Chamarajanagar Elections: ಮತ್ತೆ ರಣಕಹಳೆ ಮೊಳಗಿಸಲು ಸಜ್ಜಾದ ಸಿ.ಪುಟ್ಟರಂಗಶೆಟ್ಟಿ, ಬಿಜೆಪಿಗೆ ನಡುಕ
ಸೋತವರು ಚಾಮರಾಜನಗರ, ಮಾರ್ಚ್, 25: ಚಾಮರಾಜನಗರ ಎಂದರೆ ಸಾಕು ಮೊದಲಿಗೆ ನೆನಪಾಗುವುದೇ ಅಲ್ಲಿನ ಪ್ರಕೃತಿ. ಏಕೆಂದರೆ ಈ ಜಿಲ್ಲೆ ಶೇಕಡಾ 52ರಷ್ಟು ಭಾಗ ಅರಣ್ಯ ಪ್ರದೇಶವನ್ನು ಹೊಂದಿದೆ. ಜಿಲ್ಲೆಯ ಪಾಲಿಗೆ ಅಚ್ಚಹಸಿರಿನಿಂದ ಕೂಡಿರುವ ಪರಿಸರವೇ ಸಂಪತ್ತು ಎಂದರೆ ತಪ್ಪಾಗಲಾರದು. ಇಲ್ಲಿ ಈಗಾಗಲೇ ಎರಡು ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಿದ್ದು, ಮತ್ತೊಂದು ಹುಲಿ ಸಂರಕ್ಷಿತ ಪ್ರದೇಶ ಸೇರುವ ಮುನ್ಸೂಚನೆಗಳು ಕಾಣುತ್ತಿವೆ. ಹಾಗಾದರೆ ಇಲ್ಲಿ ರಾಜಕೀಯ ಚಿತ್ರಣ ಹೇಗಿದೆ ಎಂದು ತಿಳಿಯೋಣ ಬನ್ನಿ.
ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಚಾಮರಾಜನಗರ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2018, ಕಳೆದ ಚುನಾವಣೆಯಲ್ಲಿ ಇಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಜಯ ಪಾತಾಕೆ ಹಾರಿಸಿದ್ದರು. ಚಾಮರಾಜನಗರ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಸಿ.ಪುಟ್ಟರಂಗ ಶೆಟ್ಟಿ ರಾಜಕೀಯದ ಹಾದಿ
ಇಲ್ಲಿ 2018ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಸಿ.ಪುಟ್ಟರಂಗ ಶೆಟ್ಟಿ ಗೆಲುವು ಸಾಧಿಸಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ 4913 ಮತಗಳ ಅಂತರದಿಂದ ಸೋಲನುಭವಿಸಿದ್ದರು. ಇದೀಗ ಮತ್ತೆ ಚಾಮರಾಜನಗರದಿಂದ ಸಿ.ಪುಟ್ಟರಂಗಶೆಟ್ಟಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಅವರು ಮತ್ತೆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಹೀಗೆ ಗಡಿ ಜಿಲ್ಲೆ ಚಾಮರಾಜನಗರ ಎಂದರೆ ಕಾಂಗ್ರೆಸ್ ಭದ್ರಕೋಟೆ ಎಂದೇ ಹೇಳಲಾಗುತ್ತಿದೆ.
ದೇಶದ ಗಮನ ಸೆಳೆದ ಕ್ಷೇತ್ರದ ರಾಜಕೀಯ
ಚಾಮರಾಜನಗರ ಜಿಲ್ಲೆ ರಾಜಕೀಯವಾಗಿ ದೇಶದ ಗಮನ ಸೆಳೆದಿರುವ ಉದಾಹರಣೆ ಇದೆ. ಒಂದು ಮತದ ಮಹತ್ವವನ್ನು ದೇಶಕ್ಕೆ ತಿಳಿಸಿಕೊಟ್ಟಿದ್ದು ಚಾಮರಾಜನಗರ ಜಿಲ್ಲೆಯಾಗಿದೆ. 2004ರ ಸಂತೆಮರಹಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆರ್. ಧ್ರುವನಾರಾಯಣ 40,752 ಮತಗಳನ್ನು ಪಡೆದಿದ್ದರು. ಇನ್ನು ಅವರ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್ ಪಕ್ಷದ ಎ.ಆರ್. ಕೃಷ್ಣಮೂರ್ತಿ 40,751 ಮತಗಳನ್ನು ಪಡೆದು ಕೇವಲ ಒಂದೇ ಮತದ ಅಂತರದಿಂದ ಸೋಲನುಭವಿಸಿದ್ದರು.
