Get Updates
Get notified of breaking news, exclusive insights, and must-see stories!

ಕೆ.ಗುಡಿಯಲ್ಲಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ ಹಾರ್ನ್ ಬಿಲ್: ಈ ವಿಶೇಷ ಪಕ್ಷಿಯ ಬಗ್ಗೆ ನಿಮಗೆಷ್ಟು ಗೊತ್ತು..?

ಚಾಮರಾಜನಗರ, ಮೇ 28: ಅರಣ್ಯ ಸಂಪತ್ತು ಮತ್ತು ವಿವಿಧ ಜೀವಿಗಳ ಆವಾಸ ಸ್ಥಾನವಾಗಿರುವ ಜಿಲ್ಲೆಯ ಕೆ.ಗುಡಿ ಅರಣ್ಯ ವಲಯದಲ್ಲಿ ಯಾವುದಾದರೂ ಅಪರೂಪದ ಅಳಿವಿನಂಚಿನಲ್ಲಿರುವ ಹಲವು ರೀತಿಯ ಜೀವಿಗಳು, ಪ್ರಾಣಿ, ಪಕ್ಷಿಗಳು ಕಾಣಿಸಿಕೊಂಡು ಅಚ್ಚರಿ ಮೂಡಿಸುವುದು ಸಾಮಾನ್ಯವಾಗಿದೆ. ಅದರಂತೆ ಇದೀಗ ಜಿಲ್ಲೆಯ ಆರ್ಟಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಬೇಧವೆಂದು ಗುರುತಿಸಿರುವ ಮಂಗಟ್ಟೆ(ಹಾರ್ನ್ಬಿಲ್) ಕಾಣಿಸಿ ಎಲ್ಲರ ಗಮನಸೆಳೆದಿದೆ.

ಕೆ.ಗುಡಿಗೆ ಪ್ರಾಣಿ ಮತ್ತು ಪಕ್ಷಿಪ್ರಿಯರು ಆಗಾಗ್ಗೆ ಬರುತ್ತಲೇ ಇರುತ್ತಾರೆ. ಹೀಗೆ ಬಂದವರು ಇಲ್ಲಿನ ವಿಶೇಷತೆಯನ್ನು ಕೆದಕಿ ಹೋಗುವುದು ಮಾಮೂಲಿಯಾಗಿದೆ. ಅದರಂತೆ ಕೆಲವು ದಿನಗಳ ಹಿಂದೆ ಇಲ್ಲಿಗೆ ಬಂದಿದ್ದ ಪ್ರವಾಸಿಗರೊಬ್ಬರು ಮರದ ಮೇಲೆ ಕುಳಿತಿದ್ದ ಹಾರ್ನ್ ಬಿಲ್ ಪೋಟೋವನ್ನು ಸೆರೆ ಹಿಡಿದ್ದಾರೆ. ಅರಣ್ಯಾಧಿಕಾರಿಗಳು ಇದನ್ನು ಗ್ರೇಟ್ ಇಂಡಿಯನ್ ಹಾರ್ನ್ಬಿಲ್ ಎಂದು ಗುರುತಿಸಿದ್ದಾರೆ. ಈ ಅರಣ್ಯದಲ್ಲಿ ಇಂತಹ ಎರಡರಿಂದ ಮೂರು ಪಕ್ಷಿಗಳು ಮಾತ್ರ ಇವೆ. ಅಪರೂಪಕ್ಕೊಮ್ಮೆ ಕಾಣಿಸುತ್ತವೆ ಎಂದು ಹೇಳಿದ್ದಾರೆ.

