ಬಳಕೆದಾರರ ಸಂಖ್ಯೆ: ಜಿಯೋ, ಬಿಎಸ್ಎನ್ಎಲ್ ಏರಿಕೆ, ಐಡಿಯಾ, ಏರ್ಟೆಲ್ ಇಳಿಕೆ
ನವದೆಹಲಿ, ನವೆಂಬರ್ 21 : ದೇಶ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳಾದ ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಕಂಪನಿಗಳು ಈ ವರ್ಷದ ಸೆಪ್ಟೆಂಬರ್ ತಿಂಗಳೊಂದರಲ್ಲಿಯೇ 49 ಲಕ್ಷ ಬಳಕೆದಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇದೇ ಸಮಯದಲ್ಲಿ ಟೆಲಿಕಾಂ ಮಾರುಕಟ್ಟೆಯಲ್ಲಿ ಮಿಂಚಿನ ವೇಗದಲ್ಲಿ ಸಾಗುತ್ತಿರುವ ರಿಲಯನ್ಸ್ ಜಿಯೋ ನೆಟ್‌ವರ್ಕ್‌ಗೆ 69.83 ಲಕ್ಷ ಹೊಸ ಬಳಕೆದಾರರು ಸೇರಿದ್ದಾರೆ ಎಂದು ವಲಯ ನಿಯಂತ್ರಕ ಟ್ರಾಯ್‌ನ ಮಾಹಿತಿ ನೀಡಿದೆ.
ಭಾರತದಲ್ಲಿ ಆಗಸ್ಟ್ ಅಂತ್ಯದ ವೇಳೆಗೆ ಒಟ್ಟು 117.1 ಕೋಟಿಯಿದ್ದ ವೈರ್‌ಲೆಸ್ ಚಂದಾದಾರರ ಸಂಖ್ಯೆ (ಜಿಎಸ್‌ಎಂ, ಸಿಡಿಎಂಎ ಮತ್ತು ಎಲ್‌ಟಿಇ) 2019 ರ ಸೆಪ್ಟೆಂಬರ್ ಅಂತ್ಯದ ವೇಳೆಗೆ 117.37 ಕೋಟಿಗೆ ಏರಿಕೆಯಾಗಿದ್ದು, ಇದು ಮಾಸಿಕ ಶೇಕಡಾ 0.23 ರಷ್ಟು ಬೆಳವಣಿಗೆಯಾಗಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ತಿಳಿಸಿದೆ.
ನಗರ ಪ್ರದೇಶಗಳಲ್ಲಿ ವೈರ್‌ಲೆಸ್ ಚಂದಾದಾರಿಕೆ ಸೆಪ್ಟೆಂಬರ್ ಅಂತ್ಯದ ವೇಳೆಗೆ 65.91 ಕೋಟಿಗೆ ಇಳಿದಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ 51.45 ಕೋಟಿಗೆ ಏರಿಕೆಯಾಗಿದೆ ಎಂದು ಟ್ರಾಯ್ ಹೇಳಿದೆ.
ಭಾರತದಲ್ಲಿ ವೈರ್‌ಲೆಸ್ ದೂರವಾಣಿ ದಟ್ಟಣೆ ಆಗಸ್ಟ್ ಅಂತ್ಯದಲ್ಲಿ 88.77 ರಷ್ಟು ಇದ್ದಂತಹದ್ದು, ಸೆಪ್ಟೆಂಬರ್ ಅಂತ್ಯದ ವೇಳೆಗೆ 88.90 ಕ್ಕೆ ಏರಿದೆ ಎಂದು ಟ್ರಾಯ್ ತಿಳಿಸಿದೆ.

ಸೆಪ್ಟೆಂಬರ್ ನಲ್ಲಿ ಭಾರ್ತಿ ಏರ್ ಟೆಲ್ ಸಂಖ್ಯೆ
ಟ್ರಾಯ್ ಮಾಹಿತಿಯ ಪ್ರಕಾರ, ಭಾರ್ತಿ ಏರ್‌ಟೆಲ್ ಸೆಪ್ಟೆಂಬರ್ ನಲ್ಲಿ 23.8 ಲಕ್ಷ ಬಳಕೆದಾರರನ್ನು ಕಳೆದುಕೊಂಡು, ಒಟ್ಟು 32.55 ಕೋಟಿ ಬಳಕೆದಾರರನ್ನು ಹೊಂದಿದೆ. ಅಂತೆಯೇ, ವೊಡಾಫೋನ್ ಐಡಿಯಾ ಸೆಪ್ಟೆಂಬರ್ ತಿಂಗಳಲ್ಲಿ 25.7 ಲಕ್ಷ ಬಳಕೆದಾರರನ್ನು ಕಳೆದುಕೊಂಡು ತನ್ನ ಒಟ್ಟು ಬಳಕೆದಾರರ ಸಂಖ್ಯೆಯನ್ನು 37.24 ಕೋಟಿಗೆ ತಲುಪಿದೆ.

ರಿಲಯನ್ಸ್ ಜಿಯೋ ಸಂಖ್ಯೆ
ಇದೇ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ಸೆಪ್ಟೆಂಬರ್ ತಿಂಗಳನಲ್ಲಿ 69.83 ಲಕ್ಷ ಬಳಕೆದಾರರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದೆ, ಈ ಮೂಲಕ ತನ್ನ ಒಟ್ಟು ಬಳಕೆದಾರರ ಸಂಖ್ಯೆಯನ್ನು 35.52 ಕೋಟಿಗೆ ಏರಿಸಿಕೊಂಡಿದೆ.

ವೋಡಾಫೋನ್ ಐಡಿಯಾ
2019 ರ ಸೆಪ್ಟೆಂಬರ್ 30ರ ಹೊತ್ತಿಗೆ, ವೊಡಾಫೋನ್ ಐಡಿಯಾ, ಮಾರುಕಟ್ಟೆಯಲ್ಲಿ ಶೇ 31.73 ರಷ್ಟು ಚಂದಾದಾರರ ಪಾಲನ್ನು ಹೊಂದಿದ್ದರೆ, ರಿಲಯನ್ಸ್ ಜಿಯೋ ಶೇ 30.26 ರಷ್ಟು ಮತ್ತು ಭಾರ್ತಿ ಏರ್‌ಟೆಲ್ ಶೇ 27.74 ರಷ್ಟನ್ನು ಹೊಂದಿದೆ.

ಎಂಟಿಎನ್ಎಲ್, ಬಿಎಸ್ಎನ್ಎಲ್ ಸಂಖ್ಯೆ
ಸರ್ಕಾರಿ ಸ್ವಾಮ್ಯದ ಎಂಟಿಎನ್ಎಲ್ 8,717 ಬಳಕೆದಾರರನ್ನು ಕಳೆದುಕೊಂಡರೆ (33.93 ಲಕ್ಷ ಬಳಕೆದಾರರ ಸಂಖ್ಯೆ), ಬಿಎಸ್ಎನ್ಎಲ್ 7.37 ಲಕ್ಷ ಬಳಕೆದಾರರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದೆ ಮತ್ತು ಅದರ ಒಟ್ಟು ಬಳಕೆದಾರರ ಸಂಖ್ಯೆ 11.69 ಕೋಟಿ ತಲುಪಿದೆ.












Click it and Unblock the Notifications