ಜಿಲ್ಲೆ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಚಾಮರಾಜನಗರ, ಗುಂಡ್ಲುಪೇಟೆ, ಹನೂರು ಸಾಮಾನ್ಯ ಕ್ಷೇತ್ರಗಳಾದರೆ, ಕೊಳ್ಳೇಗಾಲ ಎಸ್‌ಸಿ ಮೀಸಲು ಕ್ಷೇತ್ರ ಆಗಿದೆ. 2004ರವರೆಗೂ ಸಂತೆಮರಹಳ್ಳಿ ಕ್ಷೇತ್ರ ಅಸ್ತಿತ್ವದಲ್ಲಿದ್ದು, ಐದು ವಿಧಾನಸಭಾ ಕ್ಷೇತ್ರಗಳಿ ಇದ್ದವು. ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಸಂತೆಮರಹಳ್ಳಿ ಕ್ಷೇತ್ರ ಬಿಟ್ಟುಹೋಯಿತು.

ಕ್ಷೇತ್ರದಲ್ಲಿ ಗಮನ ಸೆಳೆದ ರಾಜಕಾರಣಿಗಳು
ರಾಜ್ಯದ ಮೊದಲ ಮಹಿಳಾ ಸ್ಪೀಕರ್ ಹಾಗೂ ಪ್ರಥಮ ವಿಪಕ್ಷ ನಾಯಕಿ ಕೆ.ಎಸ್. ನಾಗರತ್ನಮ್ಮ, ಕೇರಳ ಹಾಗೂ ಹಿಮಾಚಲ ಪ್ರದೇಶ ರಾಜ್ಯಪಾಲರಾಗಿದ್ದ ಬಿ.ರಾಚಯ್ಯ, ಅಬ್ದುಲ್ ನಜೀರ್‌ಸಾಬ್, ವಿ. ಶ್ರೀನಿವಾಸ ಪ್ರಸಾದ್, ವಾಟಾಳ್ ನಾಗರಾಜ್, ಎಚ್.ಎಸ್.ಮಹದೇವ ಪ್ರಸಾದ್, ಅಭಿವೃದ್ಧಿ ಕೆಲಸಗಳಲ್ಲಿ ರಾಜ್ಯದ ನಂ.1 ಸಂಸದ ಎಂಬ ಪ್ರಖಾತಿ ಪಡೆದಿದ್ದ ಆರ್.ಧ್ರುವನಾರಾಯಣ ಜಿಲ್ಲೆಯ ರಾಜಕಾರಣದಲ್ಲಿ ಗಮನ ಸೆಳೆದಿದ್ದಾರೆ. ಇದೀಗ ಧ್ರುವನಾರಾಯಣ ಅಕಾಲಿಕ ನಿಧನರಾಗಿದ್ದು, ಅವರ ಮಗ ದರ್ಶನ್‌ಗೆ ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದೆ.
ಚಾಮರಾಜನಗರ ಜಿಲ್ಲೆಯ ಚುನಾವಣೆಗಳ ಫಲಿತಾಂಶವನ್ನ ಗಮನಸಿದಾಗ ಇದು ಕಾಂಗ್ರೆಸ್ ಭದ್ರಕೋಟೆ ಎಂಬುದು ಗೊತ್ತಾಗುತ್ತದೆ. ಜಿಲ್ಲೆಯಲ್ಲಿ ಈವರೆಗೂ ತಲಾ ಒಂದು ಅವಧಿಗೆ ಬಿಜೆಪಿಯಿಂದ ಇಬ್ಬರು ಶಾಸಕರು ಗೆಲುವು ಸಾಧಿಸಿದ್ದಾರೆ. ಬಿಎಸ್‌ಪಿಯಿಂದ ಗೆದ್ದ ಶಾಸಕ ಎನ್.ಮಹೇಶ್ ಇದೀಗ ಬಿಜೆಪಿ ಸೇರಿದ್ದಾರೆ.
ಪುಟ್ಟರಂಗಶೆಟ್ಟಿಯದ್ದೇ ಹವಾ!