A Hornbill Bird Made A Surprise Appearance At K Gudi Forest

ಹಾಗೆನೋಡಿದರೆ ಜೀವವೈವಿಧ್ಯತೆಗೆ ಸಾಕ್ಷಿಯಾಗಿರುವ ಬಿಆರ್‌ಟಿ ಕೇವಲ ಹುಲಿಯ ಆವಾಸ ಸ್ಥಾನ ಮಾತ್ರವಲ್ಲ ಪಕ್ಷಿಗಳ ಪಾಲಿನ ಸ್ವರ್ಗವೆಂದರೂ ತಪ್ಪಾಗಲಾರದು. ಇದು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ಪೂರ್ವ ಮತ್ತು ಪಶ್ಚಿಮ ಘಟ್ಟಗಳನ್ನು ಸಂದಿಸುತ್ತದೆ. ವಿವಿಧ ಬಗೆಯ ಸಸ್ಯ ಪ್ರಬೇಧಗಳು, ಔಷಧ ಸಸ್ಯಗಳು, ಸಸ್ತನಿಗಳು, ಸರಿಸೃಪಗಳು, ಬಗೆಬಗೆಯ ಚಿಟ್ಟೆಗಳು, 270ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳಿವೆ. ಆಗಾಗ್ಗೆ ಅಳಿವಿನಂಚಿನಲ್ಲಿರುವ ಪಕ್ಷಿಗಳು ಇಲ್ಲಿ ಪತ್ತೆಯಾಗುತ್ತಲೇ ಇರುತ್ತವೆ. ಕೆಲವು ವರ್ಷಗಳ ಹಿಂದೆ ಅಳಿವಿನಂಚಿನಲ್ಲಿರುವ ಕೆಂಪು ತಲೆ ರಣಹದ್ದು ಗುಂಡಾಲ್ ಜಲಾಶಯದ ಸಮೀಪದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು.

ಕೆ.ಗುಡಿ ಪಕ್ಷಿಗಳ ಆವಾಸ ಸ್ಥಾನ

ಪಕ್ಷಿಗಳ ಬಗೆಗೆ ಪರಿಚಯಿಸುವ ಮತ್ತು ಅವುಗಳ ಸಂತತಿಯನ್ನು ಉಳಿಸುವ ಸಲುವಾಗಿ ಹತ್ತು ಹಲವು ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗುತ್ತಿದ್ದು, ಕೆ.ಗುಡಿ ಅರಣ್ಯವಲಯದಲ್ಲಿ ಹಲವು ಬಗೆಯ ಪಕ್ಷಿಗಳು ಇಲ್ಲಿದ್ದು, ತಮ್ಮ ಆವಾಸ ಸ್ಥಾನವನ್ನು ಇವು ಆಗಾಗ್ಗೆ ತಮ್ಮ ಇರುವಿಕೆಯನ್ನು ವೀಕ್ಷಕರ ಕ್ಯಾಮರಾಗಳಲ್ಲಿ ಸೆರೆಯಾಗುವ ಮೂಲಕ ಖಚಿತಪಡಿಸುವುದು ಕಂಡು ಬರುತ್ತಿದೆ. ಪಕ್ಷಿಗಳ ಸಂತತಿಯನ್ನು ಉಳಿಸುವ ಸಲುವಾಗಿ ಅರಣ್ಯ ಇಲಾಖೆಯಿಂದ ಪ್ರತಿ ವರ್ಷ ರಾಜ್ಯಮಟ್ಟದ ಪಕ್ಷಿ ಹಬ್ಬ ಹಮ್ಮಿಕೊಳ್ಳಲಾಗುತ್ತಿರುವುದು ವಿಶೇಷವಾಗಿದೆ.

A Hornbill Bird Made A Surprise Appearance At K Gudi Forest

ಭಾಗಶಃ ಅರಣ್ಯ ಪ್ರದೇಶಗಳಿಂದ ಕೂಡಿರುವ ಚಾಮರಾಜನಗರ ಜಿಲ್ಲೆಯ ಹುಲಿ ಸಂರಕ್ಷಿತಾರಣ್ಯ ಪ್ರದೇಶ ಬಂಡೀಪುರದಲ್ಲೂ ಹಿಂದೊಮ್ಮೆ ಹಾರ್ನ್ ಬಿಲ್ ಪತ್ತೆಯಾಗಿತ್ತು. 2021ರಲ್ಲಿ ಪಕ್ಷಿ ಗಣತಿಯಲ್ಲಿ ಎರಡು ಬಗೆಯ ಅಪರೂಪದ ಪಕ್ಷಿಗಳು ಪತ್ತೆಯಾಗಿದ್ದವು. ಮೊದಲ ಬಾರಿಗೆ ಗ್ರೇಟ್ ಹಾರ್ನ್ ಬಿಲ್ ಪಕ್ಷಿ ಕಾಣಿಸಿಕೊಂಡಿತ್ತು. ಈ ಕುರಿತಂತೆ ಮಾಹಿತಿ ನೀಡಿರುವ ಕೆ.ಗುಡಿ ವಲಯದ ಆರ್ಎಫ್ ಒ ವಿನೋದ್ ಅವರು ದಾಂಡೇಲಿ ಅರಣ್ಯದಲ್ಲಿ ಹಾರ್ನ್ ಬಿಲ್ ಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಬಿಆರ್ಟಿ ವ್ಯಾಪ್ತಿಯ ಅರಣ್ಯದಲ್ಲಿ ಹಾರ್ನ್ ಬಿಲ್ ಗಳು ಇರುವುದು ಬಹಳ ಕಡಿಮೆ. ಕೆ.ಗುಡಿಯಲ್ಲಿ ಬೆರಳೆಣಿಕೆಷ್ಟು ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ಗಳಿವೆ ಎಂದು ತಿಳಿಸಿದ್ದಾರೆ.

