ಚಾಮರಾಜನಗರ: ಸಿಹಿ ಹಣ್ಣೆಂದು ವಿಷಪೂರಿತ ಕಾಯಿ ಸೇವನೆ; 12 ಮಂದಿ ಅಸ್ವಸ್ಥ
ಚಾಮರಾಜನಗರ, ನವೆಂಬರ್, 27: ಕಲುಷಿತ ನೀರು ಸೇವೆನೆ ಮಾಡಿ ಜನರು ಅಸ್ವಸ್ಥಗೊಂಡ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿತ್ತು. ಇದೇ ವಿಚಾರ ರಾಜ್ಯಾದ್ಯಂತ ಸದ್ದು ಮಾಡಿತ್ತು. ಇದೀಗ ವಿಷಪೂರಿತ ಕಾಯಿ ತಿಂದು ವಾಂತಿ ಭೇದಿ ಕಾಣಿಸಿಕೊಂಡು ಮಕ್ಕಳು ಸೇರಿದಂತೆ 12 ಮಂದಿ ಕೂಲಿ ಕಾರ್ಮಿಕರು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬುಧವಾರ (ನವೆಂಬರ್ 27) ಜರುಗಿದೆ.
ಕೊಪ್ಪಳ ಜಿಲ್ಲೆಯ ಕುಣಿಕೆರಿ ತಾಂಡ ಗ್ರಾಮದ ಯುವರಾಜು(4), ವೆಂಕಟೇಶ್ (8), ಪ್ರೀತಮ್ (10), ಪವನ್ (10), ಅನುಷಾ (10), ಅಂಕಿತಾ (10), ಅರ್ಜುನ(10), ಬದ್ರಿಬಾಯಿ (32), ಸೀತಾಬಾಯಿ (48), ಲಕ್ಷ್ಮೀ (35), ಸರಸ್ವತಿ (42), ಲಲಿತಾ(45) ಇವರುಗಳು ಕಾಯಿ ತಿಂದು ಆಸ್ಪತ್ರೆಗೆ ದಾಖಲಾಗಿರುವ ಕೂಲಿ ಕಾರ್ಮಿಕರಾಗಿದ್ದಾರೆ.

ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಗ್ರಾಮದ ಬಳಿ ಕಬ್ಬು ಕಟಾವು ಮಾಡಲು ಒಂದು ತಿಂಗಳ ಹಿಂದೆ ಆಗಮಿಸಿದ್ದ 3 ಕುಟುಂಬ ಎಂದಿನಂತೆ ಬುಧವಾರ ಕಬ್ಬು ಕಟಾವು ಮಾಡಲು ತೆರಳಿದೆ. ಈ ವೇಳೆ ಪಕ್ಕದಲ್ಲಿ ಆಟ ಆಡುತ್ತಿದ್ದಾಗ ಅನುಷಾ ಎಂಬ ಬಾಲಕಿ ಮರಳ ಕಾಯಿ ತಿಂದು ಸಿಹಿಯಾಗಿದೆ ಎಂದಾಗ ಜೊತೆಯಲ್ಲಿದ್ದರು ಕಾಯಿಯ ಒಳಗಡೆಯ ಬೀಜವನ್ನು ತಿಂದಿದ್ದಾರೆ.
ಮಕ್ಕಳು ಸಿಹಿ ಕಾಯಿ ಅನ್ನುತ್ತಿದ್ದಂತೆಯೇ ಮಕ್ಕಳ ಪೋಷಕರು ಸಹ ಕಾಯಿ ಮತ್ತು ಬೀಜ ಸೇವಿಸಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಮಕ್ಕಳು ಸೇರಿ 12 ಮಂದಿಗೂ ವಾಂತಿ-ಭೇದಿ ಕಾಣಿಸಿಕೊಂಡಿದೆ. ಬಳಿಕ ಜೊತೆಯಲ್ಲಿದ್ದ ಇನ್ನುಳಿದ ಕೂಲಿ ಕಾರ್ಮಿಕರನ್ನು ಆಟೋದಲ್ಲಿ ಕೊಳ್ಳೇಗಾಲ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ ವೈದ್ಯರುಗಳು ಡಾ.ಶೃತಿ, ಡಾ.ಸೌಮ್ಯ, ಡಾ.ವೈಭವ್ ಇನ್ನಿತರರು ಸಕಾಲದಲ್ಲಿ ಚಿಕಿತ್ಸೆ ನೀಡಿದ್ದು, ಇವರಲ್ಲಿ ಯುವರಾಜ್ ಎಂಬ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರಕ್ಕೆ ಕಳುಹಿಸಲಾಗಿದೆ. ಆತನ ಸ್ಥಿತಿಯು ಚಿಂತಾಜನಕವಾಗಿದ್ದು, ಸಂಜೆಯಷ್ಟರಲ್ಲಿ ಚೇತರಿಕೆ ಕಂಡು ಬಂದಿದೆ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸರು ಸಹ ಆಸ್ಪತ್ರೆಗೆ ಆಗಮಿಸಿ ಸ್ಪಂದಿಸಿ ಸಂತ್ರಸ್ತರ ಬಳಿ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಆನೆ ಮರಿ ಸಾವು: ಆಹಾರ ಅರಸಿ ಬಂದ ಆನೆಮರಿಯೊಂದು ವಿದ್ಯುತ್ ಶಾಕ್‌ಗೆ ಬಲಿಯಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ಕಾಡಂಚಿನಲ್ಲಿ ನಡೆದಿದೆ.
ಷರೀಪ್ ಖಾನ್ ಎಂಬುವವರ ಜಮೀನಿನಲ್ಲಿ ಅಕ್ರಮವಾಗಿ ಹರಿಸಿದ್ದ ವಿದ್ಯುತ್ ನಿಂದ ಈ ಅವಘಡ ನಡೆದಿದ್ದು, ಮೃತ ಆನೆ ಮರಿಯು ಗಂಡಾಗಿದ್ದು 1ರಿಂದ 2 ವರ್ಷ ಇರಬಹುದು ಎಂದು ಅಂದಾಜು ಮಾಡಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ವ್ಯಾಪ್ತಿಯ ಮಂಗಲ ಗ್ರಾಮದ ಹುಲಿಯಮ್ಮನ ಗುಡಿಗೆ ಹೋಗುವ ದಾರಿಯಲ್ಲಿನ ಷರೀಪ್ ಎಂಬುವವರು ತಮ್ಮ ಜಮೀನಿನಲ್ಲಿ ರಾಗಿ ಬೆಳೆದಿದ್ದು, ಬೆಳೆ ರಕ್ಷಣೆಗಾಗಿ ಅಕ್ರಮ ವಿದ್ಯುತ್ ನೀಡಿದ್ದರಿಂದ ಆಹಾರ ಅರಸಿ ಹಿಂಡಿನೊಂದಿಗೆ ಬಂದಿದ್ದ ಆನೆ ಮರಿ ವಿದ್ಯುತ್ ಪ್ರವಹಿಸಿ ಅಸುನೀಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications