ಚಾಮರಾಜನಗರ: 2 ಊರುಗಳಲ್ಲಿ ಚಿರತೆ ದಾಳಿಯಿಂದ 2 ಕುರಿ ಸಾವು, 1 ಕರು ಗಂಭೀರ ಗಾಯ
ಚಾಮರಾಜನಗರ, ಜುಲೈ, 09: ಚಿರತೆ ದಾಳಿ ನಡೆಸಿ ಎರಡು ಕುರಿಗಳನ್ನು ಕೊಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಪರಮಾಪುರ ಗ್ರಾಮದ ಹೊರ ವಲಯದಲ್ಲಿ ಮಂಗಳವಾರ (ಜುಲೈ 09) ನಡೆದಿದೆ.
ಪರಮಾಪುರ ಗ್ರಾಮದ ಚಂದ್ರಶೇಖರ್ ಎಂಬುವರಿಗೆ ಸೇರಿದ ಕುರಿಗಳು ಇವಾಗಿವೆ. ರೇವಣ್ಣ ಎಂಬ ರೈತರ ಜಮೀನಿನಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಚಿರತೆ ಎರಡು ಮರಿಗಳನ್ನು ಕೊಂದು ಹಾಕಿದ್ದು, ಒಂದನ್ನು ಎಳೆದೋಯ್ದಿದೆ. ಚಿರತೆ ದಾಳಿ ನಡೆಸಿದ ವೇಳೆ ಮಾಲೀಕರು ಕೂಗಿಕೊಂಡ ಪರಿಣಾಮ ಸ್ಥಳದಿಂದ ಕಾಲ್ಕಿತ್ತಿದೆ. ಇದರಿಂದ ಮಾಲೀಕರಿಗೆ ತೀವ್ರ ನಷ್ಟ ಉಂಟಾಗಿದೆ.

ಸುಮಾರು 20,000 ರೂಪಾಯಿ ಬೆಲೆ ಬಾಳುವ ಎರಡು ಕುರಿಗಳನ್ನು ಚಿರತೆ ದಾಲಿ ನಡೆಸಿ ಕೊಂದು
ಹಾಕಿರುವುದರಿಂದ ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಮಾಲೀಕರು ಕಂಗಲಾಗಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆಯವರು ಕೂಡಲೇ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ಚಿರತೆ ಸೆರೆಗೆ ಆಗ್ರಹ: ಪರಮಾಪುರ, ಪಡಗೂರು ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಿನ ರೀತಿಯಲ್ಲಿದ್ದು, ಆಗಿಂದಾಗ್ಗೆ ಜಾನುವಾರು, ಮರಿ-ಕುರಿಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದೆ. ಇದರಿಂದ ರೈತರು ತಮ್ಮ ಜಮೀನುಗಳಿಗೆ ಹೋಗಲು ಹಿಂದೇಟು ಹಾಕುವಂತಾಗಿದೆ. ಈ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಿ ಬೋನ್ ಇರಿಸಿ ಚಿರತೆ ಸೆರೆ ಹಿಡಿಯುವಂತೆ ಮಧು ಕಬ್ಬಹಳ್ಳಿ ಬಸಪ್ಪ ಆಗ್ರಹಿಸಿದ್ದಾರೆ.
ಕರುವಿನ ಮೇಲೆ ಚಿರತೆ ದಾಳಿ: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ ಕರು ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಓಂಕಾರ ವನ್ಯಜೀವಿ ವಲಯ ವ್ಯಾಪ್ತಿಯ ಮಂಚಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಚಹಳ್ಳಿ ಗ್ರಾಮದ ಸಿದ್ದನಾಯಕ ಎಂಬುವವರು ತಮ್ಮ ಕರುವನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ವೇಳೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ. ಈ ವೇಳೆ ಕರು ಅರಚಿಕೊಂಡಿದ್ದರಿಂದ ಎಚ್ಚೆತ್ತುಕೊಂಡ ಅಕ್ಕಪಕ್ಕದ ಮನೆಯವರು ಕೂಗಿದ್ದಾರೆ. ನಂತರ ಕರುವನ್ನು ಬಿಟ್ಟು ಚಿರತೆ ಪರಾರಿಯಾಗಿದೆ.
