ಬುದ್ಧಿವಂತ ಸರ್ಕಾರಿ ನೌಕರರು ಅರ್ಥ ಮಾಡಿಕೊಳ್ಳುತ್ತಾರೆ, ಸರ್ಕಾರ ನೌಕರರ ಪರ ಇದೆ: ಆರಗ ಜ್ಞಾನೇಂದ್ರ
7ನೇ ವೇತನ ಆಯೋಗ ಜಾರಿ ಸಂಬಂಧ ಮಧ್ಯಂತರ ವರದಿ ಬಂದ ಬಳಿಕ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸರ್ಕಾರಿ ನೌಕರರ ಪರವಾಗಿ ಸರ್ಕಾರ ಇದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಚಾಮರಾಜನಗರ, ಮಾರ್ಚ್, 01: 7ನೇ ವೇತನ ಆಯೋಗ ಜಾರಿ ಸಂಬಂಧ ಮಧ್ಯಂತರ ವರದಿ ಬಂದ ಬಳಿಕ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸರ್ಕಾರಿ ನೌಕರರ ಪರವಾಗಿ ಸರ್ಕಾರ ಇದೆ. ಬುದ್ಧಿವಂತ ಸರ್ಕಾರಿ ನೌಕರರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಚಾಮರಾಜನಗರದಲ್ಲಿ ಹೇಳಿದರು.
ಮಲೆಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ರಥಯಾತ್ರೆ ಚಾಲನೆ ಕಾರ್ಯಕ್ರಮ ನಡೆಯಲಿದ್ದು, ಇಲ್ಲಿಗೆ ಗೃಹ ಸಚಿವರು ಆಗಮಿಸಿದ್ದಾರೆ. ಬೆಟ್ಟಕ್ಕೆ ತೆರಳುವ ಮುನ್ನ ತಾಳಬೆಟ್ಟದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, 7ನೇ ವೇತನ ಆಯೋಗ ಜಾರಿ ಸಂಬಂಧ ಮಧ್ಯಂತರ ವರದಿ ಬಂದ ಬಳಿಕ ಸರ್ಕಾರ ಕ್ರಮ ಕೈಗೊಳ್ಳಲಿದೆ. ನಮ್ಮ ಸರ್ಕಾರದ ಅವಧಿಯಲ್ಲೇ ಸರ್ಕಾರಿ ನೌಕರರಿಗೆ ಎಲ್ಲಾ ಸೌಲಭ್ಯಗಳು ಕೂಡ ಸಿಕ್ಕಿವೆ. ಎರಡು ವರ್ಷಗಳ ಕಾಲ ಕೊರೊನಾ ಸಂಕಷ್ಟ ಇತ್ತು ಎಂಬುದನ್ನು ನೌಕರರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ನಮಗೆ ಯಾವುದೇ ಹೆದರಿಕೆ ಇಲ್ಲ
ಜೆಡಿಎಸ್, ಕಾಂಗ್ರೆಸ್‌ನ ಯಾತ್ರೆಗಳಿಂದ ಬಿಜೆಪಿಗೇನೂ ಭಯವಾಗಿಲ್ಲ. ಅವರಿಗೆ ಭಯ ಆಗಿರಬೇಕಷ್ಟೇ. ಚುನಾವಣೆಯ ಸಮಯದಲ್ಲಿ ಜನರ ಬಳಿ ಮತ ಯಾಚಿಸುತ್ತಿದ್ದೇವೆ. ನಾವು ಯಾವಾಗಲೂ ಜನರ ಬಳಿ ಇದ್ದವರು, ಹಾಗಾಗಿ ನಮ್ಮ ಸರ್ಕಾರದ ಸಾಧನೆಗಳನ್ನು ಹೇಳಲು ಈ ಯಾತ್ರೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಕುಮಾರಸ್ವಾಮಿಯವರಿಗೆ 30 ಸ್ಥಾನ ಬಂದ್ರೆ ಸಾಕು
ಕಾಂಗ್ರೆಸ್ ಕಾರ್ಯಕರ್ತರ ವಿಶ್ವಾಸಗಳಿಸುವ ಉದ್ದೇಶದಿಂದ ಡಿ.ಕೆ. ಶಿವಕುಮಾರ್ 141 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ ಅಷ್ಟೇ. ನಮ್ಮದು ಡಬಲ್ ಎಂಜಿನ್ ಸರ್ಕಾರ, ಹಾಗೆಯೇ ಜನರ ಆಶೋತ್ತರವಾಗಿ ಸ್ಪಂದಿಸುವ ಸರ್ಕಾರವಾಗಿದೆ. ಹಾಗೆಯೇ ಕುಮಾರಸ್ವಾಮಿ ಅವರು ಓಡಾಡುತ್ತಿರುವುದು 120 ಸ್ಥಾನಕ್ಕಲ್ಲ, 30 ಸ್ಥಾನಕ್ಕಾಗಿ. ಅವರಿಗೇ 20- 30 ಸ್ಥಾನ ಬಂದರೆ ಸಾಕು, ಸಿಎಂ ಆಗುತ್ತೇನೆ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆ ಬೆನ್ನಲ್ಲೇ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಸಲು ಮುಂದಾಗಿದೆ. ರಾಜ್ಯದ ದಕ್ಷಿಣ ತುಟ್ಟ ತುದಿ ಮಲೆಮಹದೇಶ್ವರ ಬೆಟ್ಟದಿಂದ ಬುಧವಾರ (ಮಾರ್ಚ್ 01) ಯಾತ್ರೆ ಆರಂಭವಾಗಲಿದೆ.
ಪ್ರಮುಖ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರು, ಸಂಸದರು ಸಾಥ್ ಕೊಡಲಿದ್ದಾರೆ.












Click it and Unblock the Notifications