ಚಾಮರಾಜನಗರ: ರಸ್ತೆ ಅಪಘಾತದಲ್ಲಿ 140 ಮಂದಿ ಬಲಿ.!-ಪ್ರಮುಖ ಕಾರಣ ಏನು ಗೊತ್ತಾ?
ಚಾಮರಾಜನಗರ, ಆಗಸ್ಟ್, 22: ಚಾಮರಾಜನಗರದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಹೆಲ್ಮೆಟ್ ಹಾಕದೇ ಬೈಕ್ ಸವಾರರು ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಹಾಗಾದರೆ 2024ರ ಜನವರಿ ತಿಂಗಳಿನಿಂದ ಇಲ್ಲಿವರೆಗೂ ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡಿ ಮೃತಪಟ್ಟವರ ಸಂಖ್ಯೆ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಜನವರಿಯಿಂದ ಜುಲೈ ತನಕ 134 ಮಂದಿ ಅಸುನೀಗಿದ್ದು, ಆಗಸ್ಟ್‌ವರೆಗೆ ಇದರ ಸಂಖ್ಯೆ 140 ದಾಟಿದೆ. ಜುಲೈ ತಿಂಗಳಲ್ಲಿ 22 ಮಂದಿ ರಸ್ತೆ ಅಪಘಾತದಲ್ಲಿ ಅಸುನೀಗಿದ್ದು, ಇವರಲ್ಲಿ 15 ಮಂದಿ ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದೇ ಇದ್ದದ್ದು ಕಂಡುಬಂದಿದೆ.

ರಾಷ್ಟ್ರೀಯ ಹೆದ್ದಾರಿ ಮತ್ತು ಬೈಪಾಸ್ ರಸ್ತೆ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿರುವುದರಿಂದ ಅತಿವೇಗದ ಬೈಕ್ ಚಾಲನೆ ಹೆಚ್ಚಾಗುತ್ತಿದೆ. ಜೊತೆಗೆ, ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿ ನಿರ್ಲಕ್ಷ್ಯ ತೋರುತ್ತಿರುವುದರಿಂದ ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ.
ರಸ್ತೆ ಅಪಘಾತದಲ್ಲಿ ನೂರಾರು ಮಂದಿ ಜೀವ ಕಳೆದುಕೊಂಡಿರುವ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಪ್ರತಿಕ್ರಿಯಿಸಿದ್ದು, ಅತಿವೇಗದ ಚಾಲನೆ ಮತ್ತು ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುವ ಮೂಲಕ ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ.
ಈ ಬಗ್ಗೆ, ಈಗಾಗಲೇ ಎಲ್ಲಾ ಠಾಣೆಗಳಲ್ಲೂ ಸಂಚಾರಿ ನಿಯಮ ಜಾಗೃತಿ ಮೂಡಿಸಲಾಗುತ್ತಿದ್ದು, ದಂಡ ಕಟ್ಟಿಸುವ ಬದಲು ಹೆಲ್ಮೆಟ್ ಖರೀದಿಸಿ ತಂದು ಬೈಕ್ ತೆಗೆದುಕೊಂಡು ಹೋಗುವಂತೆ ಅರಿವು ಮೂಡಿಸಲಾಗುತ್ತಿದೆ. ಅತೀ ಹೆಚ್ಚು ಅಪಘಾತದಲ್ಲಿ ಹೆಲ್ಮೆಟ್ ಧರಿಸದೇ ಪ್ರಾಣ ಕಳೆದುಕೊಂಡವರು ಬಹಳಷ್ಟು ಮಂದಿ ಇದ್ದು, ಅವರು ಹೆಲ್ಮೆಟ್ ಧರಿಸಿದ್ದರೇ ಪಾರಾಗುವ ಸಾಧ್ಯತೆ ಹೆಚ್ಚಿರುತ್ತಿತ್ತು ಎಂದರು.
ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗದ ಚಾಲನೆ ಕಂಡುಬರುತ್ತಿದ್ದ ಹಿನ್ನೆಲೆ ಸ್ಪೀಡ್ ಲೇಸರ್ ಗನ್ ಮೂಲಕ ಅತಿವೇಗ ಚಾಲನೆ ಮಾಡಿದವರಿಗೆ ದಂಡ ಹಾಕಲಾಗುತ್ತಿದೆ. ಅಲ್ಲದೆ, ಬೈಕ್ ಸವಾರರು ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಧರಿಸಬೇಕು ಎಂದು ತಿಳಿಸಿದರು.
ಲಾರಿಗೆ ಬೈಕ್ ಡಿಕ್ಕಿಯಾಗಿ ಓರ್ವ ಸಾವು: ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್‌ನಲ್ಲಿದ್ದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ನಾಗಸಮುದ್ರ ಗೇಟ್ ಬಳಿ ಇಂದು (ಆಗಸ್ಟ್ 18) ಬೆಳಗಿನ ಜಾವ ಸುಮಾರು 3:30ರ ವೇಳೆಯಲ್ಲಿ ನಡೆದಿದೆ.
ಗಾಯಾಳುವನ್ನು ಸ್ಥಳೀಯ ರಾಂಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಮೃತನ ಗುರುತು ಪತ್ತೆಯಾಗಿಲ್ಲ. ಬೈಕ್‌ನಲ್ಲಿ ಇಬ್ಬರು ವ್ಯಕ್ತಿಗಳಿದ್ದರು. ರಾಯಚೂರಿನಿಂದ ಬೆಂಗಳೂರು ಕಡೆಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಇಬ್ಬರು ವ್ಯಕ್ತಿಗಳು ನಾಗಸಮುದ್ರ ಗೇಟ್ ಸಮೀಪ ಮುಂದೆ ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಚಾಲನೆ ಮಾಡುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.












Click it and Unblock the Notifications