ಮಲೆ ಮಹದೇಶ್ವರನಿಗೆ ಹಣದ ಮಳೆ: 1 ತಿಂಗಳಲ್ಲಿ ಕೋಟಿ ಕೋಟಿ ಆದಾಯ - ವಿದೇಶಿ ಕರೆನ್ಸಿಗಳು ಪತ್ತೆ
ಚಾಮರಾಜನಗರ ಫೆಬ್ರವರಿ 3: ರಾಜ್ಯದ ಪ್ರಸಿದ್ಧ ಯಾತ್ರ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಭರ್ಜರಿ ಹಣ ಸಂಗ್ರಹವಾಗಿರುವುದು ತಿಳಿದುಬಂದಿದೆ. ಕಳೆದ 30 ದಿನಗಳಿಗೆ ಮಲೆ ಮಹದೇಶ್ವರನಿಗೆ ಹಣದ ಮಳೆಯೇ ಸುರಿದಿದೆ. 1 ತಿಂಗಳಲ್ಲಿ ಕೋಟಿ ಕೋಟಿ ಹಣ ಸಂಗ್ರಹವಾಗಿದ್ದು ಈ ವೇಳೆ ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ.
ಕಳೆದ 30 ದಿನಗಳಲ್ಲಿ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಬಂದ ಭಕ್ತರು ಹುಂಡಿಯಲ್ಲಿ ಹಾಕಿದ ಹಣವನ್ನು ಶುಕ್ರವಾರ ಎಣಿಸಲಾಯಿತು. ಈ ವೇಳೆ ಬರೋಬ್ಬರಿ 2.16 ಕೋಟಿ ರೂಪಾಯಿ ಹಣ ಮಲೆ ಮಹದೇಶ್ವರ ಹುಂಡಿಯಲ್ಲಿ ಸಂಗ್ರಹವಾಗಿದೆ.

ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿ ರಾತ್ರಿ 7ರವರೆಗೂ ಹುಂಡಿ ಎಣಿಕೆ ನಡೆಸಲಾಯಿತು.
ಉಚಿತ ಪ್ರಯಾಣ ಹಾಗೂ ಹುಣ್ಣಿಮೆ, ಅಮಾವಾಸ್ಯೆ, ಸಂಕ್ರಾತಿ ಹಬ್ಬದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ ಕೋಟ್ಯಂತರ ಹಣ, ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಹುಂಡಿಗೆ ಭಕ್ತರು ಹಾಕಿದ್ದಾರೆ.

30 ದಿನಗಳ ಅವಧಿಯಲ್ಲಿ ನಡೆದ ಹುಂಡಿಗಳ ಎಣಿಕೆಯಲ್ಲಿ 2,16,34, 614 ರೂ. ಸಂಗ್ರಹವಾಗಿದೆ. ಇದರೊಂದಿಗೆ 78ಗ್ರಾಂ ಚಿನ್ನ ಮತ್ತು 2.35 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಅಲ್ಲದೆ ಈ ಬಾರಿ ವಿದೇಶಿ ಕರೆಬ್ಸಿಗಳು ಕೂಡ ಹುಂಡಿಯಲ್ಲಿ ಪತ್ತೆಯಾಗಿದೆ. 4 ಯುಎಸ್ ಡಾಲರ್, ಅಫ್ಘಾನಿಸ್ತಾನದ 10 ಅಫ್ಗಾನಿ , ಮಲೆಷ್ಯಾದ 3 ರಿಂಗಿಟ್, ನೇಪಾಳದ ಮೂರು ನೋಟುಗಳು ಪತ್ತೆಯಾಗಿದೆ. ಜೊತೆಗೆ ಚಲಾವಣೆಯಲ್ಲಿಲ್ಲದ 2000 ಮುಖಬೆಲೆಯ 12 ನೋಟುಗಳು ಹುಂಡಿಯಲ್ಲಿ ಸಿಕ್ಕಿವೆ.

ಮಲೆ ಮಹದೇಶ್ವರ
ಮೈಸೂರಿನಿಂದ 135 ಕಿ.ಮೀ ದೂರದಲ್ಲಿ, ಹೊಗೆನಕಲ್ ನಿಂದ 89 ಕಿ.ಮೀ, ಕೊಳ್ಳೆಗಾಲದಿಂದ 72 ಕಿ.ಮೀ ಮತ್ತು ಬೆಂಗಳೂರಿನಿಂದ 209 ಕಿ.ಮೀ ದೂರದಲ್ಲಿರುವ ಮಲೆ ಮಹದೇಶ್ವರ ಬೆಟ್ಟ, ಎಂ.ಎಂ. ಹಿಲ್ಸ್ ಎಂದೂ ಕರೆಯುತ್ತಾರೆ. ಇದು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಪೂರ್ವ ಭಾಗದಲ್ಲಿದೆ. ಇದು 3000 ಅಡಿ ಎತ್ತರದಲ್ಲಿದೆ. ಪ್ರಸಿದ್ಧ ಮಲೈ ಮಹದೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶವು ಸಂಪೂರ್ಣವಾಗಿ ಬೆಟ್ಟ ಪ್ರದೇಶವಾಗಿದೆ ಮತ್ತು ದೇವಾಲಯವು 7 ಬೆಟ್ಟಗಳ ಮಧ್ಯದಲ್ಲಿದೆ.












Click it and Unblock the Notifications