ಚಿರತೆ ಪ್ರತ್ಯಕ್ಷ: ಚಿರತೆ ಪ್ರತ್ಯಕ್ಷವಾಗಿ ಜನರು, ವಿದ್ಯಾರ್ಥಿಗಳು ಆತಂಕಕ್ಕೀಡಾದ ಘಟನೆ ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ಸೇತುವೆ ಬಳಿ ನಡೆದಿದೆ.
ಮುಡಿಗುಂಡ ಸೇತುವೆ ಸಮೀಪದ ಶಂಕನಪುರ ತೆರಳುವ ರಸ್ತೆ ರೇಷ್ಮೆ ಇಲಾಖೆ ವಸತಿಗೃಹಗಳ ಬಳಿ ಚಿರತೆ ಕಾಣಿಸಿಕೊಂಡಿದ್ದು ಸ್ಥಳಕ್ಕೆ ಆರ್‌ಎಫ್‌ಒ ಭರತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಕಾಣಿಸಿಕೊಂಡ ಪ್ರದೇಶಕ್ಕೆ ರೇಷ್ಮೆ ಇಲಾಖೆ ವಸತಿಗೃಹದ ನಿವಾಸಿಗಳು ಹಾಗೂ ಅಕ್ಕಪಕ್ಕದಲ್ಲಿ ಇರುವ ಐಟಿಐ ಕಾಲೇಜು, ಆದರ್ಶ ವಿದ್ಯಾಲಯ ವಿದ್ಯಾರ್ಥಿಗಳು ಸಂಜೆ ವೇಳೆ ಯಾರು ಹೊರಬರದಂತೆ ಎಚ್ಚರಿಕೆ ನೀಡಿದ್ದಾರೆ.
ರೇಷ್ಮೆ ವಸತಿ ಗೃಹದ ಶಂಕನಪುರಕ್ಕೆ ತೆರಳುವ ರಸ್ತೆಯ ತಿರುವಿನಲ್ಲಿ ಚಿರತೆ ಕುಳಿತಿರುವುದನ್ನು ಮಾರುಕಟ್ಟೆಗೆ ರೇಷ್ಮೆ ತೆಗೆದುಕೊಂಡು ಹೋಗುವ ರೈತರ ನೋಡಿ ಆ ರಸ್ತೆಯಲ್ಲಿ ಬರುತ್ತಿದ್ದ ಮುಡಿಗುಂಡ ನಿವಾಸಿಗಳಾದ ಸಂಜಯ್ ಕುಮಾರ್ ಮತ್ತು ಚಂದ್ರು ಎಂಬುವರಿಗೆ ಇಲ್ಲಿ ಚಿರತೆ ಇದೆ ಎಂದು ಹೇಳಿ ಅವರು ವಾಪಸ್ ಹೋದರು.
ಈ ವೇಳೆ ಸಂಜಯ್ ಮತ್ತು ಚಂದ್ರು ಹೋಗಿ ನೋಡಿದಾಗ ಚಿರತೆ ರಸ್ತೆ ದಾಟಿ ಕಬ್ಬಿನ ಗದ್ದೆಗೆ ತೆರಳಿರುವುದನ್ನು ಕಂಡಿದ್ದಾರೆ. ಇನ್ನು ಈ ಪ್ರದೇಶದಲ್ಲಿ ಐಟಿಐ ಕಾಲೇಜು, ಆದರ್ಶ ಶಾಲೆ ಇದ್ದು, ವಿದ್ಯಾರ್ಥಿಗಳಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಚಿರತೆ ಸೆರೆಹಿಡಿಯಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.












Click it and Unblock the Notifications