ಜಿಲ್ಲಾ ಕೇಂದ್ರವನ್ನು ಒಳಗೊಂಡಿರುವ ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ, ಕಸಬಾ, ಹರದನಹಳ್ಳಿ, ಚಂದಕ ವಾಡಿ ಹೋಬಳಿ, ಹರವೆ ಹೋಬಳಿಯ ಕೆಲವು ಗ್ರಾಮಗಳು ಸೇರುತ್ತವೆ. ಒಟ್ಟು 15 ಚುನಾವಣೆಗಳನ್ನು ಎದುರಿಸಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 8 ಬಾರಿ ಜಯ ಕಂಡಿದ್ದಾರೆ. ಇನ್ನು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮೂರು ಬಾರಿ ಆರಿಸಿ ಬಂದಿದ್ದಾರೆ. 1952ರಿಂದ 2004ರ ವರೆಗೂ ಕ್ಷೇತ್ರದಲ್ಲಿ ವೀರಶೈವ ಅಭ್ಯರ್ಥಿಗಳೇ ಜಯ ಸಾಧಿಸಿದ್ದು, 2008ರಿಂದ ಈವರೆಗೂ ಹಿಂದುಳಿದ ಉಪ್ಪಾರ ಸಮಾಜದ ಸಿ.ಪುಟ್ಟರಂಗ ಶೆಟ್ಟಿಯವರೇ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ.
Chamarajanagar Karnataka Elections
| ವರ್ಷ | ವಿಜೇತರು | ಮತಗಳು | ಸೋತವರು | ಮತಗಳು |
| 2004 | ವಾಟಾಳ್ ನಾಗರಾಜ್ (ಕೆಸಿವಿಪಿ) | 37072 | ಡಾ.ಮಂಜುಳಾ ಬಿಪಿ (ಕಾಂಗ್ರೆಸ್) | 26,589 |
| 2008 | ಸಿ.ಪುಟ್ಟರಂಗಶೆಟ್ಟಿ (ಕಾಂಗ್ರೆಸ್) | 42017 | ಎಂ ಮಹದೇವ್ (ಬಿಜೆಪಿ) | 39405 |
| 2013 | ಸಿ.ಪುಟ್ಟರಂಗಶೆಟ್ಟಿ (ಕಾಂಗ್ರೆಸ್) | 54440 | ಕೆ. ಆರ್ ಮಲ್ಲಿಕಾರ್ಜುನ (ಕೆಜೆಪಿ ) | 43244 |
| 2018 | ಸಿ.ಪುಟ್ಟರಂಗಶೆಟ್ಟಿ (ಕಾಂಗ್ರೆಸ್) | 75963 | ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ (ಬಿಜೆಪಿ) | 71050 |
ಸೋಲು, ಗೆಲುವಿನ ಲೆಕ್ಕಾಚಾರ
1952ರ ಮೊದಲ ಚುನಾವಣೆಯಲ್ಲಿ ಕಿಸಾನ್ ಮಜ್ದೂರ್ ಪ್ರಜಾಪಾರ್ಟಿಯ ಯು.ಎಂ. ಮಾದಪ್ಪ ಪಕ್ಷೇತರ ಎಂ.ಸಿ. ಬಸಪ್ಪ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು. 1957ರಲ್ಲಿ ದ್ವಿಸದಸ್ಯ ಕ್ಷೇತ್ರವಾದ ಇಲ್ಲಿ ಕಾಂಗ್ರೆಸ್‌ನಿಂದ ಬಿ. ರಾಚಯ್ಯ, ಪ್ರಜಾ ಸೋಶಲಿಸ್ಟ್ ಪಾರ್ಟಿಯಿಂದ ಯು.ಎಂ. ಮಾದಪ್ಪ ಪುನರ್ ಆಯ್ಕೆಯಾದರು. 1962ರಲ್ಲಿ ಸಂತೆಮರಹಳ್ಳಿ ಕ್ಷೇತ್ರ ಮೀಸಲು ಕ್ಷೇತ್ರ ರಚನೆಯಾಗಿದ್ದು, ಈ ಹಿನ್ನೆಲೆ ಚಾಮರಾಜನಗರ ಕ್ಷೇತ್ರ ಮತ್ತೆ ಏಕಸದಸ್ಯ ಕ್ಷೇತ್ರವಾಗಿ ಮಾರ್ಪಟಿತು.
