ಯುನೈಟೈಡ್ ಸ್ಪಿರಿಟ್ಸ್ ಹೊಸ ಸಿಇಒ ಆಗಿ ಆಯ್ಕೆಯಾದ ಹಿನಾ ನಾಗರಾಜನ್ ಯಾರು?
ನವದೆಹಲಿ, ಡಿಸೆಂಬರ್ 11: ಭಾರತದ ಅತಿದೊಡ್ಡ ಲಿಕ್ಕರ್ ತಯಾರಕ ಯುನೈಟೆಡ್ ಸ್ಪಿರಿಟ್ಸ್ ಡಿಸೆಂಬರ್ 10 ರಂದು ತನ್ನ ಹೊಸ ಎಂಡಿ ಮತ್ತು ಸಿಇಒ ಆಗಿ ಹಿನಾ ನಾಗರಾಜನ್ ಆವರನ್ನು ಆಯ್ಕೆ ಮಾಡಿದೆ. ಈ ಮೂಲಕ ಹಿಂದಿನ ಎಂಡಿ ಆಗಿರುವ ಆನಂದ್ ಕೃಪಾಲು ಅವರ ಸ್ಥಾನವನ್ನು ಹಿನಾ ತುಂಬಲಿದ್ದಾರೆ.
ವಿಶೇಷ ಅಂದ್ರೆ ಯುನೈಟೆಡ್ ಸ್ಪಿರಿಟ್ಸ್‌ನಂತಹ ಬಹುದೊಡ್ಡ ಲಿಕ್ಕರ್ ಕಂಪನಿಯನ್ನು ಮುನ್ನೆಡೆಸಲಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಹಿನಾ ನಾಗರಾಜನ್ ಪಾತ್ರರಾಗಿದ್ದಾರೆ. ಜುಲೈ 1, 2021ರಂದು ಅಧಿಕಾರ ವಹಿಸಿಕೊಳ್ಳಲಿರುವ ಹಿನಾ ನಾಗರಾಜನ್ ಯಾರು, ಇಷ್ಟು ದಿನ ಎಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ, ಇವರನ್ನು ಏಕೆ ದೇಶದ ಬಹುದೊಡ್ಡ ಲಿಕ್ಕರ್ ಕಂಪನಿ ಸಿಇಒ ಆಗಿ ಆಯ್ಕೆ ಮಾಡಿದೆ ಎಂದು ಕುತೂಹಲ ಮೂಡುವುದು ಸಹಜ.

ಹಿನಾ ನಾಗರಾಜನ್ ಪ್ರಸ್ತುತ ಎಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ?
ಅಹಮದಾಬಾದ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವೀಧರರಾದ ಹಿನಾ ನಾಗರಾಜನ್ ಪ್ರಸ್ತುತ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಮೂಲ ಕಂಪನಿಯಾದ ಡಿಯಾಗೋದಲ್ಲಿ ಆಫ್ರಿಕಾ ಪ್ರಾದೇಶಿಕ ಮಾರುಕಟ್ಟೆಗಳ (ಎಆರ್ಎಂ) ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
''ಹಿನಾ ನಾಗರಾಜನ್ ಯುಎಸ್‌ಎಲ್‌ನ ಎಂಡಿ ಮತ್ತು ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಮತ್ತು ಡಿಯಾಗೊ ಕಾರ್ಯಕಾರಿ ಸಮಿತಿಯನ್ನೂ ಸೇರಿಕೊಳ್ಳಲಿದ್ದಾರೆ. ಜೊತೆಗೆ ಡಿಯಾಗೋ ಯೂರೋಪ್ ಮತ್ತು ಭಾರತದ ಅಧ್ಯಕ್ಷ ಜಾನ್ ಕೆನಡಿಗೆ ವರದಿ ಮಾಡಿಕೊಳ್ಳುತ್ತಾರೆ'' ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಯುನೈಟೆಡ್ ಸ್ಪಿರಿಟ್ಸ್‌ಗೆ ಹಿನಾ ಎಂಟ್ರಿ ಹೇಗಿತ್ತು?
ಕಂಪನಿಯ ಹೇಳಿಕೆ ಪ್ರಕಾರ '' 2018ರ ಬೇಸಿಗೆಯಲ್ಲಿ ಹಿನಾರವರು ಡಿಯಾಗೋ ಕಂಪನಿ ಸೇರಿದಾಗಿನಿಂದ ಘಾನಾ, ಕ್ಯಾಮರೂನ್, ಇಥಿಯೋಪಿಯಾ, ಹಿಂದೂ ಮಹಾಸಾಗರ, ಅಂಗೋಲಾ ಮತ್ತು ಇತರ ಹಲವಾರು ದೇಶಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಹೊಂದಿರುವ ಡಿಯಾಗೋದ ಆಫ್ರಿಕಾ ಪ್ರಾದೇಶಿಕ ಮಾರುಕಟ್ಟೆಗಳನ್ನು (ಎಆರ್ಎಂ) ಅನ್ನು ಮುನ್ನೆಡೆಸಿದ್ದಾರೆ. ಹಿನಾ ಅವರ ನಾಯಕತ್ವದಲ್ಲಿ ಡಿಯಾಗೋ ಗಮನಾರ್ಹ ಬೆಳವಣಿಗೆ ಕಂಡಿದೆ'' ಎಂದು ಕಂಪನಿ ತಿಳಿಸಿದೆ.
ಹಿನಾ ನಾಗರಾಜನ್ ಕಳೆದ 30 ವರ್ಷಗಳ ಕಾಲ ಸಿಪಿಜಿ ವ್ಯವಹಾರಗಳಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದು, ರೆಕ್ಕಿಟ್ ಬೆನ್‌ಕಿಸರ್ (ಆರ್‌ಬಿ), ನೆಸ್ಲೆ ಇಂಡಿಯಾ ಮತ್ತು ಮೆರಿಕೊ ಇಂಡಿಯಾದಲ್ಲಿ ಹಿರಿಯ ಮಾರ್ಕೆಟಿಂಗ್ ಮತ್ತು ಜನರಲ್ ಮ್ಯಾನೇಜ್‌ಮೆಂಟ್ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಹಿನಾ ನಾಗರಾಜನ್ ಮೂಲತಃ ಎಲ್ಲಿಯವರು?
ದೆಹಲಿಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಹಿನಾ ನಾಗರಾಜನ್ ಅವರ ತಂದೆ ಮೂಲತಃ ಪಾಕಿಸ್ತಾನದವರು. ಭಾರತ-ಪಾಕಿಸ್ತಾನ ಬೇರ್ಪಟ್ಟಾಗ ಹಿನಾ ನಾಗರಾಜನ್ ತಂದೆ ರೈಲಿನ ಮೂಲಕ ದೆಹಲಿಗೆ ಆಗಮಿಸಿದರು. ದೆಹಲಿಯಲ್ಲಿ ಕಷ್ಟ ಪಟ್ಟು ದುಡಿದು ಜೀವನ ದೂಡಿದ ಹಿನಾ ಕುಟುಂಬವು ನಂತರದಲ್ಲಿ ಉತ್ತಮ ಹಂತಕ್ಕೆ ತಲುಪಿತು.
ತನ್ನ ತಾಯಿಯೇ ತನಗೆ ಪ್ರೇರಣೆ ಎನ್ನುವ ಹಿನಾ ನಾಗರಾಜನ್ ಬಿಕಾಂ ಮುಗಿಸಿ ನಂತರದಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಪದವಿ ಸಹ ಪಡೆದರು. ಇಬ್ಬರು ಮಕ್ಕಳ ತಾಯಿಯಾಗಿರುವ ಹಿನಾ ನಾಗರಾಜನ್ ತಮ್ಮ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಕ್ಯಾನ್ಸರ್‌ನಿಂದ ಬಳಲುತ್ತಿರುವ ತಮ್ಮ ತಾಯಿಯನ್ನು ನೋಡಿಕೊಳ್ಳಲು ಭಾರತದಲ್ಲೇ ಉಳಿದರು.

