಗಿದ್ದು ಸದ್ಯ ಇದು 2006 ರಲ್ಲಿ ನಿಷೇಧಕ್ಕೆ ಒಳಪಟ್ಟಿದೆ. ಡೈಕ್ಲೊಪೆನಾಕ್ ಚುಚ್ಚುಮದ್ದು ಪಡೆದಿದ್ದ ಸತ್ತ ದನಗಳು, ಜಾನುವಾರುಗಳನ್ನು ತಿಂದ ರಣಹದ್ದುಗಳು ಕಿಡ್ನಿ ಸಮಸ್ಯೆಗೆ ಒಳಗಾಗಿ ಗುಂಪುಗುಂಪಾಗಿ ಮೃತಪಟ್ಟಿದ್ದರಿಂದ ಜಟಾಯುಗಳ ಸಂತತಿಗೆ ದೊಡ್ಡ ಹೊಡೆತ ಕೊಟ್ಟಿದೆ. ಕಾಡಿಗೆ ಬೆಂಕಿ ಬೀಳುವುದು ಕೂಡ ಇವುಗಳ ಅವನತಿಗೆ ಕಾರಣವಾಗಿದ್ದು ಕಾಡಿನ ಪ್ರಮುಖ ಪಕ್ಷಿಯೊಂದು ಈಗ ಅವನತಿಗೆ ತಲುಪುತ್ತಿದೆ.
ನೀಲಗಿರಿ ಶ್ರೇಣಿಯಲ್ಲಿ ಮುಖ್ಯವಾಗಿ ಬಿಳಿಬೆನ್ನಿನ ರಣಹದ್ದು, ಕೆಂಪು ತಲೆ ರಣಹದ್ದು, ಇಂಡಿಯನ್ ವಲ್ಚರ್, ಈಜಿಪ್ಷಿಯನ್ ವಲ್ಚರ್( ಕಾಡಿನ ಹೊರಗೆ ಸಾಮಾನ್ಯವಾಗಿ ಕಾಣಸಿಗಲಿದೆ) ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಏಕಕಾಲದಲ್ಲಿ ಸಮೀಕ್ಷೆ ನಡೆಯಲಿದೆ.
ರಣಹದ್ದುಗಳು ಸಾಮಾನ್ಯವಾಗಿ 5 ವರ್ಷಕ್ಕೆ ಒಮ್ಮೆ 1 ಮೊಟ್ಟೆಯನ್ನು ಮಾತ್ರ ಇಡುವುದರಿಂದ ಇವುಗಳ ಸಂತತಿ ಅತ್ಯಂತ ವೇಗವಾಗಿ ಬೆಳೆಯುವುದಿಲ್ಲ, ಹುಲಿಯಷ್ಟೇ ಪ್ರಮುಖವಾಗಿರುವ ರಣಹದ್ದು ಈಗ ಕಣ್ಮರೆಯಾಗುತ್ತಿದೆ.












Click it and Unblock the Notifications