ಹಾರ್ನ್ ಬಿಲ್ ಪಕ್ಷಿಗಳ ವಿಶೇಷತೆ

ಇನ್ನು ಹಾರ್ನ್ ಬಿಲ್ ಬಗ್ಗೆ ಒಂದಿಷ್ಟು ಹೇಳುವುದಾದರೆ, ಇದೊಂದು ಸುಂದರ ಪಕ್ಷಿಯಾಗಿದೆ. ಹಳದಿ ಬಣ್ಣದ ವಿಶಿಷ್ಟ ಆಕಾರದ ಉದ್ದದ ಕೊಕ್ಕನ್ನು ಹೊಂದಿ ಬೇರೆ ಪಕ್ಷಿಗಳಿಗಿಂತ ವಿಭಿನ್ನ ಮತ್ತು ವಿಶಿಷ್ಟವಾಗಿದೆ. ವಿಶ್ವದಾದ್ಯಂತ ಸುಮಾರು 53 ವಿವಿಧ ರೀತಿಯ ಹಾರ್ನ್ ಬಿಲ್ಗಳಿವೆ. ಭಾರತವು ಅಂದಾಜು 9 ಜಾತಿಯ ಹಾರ್ನ್ ಬಿಲ್ಗಳ ನೆಲೆಯಾಗಿದೆ. ಕಾಳಿ ನದಿಯ ದಡದಲ್ಲಿರುವ ದಾಂಡೇಲಿಯಲ್ಲಿ ಮಲಬಾರ್ ಗ್ರೇ ಹಾರ್ನ್ ಬಿಲ್, ಇಂಡಿಯನ್ ಗ್ರೇ ಹಾರ್ನ್ ಬಿಲ್, ಮಲಬಾರ್ ಪೈಡ್ ಹಾರ್ನಬಿಲ್ ಮತ್ತು ಗ್ರೇಟ್ ಇಂಡಿಯನ್ ಹಾರ್ನ್ಬಿಲ್ ಎಂಬ 4 ಬಗೆಯ ಹಾರ್ನ್ಬಿಲ್ ಗಳು ಕಂಡುಬರುತ್ತವೆ.

