ಕರ್ನಾಟಕದ ಯಶಸ್ವಿ ಮಹಿಳಾ ಉದ್ಯಮಿಗಳ ಸಮಾವೇಶ
ಬೆಂಗಳೂರು, ಮಾರ್ಚ್ 1 : ರಾಜ್ಯದ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುವ ಆಶಯ ಹೊಂದಿರುವ 'ವುಮೆನ್ ಆಫ್ ವರ್ತ್- ಕರ್ನಾಟಕ' ಸಮಾವೇಶವು ನಗರದ ಲಲಿತ್ ಅಶೋಕ ಹೋಟೆಲಿನಲ್ಲಿ ಮಾರ್ಚ್ 2 ಮತ್ತು 3ರಂದು (ಶುಕ್ರವಾರ ಮತ್ತು ಶನಿವಾರ) ನಡೆಯಲಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಹಾರೋಹಳ್ಳಿ, ಇಮ್ಮಾವು, ಕುಡಿತಿನಿ ಮತ್ತು ಗಾಮನಗಟ್ಟಿ ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಾಪಿಸಲು ತೀರ್ಮಾನಿಸಿರುವ ಮಹಿಳಾ ಉದ್ಯಮಿಗಳ ಪಾರ್ಕ್‍ಗಳಿಗೆ ಶಂಕುಸ್ಥಾಪನೆ ಕೂಡ ನೆರವೇರಿಸಲಾಗುವುದು.
ಮಾರ್ಚ್ 2ರಂದು ಬೆಳಿಗ್ಗೆ 10 ಗಂಟೆಗೆ ಆರಂಭಗೊಳ್ಳಲಿರುವ ಈ ವಿಶಿಷ್ಟ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದು, ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಆರ್.ವಿ. ದೇಶಪಾಂಡೆ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ನಗರಾಭಿವೃದ್ಧಿ ಸಚಿವ ಆರ್.ರೋಷನ್ ಬೇಗ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಮಾರ್ಚ್ 3ರಂದು ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಚಿವರಾದ ಆರ್.ವಿ.ದೇಶಪಾಂಡೆ, ಸಣ್ಣ ಕೈಗಾರಿಕೆಗಳ ಸಚಿವೆ ಎಂ.ಸಿ. ಮೋಹನಕುಮಾರಿ, ಐಟಿಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಪಾಲ್ಗೊಳ್ಳಲಿದ್ದಾರೆ.
ಹೆಸರಾಂತ ಮಹಿಳಾ ಉದ್ಯಮಿಗಳಾದ ಉಮಾ ರೆಡ್ಡಿ (ವಿ ಕನೆಕ್ಟ್ ಇಂಡಿಯಾ ಐಎನ್‍ಟಿ ಸಮೂಹದ ಪ್ರವರ್ತಕ ನಿರ್ದೇಶಕರು), ಉಮಾ ಗೋಪಾಲನ್ (ಅಧ್ಯಕ್ಷರು, ಅವೇಕ್), ಲತಾ ಗಿರೀಶ್ (ಜಂಟಿ ಕಾರ್ಯದರ್ಶಿ, ಕಾಸಿಯಾ), ಗಾಯತ್ರಿ ಕೇಶವರಾವ್ (ಅಧ್ಯಕ್ಷರು, ವೈಬ್, ಮೈಸೂರು), ರೂಪಾ ಪಾರಣಿ (ಸಂಸ್ಥಾಪಕ ಅಧ್ಯಕ್ಷರು, ಕರ್ನಾಟಕ ಚಾಪ್ಟರ್, ಕೋವೆ), ಆರ್.ರಾಜಲಕ್ಷ್ಮಿ (ಅಧ್ಯಕ್ಷರು, ಇಮರ್ಜ್, ಬೆಂಗಳೂರು), ರತಿ ಶ್ರೀನಿವಾಸನ್ (ಅಧ್ಯಕ್ಷರು, ಮಹಿಳಾ ಸಮಿತಿ, ಕೆಸಿಸಿಐ, ಹುಬ್ಬಳ್ಳಿ) ಮತ್ತು ಜ್ಯೋತಿ ಕದಡಿ (ಅಧ್ಯಕ್ಷರು, ಕೆಎಲ್‍ಎಎಮ್‍ಪಿಎಸ್, ಕಲಬುರಗಿ) ಮುಂತಾದವರು ಸಮಾವೇಶದಲ್ಲಿ ಪಾಲ್ಗೊಳಲಿದ್ದಾರೆ.
ಜೊತೆಗೆ, ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.ವಿ. ಪ್ರಸಾದ್, ಸರಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಮತ್ತು ಕೈಗಾರಿಕಾಭಿವೃದ್ಧಿ ಆಯುಕ್ತ ಹಾಗೂ ನಿರ್ದೇಶಕ ದರ್ಪಣ್ ಜೈನ್ ಈ ಸಮಾವೇಶದಲ್ಲಿ ಉಪಸ್ಥಿತರರಿರುತ್ತಾರೆ.












Click it and Unblock the Notifications