ಇಷ್ಟು ದೊಡ್ಡ ಮಟ್ಟಿನ ಹುದ್ದೆಗೇರುತ್ತೇನೆಂದು ಯಾವತ್ತೂ ಅಂದುಕೊಂಡಿರಲಿಲ್ಲ!
ಹಿನಾ ನಾಗರಾಜನ್ ಹೇಳುವ ಪ್ರಕಾರ ಇಷ್ಟು ದೊಡ್ಡ ಮಟ್ಟಿಗೆ ಕಾರ್ಪೋರೇಟ್ ಜಗತ್ತಿನಲ್ಲಿ ಬೆಳೆದು ನಿಲ್ಲುತ್ತೇನೆ ಎಂದು ಸ್ವತಃ ಅವರೇ ಅಂದುಕೊಂಡಿರಲಿಲ್ಲ. ಅವರು ಕಾರ್ಪೋರೇಟ್ ಜಗತ್ತನ್ನು ಪ್ರವೇಶಿಸಿದ ಕೆಲವೇ ಕೆಲವು ಮಹಿಳೆಯರಿದ್ದರು, ನಿಜವಾದ ಸವಾಲುಗಳು ಆಗಿನಿಂದ ಪ್ರಾರಂಭವಾಯಿತು ಎಂದಿದ್ದಾರೆ.
ನನ್ನ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮವು ನನ್ನನ್ನು ಈ ಮಟ್ಟಿಗೆ ತಂದು ನಿಲ್ಲಿಸಿದ ಎಂದು ಹೇಳುವ ಹಿನಾ ನಾಗರಾಜನ್ ಈಗ ದೇಶದ ಅತಿದೊಡ್ಡ ಲಿಕ್ಕರ್ ಕಂಪನಿಯನ್ನು ಮುನ್ನೆಡೆಸುವ ಹಂತಕ್ಕೆ ಬಂದು ತಲುಪಿದ್ದಾರೆ. ಜುಲೈ 1, 2021ರಿಂದ ಆನಂದ್ ಕೃಪಾಲ್‌ರಿಂದ ತೆರವಾಗುವ ಎಂಡಿ ಮತ್ತು ಸಿಇಒ ಸ್ಥಾನವನ್ನು ತುಂಬಲಿದ್ದಾರೆ. ಏಪ್ರಿಲ್ 2021 ರಲ್ಲಿ ಹಿನಾ ಬೆಂಗಳೂರಿಗೆ ತೆರಳಲಿದ್ದು, ಕೃಪಾಲ್‌ರಿಂದ ತಮ್ಮ ಮುಂದಿನ ಕಾರ್ಯದ ಮಾಹಿತಿಯನ್ನು ಪಡೆದು ಅಧಿಕಾರ ಸ್ವೀಕರಿಸಲಿದ್ದಾರೆ.












Click it and Unblock the Notifications