A Hornbill Bird Made A Surprise Appearance At K Gudi Forest

ಕನ್ನಡದಲ್ಲಿ ಈ ಪಕ್ಷಿಯನ್ನು ಮಂಗಟ್ಟೆ ಹಕ್ಕಿ ಎಂದು ಕರೆಯಲಾಗುತ್ತದೆ. ಇದು ಅರಣ್ಯದಲ್ಲಿ ಸಣ್ಣ ಪುಟ್ಟ ಕೀಟಗಳನ್ನು ತಿಂದುಕೊಂಡು ಮರದ ಪೊಟರೆಗಳಲ್ಲಿ ವಾಸಿಸುತ್ತವೆ. ಇನ್ನು ಇವು ಹಳೆಯ, ದೊಡ್ಡ ಮರಗಳ ಪೊಟರೆಗಳನ್ನು ಆಯ್ದುಕೊಂಡು ಅದರಲ್ಲಿ ಗೂಡು ಮಾಡಿಕೊಂಡು ಅಲ್ಲಿ ಮೊಟ್ಟೆಯಿಟ್ಟು, ಕಾವು ಕೊಟ್ಟು ಮರಿ ಮಾಡುತ್ತವೆ. ಆದರೆ ಇದಕ್ಕೂ ಮುನ್ನ ಹೆಣ್ಣು ಹಕ್ಕಿ ಗೂಡಿನ ಒಳಗೆ ಹೋಗಿ ಕೂತ ನಂತರ ಗಂಡು ಹಕ್ಕಿ ಹೊರಗಿನಿಂದ ಗೂಡಿನ ಬಾಯನ್ನು ಸಣ್ಣ ಕಿಂಡಿಯೊಂದನ್ನು ಬಿಟ್ಟು ಪೂರ್ತಿ ಮುಚ್ಚಿಬಿಡುತ್ತದೆ. ಒಳಗೆ ಮೊಟ್ಟೆಗಳು ಮರಿಯಾಗಿ ಅವು ತುಸು ಬೆಳೆಯುವವರೆಗೂ ಗಂಡು ಹಕ್ಕಿ ಹೆಣ್ಣು ಹಾಗೂ ಮರಿಗಳಿಗೆ ಆಹಾರವನ್ನು ತಂದು ನೀಡುವುದು ಇದರ ವಿಶೇಷತೆಯಾಗಿದೆ.

ವಿಶಿಷ್ಟ, ವಿಭಿನ್ನವಾದ ಜೀವನ ಕ್ರಮ

ಇನ್ನು ಮರಿಗಳು ಸ್ವಲ್ಪ ಬೆಳೆಯುತ್ತಿದ್ದಂತೆಯೇ ಹೆಣ್ಣು ಹಕ್ಕಿ ಗೂಡನ್ನು ಒಡೆದುಕೊಂಡು ಹೊರಗೆ ಬರುತ್ತವೆಯಂತೆ. ಆ ನಂತರ ಮರಿಗಳು ತಮ್ಮ ಮಲದಿಂದ ಮತ್ತೆ ಗೂಡಿನ ಬಾಯಿಯನ್ನು ಒಂದು ಸಣ್ಣ ರಂದ್ರದಷ್ಟು ಬಿಟ್ಟು ಉಳಿದಂತೆ ಮುಚ್ಚಿಬಿಡುತ್ತವೆ. ಆ ನಂತರ ಗಂಡು ಮತ್ತು ಹೆಣ್ಣು ಎರಡು ಹಕ್ಕಿಗಳು ತಮ್ಮ ಮರಿಗಳಿಗೆ ಗುಟುಕು ನೀಡಿ ಅವುಗಳನ್ನು ಬೆಳೆಸುತ್ತವೆ. ಅವುಗಳಿಗೆ ರೆಕ್ಕೆ ಹುಟ್ಟಿ ಹಾರಲು ಶಕ್ತವಾದ ಬಳಿಕ ಗೂಡಿನ ಬಾಗಿಲನ್ನು ಒಡೆದು ಹೊರ ಬಂದು ಬಳಿಕ ತಮ್ಮ ಬದುಕಿನ ಹಾದಿಯನ್ನು ರೂಪಿಸಿಕೊಳ್ಳುವುದು ಇವುಗಳ ಜೀವನ ಕ್ರಮವಾಗಿದೆ.

ಇಂತಹ ಅಪರೂಪದ ಪಕ್ಷಿಗಳು ಕೆ.ಗುಡಿ ಅರಣ್ಯದಲ್ಲಿರುವುದು ಸಂತಸದ ವಿಚಾರವಾಗಿದೆ. ಈ ಪಕ್ಷಿಗಳ ಸಂತತಿಯನ್ನು ಮುಂದಿನ ತಲೆಮಾರಿಗೂ ಉಳಿಯುವಂತೆ ನೋಡಿಕೊಳ್ಳಬೇಕಾಗಿದೆ. ಇವತ್ತು ಹಲವು ಕಾರಣಗಳಿಗೆ ಅಪರೂಪದ ಪಕ್ಷಿಗಳ ಸಂತತಿ ನಿಧಾನವಾಗಿ ನಶಿಸುತ್ತಾ ಸಾಗುತ್ತಿದೆ. ಹೀಗಿರುವಾಗ ಅಳಿವಿನಂಚಿನಲ್ಲಿರುವ ಜೀವರಾಶಿಗಳನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+