ಇನ್ನು 1962ರಲ್ಲಿ ಕಾಂಗ್ರೆಸ್‌ನ ಎಂ.ಸಿ.ಬಸಪ್ಪ, 1967ರಲ್ಲಿ ಪಕ್ಷೇತರರಾಗಿ ಎಸ್.ಪುಟ್ಟಸ್ವಾಮಿ, 1972ರಲ್ಲಿ ಕಾಂಗ್ರೆಸ್‌ನಿಂದ ಅದೇ ಎಸ್.ಪುಟ್ಟಸ್ವಾಮಿ, 1978ರಲ್ಲಿ ಜನತಾ ಪಕ್ಷದಿಂದ ಎಂ.ಸಿ.ಬಸಪ್ಪ, 1983 ಹಾಗೂ 1985ರಲ್ಲಿ ಕಾಂಗ್ರೆಸ್‌ನಿಂದ ಎಸ್ .ಪುಟ್ಟಸ್ವಾಮಿ ವಿಜಯ ಪತಾಕೆಯನ್ನು ಹಾರಿಸಿದ್ದರು. 1989 ಹಾಗೂ 1994ರಲ್ಲಿ ಪಕ್ಷೇತರರಾಗಿ ವಾಟಾಳ್ ನಾಗರಾಜ್ ಗೆಲುವು ಸಾಧಿಸಿದ್ದರು.
ಮತ್ತೊಂದೆಡೆ 1999ರಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಸಿ. ಗುರು ಸ್ವಾಮಿಯವರ ಮೂಲಕ ಮತ್ತೆ ಖಾತೆಯನ್ನು ತೆರೆದಿತ್ತು.
2004ರಲ್ಲಿ ಮತ್ತೆ ವಾಟಾಳ್ ನಾಗರಾಜ್ ವಾಟಾಳ್ ಪಕ್ಷದಿಂದ ಆರಿಸಿಬಂದರು. ಈವರೆಗೂ ವೀರಶೈವ ಅಭ್ಯರ್ಥಿಗಳೇ ಗೆದ್ದುಬಂದಿದ್ದ ಈ ಕ್ಷೇತ್ರದಲ್ಲಿ 2008ರಲ್ಲಿ ಕಾಂಗ್ರೆಸ್‌ನಿಂದ ಹಿಂದುಳಿದ ಉಪ್ಪಾರ ಸಮಾಜದ ಸಿ.ಪುಟ್ಟರಂಗಶೆಟ್ಟಿಯವರು ಬಿಜೆಪಿ ಅಭ್ಯರ್ಥಿ ಎಂ. ಮಹದೇವು ಅವರನ್ನು ಮಣಿಸುವ ಮೂಲಕ ಜನಭೇರಿ ಭಾರಿಸಿದ್ದರು. ನಂತರ ಮತ್ತೆ 2013 ಮತ್ತು 2018ರಲ್ಲೂ ಕೂಡ ಪುನತ್ ಆಯ್ಕೆಯಾಗಿ ಹ್ಯಾಟ್ರಿಕ್ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಈ ಬಾರಿಯೂ ಕೂಡ ಕ್ಷೇತ್ರದಿಂದ ಸಿ.ಪುಟ್ಟರಂಗಶೆಟ್ಟಿಗೆ ಕಾಂಗ್ರೆಸ್ ನೀಡಿದ್ದು, ಅವರು ಮತ್ತೆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಹಾಗೆಯೇ ಇನ್ನುಳಿದ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಯಾವಾಗ ಬಿಡುತ್ತಾವೆಯೋ ಎಂದು ಕಾದುನೋಡಬೇಕಿದೆ. ಈ ಮೂಲಕ ಸಿ.ಪುಟ್ಟರಂಗ ಶೆಟ್ಟಿ ವಿರುದ್ಧ ಯಾರು ಕಣಕ್ಕಿಳಿಯಲಿದ್ದಾರೆ ಎನ್ನುವುದನ್ನು ಕೂಡ ಕಾದುನೋಡಬೇಕಿದೆ. ಒಟ್ಟಿನಲ್ಲಿ ಮತ್ತೆ ಕ್ಷೇತ್ರದಲ್ಲಿ ಗೆಲುವು ಪಡೆಯಲೇಬೇಕು ಎಂದು ಪುಟ್ಟರಂಗಶೆಟ್ಟಿ ಪಣತೊಟ್ಟು ನಿಂತಿದ್ದಾರೆ.












Click it and Unblock the Notifications