ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್‌ರ ಟೆಸ್ಲಾ ಕಂಪನಿ
ನವದೆಹಲಿ, ಜನವರಿ 13: ಇತ್ತೀಚೆಗಷ್ಟೇ ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಟೆಸ್ಲಾ ಇಂಕ್ ಮತ್ತು ಸ್ಪೇಸ್ ಎಕ್ಸ್‌ನ ಸಿಇಒ ಎಲೋನ್ ಮಸ್ಕ್ ಇ-ಕಾಮರ್ಸ್ ದೈತ್ಯ ಅಮೆಜಾನ್‌ನ ಸಂಸ್ಥಾಪಕ ಜೆಫ್ ಬೇಜೊಸ್‌ರನ್ನೇ ಹಿಂದಿಕ್ಕಿ ಭಾರೀ ಸುದ್ದಿಯಾಗಿದ್ದರು. ಜಗತ್ತಿನ ನಂಬರ್ 1 ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಎಲೋನ್ ಮಸ್ಕ್ ತನ್ನ ಟೆಸ್ಲಾ ಕಂಪನಿಯ ಘಟಕವನ್ನು ಭಾರತದಲ್ಲಿ ಸ್ಥಾಪಿಸಲು ಮುಂದಾಗಿದ್ದಾರೆ.
ಟೆಸ್ಲಾ ಕಂಪನಿಯು ಭಾರತಕ್ಕೆ ಪ್ರವೇಶಿಸುತ್ತದೆ ಎಂದು ಕೇಳಿದ ತಕ್ಷಣ ಬಹುಶಃ ಇತರೆ ಎಲೆಕ್ಟ್ರಿಕ್ ಕಾರುಗಳ ತಯಾರಕರು ಚಿಂತೆಗೀಡಾಗಿರುವುದು ಸುಳ್ಳಲ್ಲ. ಏಕೆಂದರೆ ಸದ್ಯ ವಿಶ್ವದಲ್ಲಿ ಅಗ್ರ ಎಲೆಕ್ಟ್ರಿಕ್ ಕಾರುಗಳ ತಯಾರಕ ಟೆಸ್ಲಾ ಆಗಿದೆ.
ಬೆಂಗಳೂರಿಗೆ ಬಂದ ಎಲೋನ್ ಮಸ್ಕ್ 'ಟೆಸ್ಲಾ': ಮಾಯವಾದ ಯಡಿಯೂರಪ್ಪ ಟ್ವೀಟ್!

2016 ರಲ್ಲಿಯೇ ಭಾರತಕ್ಕೆ ಬರಲು ಯೋಜಿಸಲಾಗಿತ್ತು!
ಟೆಸ್ಲಾ ಈ ಹಿಂದೆ 2016ರಲ್ಲಿ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಪ್ರಯತ್ನಿಸಿತು. ಆದರೆ ಎಲೆಕ್ಟ್ರಿಕ್ ವಾಹನಗಳ ನೀತಿಯ ಅನಿಶ್ಚಿತತೆಯಿಂದಾಗಿ ಕಂಪನಿಯು ಕಾರುಗಳ ಬಿಡುಗಡೆಯನ್ನು ಮುಂದೂಡಿತು. ಆದರೆ ಈಗ ಮತ್ತೆ ನಾಲ್ಕು ವರ್ಷಗಳ ನಂತರ ಕಂಪನಿಯು ಭಾರತಕ್ಕೆ ಬರಲು ಸಜ್ಜಾಗಿದೆ.
ಟೆಸ್ಲಾ ಮಾಡೆಲ್ 3 ರ ಬುಕಿಂಗ್ ಮುಂದಿನ ತಿಂಗಳಿನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಎಲೆಕ್ಟ್ರಿಕ್ ಕಾರನ್ನು ಸಿಬಿಯು ವರ್ಗದ ಮೂಲಕ ದೇಶದಲ್ಲಿ ಪರಿಚಯಿಸಲಾಗುವುದು. ಇದರ ಅಡಿಯಲ್ಲಿ ದೇಶದಲ್ಲಿ ಆರಂಭಿಕವಾಗಿ 2500 ಘಟಕಗಳನ್ನು ತೆರೆಯಬಹುದು.

