ಹನೂರು: ಬಾಗಿಲು ಮುರಿದು ಶಾಲೆಯೊಳಗೆ ನುಗ್ಗಿದ ಜಾಂಬವಂತ, ಮುಂದಾಗಿದ್ದೇನು ಗೊತ್ತಾ?
ಚಾಮರಾಜನಗರ, ಡಿಸೆಂಬರ್, 15: ಹನೂರು ತಾಲೂಕಿನಲ್ಲಿ ಈಗ ಕರಡಿ ಉಪಟಳ ಜೋರಾಗಿದ್ದು, ಅಜ್ಜಿಪುರದಲ್ಲಿ ಕರಡಿ ಸೆರೆ ಹಿಡಿದ ಬಳಿಕ ಈಗ ಸಂದನಪಾಳ್ಯದ ಶಾಲೆಯೊಂದಕ್ಕೆ ಕರಡಿ ನುಗ್ಗಿ ದಾಂಧಲೆ ಮಾಡಿರುವ ಘಟನೆ ನಡೆದಿದೆ.
ಹನೂರು ತಾಲೂಕಿನ ಸಂದನಪಾಳ್ಯ ಸಂತ ಅಂಥೋಣಿ ಗ್ರಾಮಾಂತರ ಪ್ರೌಢಶಾಲೆಗೆ ಗುರುವಾರ (ಡಿಸೆಂಬರ್ 14) ಮಧ್ಯರಾತ್ರಿ ಕರಡಿಯೊಂದು ನುಗ್ಗಿ ಆಹಾರ ಪದಾರ್ಥಗಳನ್ನು ತಿನ್ನುವುದರ ಜೊತೆಗೆ ಪೀಠೋಪಕರಗಳನ್ನು ಮುರಿದು ಹಾಕಿ ದಾಂಧಲೆ ಮಾಡಿದೆ. ರಾತ್ರಿ 1 ಗಂಟೆ ಸಮಯದಲ್ಲಿ ಶಿಕ್ಷಕರ ವಿಶ್ರಾಂತಿ ಕೊಠಡಿಯ ಬಾಗಿಲನ್ನು ಮುರಿದು ಒಳನುಗ್ಗಿರುವ ಕರಡಿ ಬೀರುಬಾಗಿಲನ್ನು ಮುರಿದು ಅದರೊಳಗಿದ್ದ ಅಡುಗೆ ಎಣ್ಣೆ, ಬೆಲ್ಲ ಮುಂತಾದ ಪದಾರ್ಥಗಳನ್ನು ತಿಂದಿದೆ.

ಕರಡಿ ಬಾಗಿಲು ಮುರಿದು ಒಳನುಗ್ಗುತ್ತಿರುವ ದೃಶ್ಯ ಶಾಲಾ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂದು ಬೆಳಗ್ಗೆ ಮುಖ್ಯಶಿಕ್ಷಕ ಲೂಯಿಸ್ ನೇಸನ್ ಶಾಲೆಗೆ ಬರುತ್ತಿದ್ದಂತೆ ಶಿಕ್ಷಕರ ಕೊಠಡಿ ಬಾಗಿಲು ಮುರಿದಿರುವುದು ಕಂಡುಬಂದಿದೆ. ಬಳಿಕ ಒಳಗೆ ಹೋಗಿ ಪರಿಶೀಲಿಸಿದಾಗ ಪುಸ್ತಕ, ಆಹಾರ ಸಾಮಗ್ರಿಗಳೆಲ್ಲ ಚೆಲ್ಲಾಪಿಲ್ಲಿಯಾಗಿರುವುದನ್ನು ಕಂಡು ಸಿಸಿ ಕ್ಯಾಮೆರಾ ನೋಡಿದಾಗ ಕರಡಿ ಒಳನುಗ್ಗಿರುವುದು ಗೊತ್ತಾಗಿದೆ. ಸದ್ಯ ಇದೀಗ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಜನರ ನಿದ್ದೆಗೆಡಿಸಿದ್ದ ಜಾಂಬವಂತ ಕೊನೆಗೂ ಸೆರೆ
ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕರಡಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿ ಬಿದ್ದಿರುವ ಘಟನೆ ಹನೂರು ತಾಲೂಕಿನ ಅಜ್ಜಿಪುರ ಗ್ರಾಮದಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಕಳೆದ ಶನಿವಾರ ಅಜ್ಜಿಪುರ ಗ್ರಾಮದ ಪೆಟ್ಟಿಗೆ ಅಂಗಡಿಗಳ ಮೇಲೆ ಈ ಕರಡಿ ಆಹಾರ ಅರಸಿ ಬಂದು ಮೊಟ್ಟೆ, ಹಣ್ಣು ತಿಂದು, ಧ್ವಂಸ ಮಾಡಿ ಹೋಗಿತ್ತು. ಅದರ, ದಾಂಧಲೆ ವಿಡಿಯೋ ಸಿಸಿಟಿವಿಯಲ್ಲೂ ಸೆರೆಯಾಗಿತ್ತು. ಕಳೆದ ನಾಲ್ಕು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿ ಹಿಡಿಯಲು ಅಜ್ಜಿಪುರ ಗ್ರಾಮದ ಹೊರವಲಯದಲ್ಲಿ ಬೋನನ್ನು ಇಟ್ಟು ಕರಡಿ ಸೆರೆಗೆ ಸತತ ಪ್ರಯತ್ನಪಟ್ಟಿದ್ದು, ಕೊನೆಗೂ ಇಂದು (ಡಿಸೆಂಬರ್ 14) ಆಹಾರ ಅರಸಿ ಬಂದ ಜಾಂಬವಂತ ಬೋನಿನಲ್ಲಿ ಸೆರೆಯಾಗಿತ್ತು.
ನಿಟ್ಟಿಸಿರು ಬಿಟ್ಟ ಗ್ರಾಮಸ್ಥರು
ಕಳೆದ ಶನಿವಾರ ರಾತ್ರಿ ಕರಡಿಯು ಗ್ರಾಮದ ಪೆಟ್ಟಿಗೆ ಅಂಗಡಿಗಳಿಗೆ ನುಗ್ಗಿ ಆಹಾರ ಪದಾರ್ಥಗಳನ್ನು ತಿಂದು ನಾಶಗೊಳಿಸಿ, ಭಯದ ವಾತಾವರಣವನ್ನು ಉಂಟು ಮಾಡಿತ್ತು. ಕರಡಿ ಗ್ರಾಮಕ್ಕೆ ಬಂದು ಪೆಟ್ಟಿಗೆ ಅಂಗಡಿಗಳ ಮೇಲೆ ದಾಳಿ ನಡೆಸುವ ಚಿತ್ರಣ ಸಿಸಿಟಿವಿಯಲ್ಲಿ ಸೆರೆಯಾದ ಚಿತ್ರಣವನ್ನು ನೋಡಿ ರಾತ್ರಿ ವೇಳೆ ಗ್ರಾಮಸ್ಥರು ಓಡಾಡುವುದಕ್ಕೂ ಭಯಪಟ್ಟಿದ್ದರು. ಈಗ ಕರಡಿ ಬೋನಿಗೆ ಬಿದ್ದ ಹಿನ್ನೆಲೆಯಲ್ಲಿ ಭಯದ ವಾತಾವರಣದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಸೆರೆಯಾದ ಕರಡಿಯನ್ನು ಸುರಕ್ಷಿತವಾಗಿ ಮತ್ತೇ ಕಾಡಿಗೆ ಬಿಡಲಾಗಿದೆ.












Click it and Unblock the Notifications