ಟೆಸ್ಲಾ ಕಾರುಗಳು ಏಕೆ ಫೇಮಸ್?
ಟೆಸ್ಲಾ ಕಾರುಗಳು ಒಮ್ಮೆ ಚಾರ್ಜ್ ಮಾಡಿದರೆ ಹೆಚ್ಚು ದೂರದವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ. ಆರಂಭದಲ್ಲಿ ಟೆಸ್ಲಾ ಕಂಪನಿಯು ಭಾರತದಲ್ಲೂ ಮೂರು ಮಾಡೆಲ್ ಕಾರ್‌ಗಳನ್ನು ಪರಿಚಯಿಸುವ ಸಾಧ್ಯತೆ ಇದೆ. ಪರ್ಫಾರ್ಮೆನ್ಸ್, ಲಾಂಗ್ ರೇಂಜ್ ಮತ್ತು ಸ್ಟ್ಯಾಂಡರ್ಡ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.
ಈ ಕಾರುಗಳು ರಿಯರ್ ವೀಲ್ ಡ್ರೈವ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಬ್ಯಾಟರಿ ಗಾತ್ರವು 50 kWh ನಿಂದ 75 kWh ವರೆಗೆ ಇರಲಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 381 ಕಿ.ಮೀ ನಿಂದ 580 ಕಿ.ಮೀವರೆಗೆ ಚಲಿಸುತ್ತದೆ.

ಟೆಸ್ಲಾ ಕಂಪನಿಯ ಷೇರುಗಳ ಬೆಲೆ ಏರಿಕೆ
ಕೋವಿಡ್-19 ಸಾಂಕ್ರಾಮಿಕದ ನಡುವೆ ಈ ವರ್ಷ ಟೆಸ್ಲಾ ಕಂಪನಿಯ ಷೇರುಗಳ ಬೆಲೆಯಲ್ಲಿ ಭಾರೀ ಏರಿಕೆಯನ್ನು ಕಂಡಿತು. ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾ ಕಂಪನಿಯ ಷೇರು ಬೆಲೆಯಲ್ಲಿ ಶೇಕಡಾ ನೂರಕ್ಕೂ ಹೆಚ್ಚು ಏರಿಕೆಗೊಂಡು, ಎಲೋನ್ ಮಸ್ಕ್‌ರವರು ಕಂಪನಿಯ ಮೌಲ್ಯ ಅಮೆಜಾನ್.ಕಾಮ್ ಇಂಕ್ ಅನ್ನು ಹಿಂದಿಕ್ಕಿದೆ.

ಎಲೋನ್ ಮಸ್ಕ್ ಆಸ್ತಿ ಎಷ್ಟು?
ಜೆಫ್ ಬೆಜೋಸ್‌ಗಿಂತ ಎಲೋನ್ ಮಸ್ಕ್ ರ ಆಸ್ತಿಯಲ್ಲಿ ಇತ್ತೀಚೆಗೆ 1.5 ಬಿಲಿಯನ್ ಡಾಲರ್ ಹೆಚ್ಚಳವಾಗಿದ್ದು, ಸದ್ಯ ಅವರ ಆಸ್ತಿಯು 195 ಬಿಲಿಯನ್ ಡಾಲರ್‌ಗಿಂತ ಹೆಚ್ಚಿದೆ.
2020ರ ಜನವರಿಯಲ್ಲಿ ಜಾಗತಿಕ ಸಿರಿವಂತರ ಪಟ್ಟಿಯಲ್ಲಿ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಕಂಪನಿ ಮುಖ್ಯಸ್ಥ ಎಲೋನ್ ಮಸ್ಕ್ ಅವರು 35ನೇ ಸ್ಥಾನದಲ್ಲಿದ್ದರು. ನಂತರದ ಒಂದು ವರ್ಷಗಳ ಅವಧಿಯಲ್ಲಿ ನೂರಾರು ಬಿಲಿಯನ್ ಡಾಲರ್ ಸಂಪಾದಿಸಿರುವ ಮಸ್ಕ್ ಇದೀಗ ಮೊದಲ ಸ್ಥಾನಕ್ಕೇರಿದ್ದಾರೆ. ಅಲ್ಲದೆ ವೇಗವಾಗಿ ಟಾಪ್ ಶ್ರೀಮಂತನಾದ ವ್ಯಕ್ತಿಯೆನಿಸಿಕೊಂಡಿದ್ದಾರೆ.

ತನ್ನದೇ ಬಾಹ್ಯಾಕಾಶ ಸಂಸ್ಥೆಯನ್ನು ಹೊಂದಿರುವ ಎಲೋನ್ ಮಸ್ಕ್
ಭಾರತದಲ್ಲಿ ರಾಕೆಟ್ ಉಡ್ಡಯನ ಹಾಗೂ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ಇಸ್ರೋ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಎಲೋನ್ ಮಸ್ಕ್ ರ ಸ್ಪೇಸ್ ಎಕ್ಸ್ ಅವರದ್ದೇ ಖಾಸಗಿ ಸಂಸ್ಥೆಯಾಗಿದೆ.
ಇದಕ್ಕೆ ಪ್ರತಿಸ್ಪರ್ಧಿಯಾಗಿ ಅಮೆಜಾನ್‌ನ ಜೆಫ್ ಬೇಜೋಸ್ ಕೂಡ ಬ್ಲೂ ಒರಿಜಿನ್ ಎಂಬ ರಾಕೆಟ್ ಉಡ್ಡಯನ ಹಾಗೂ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯನ್ನು ಹೊಂದಿದ್ದಾರೆ.